ಡಾಂಬುಲಾ: ಕಳೆದ ಪಂದ್ಯದಲ್ಲಿ ಲಂಕಾ (Srilanka) ಆಟಗಾರರು ಮೈದಾನದಲ್ಲಿ “ಇದು ಐಪಿಎಲ್ ಅಲ್ಲ, ಮನೆಗೆ ಹೋಗು” ಎಂದು ಸ್ಲೆಡ್ಜಿಂಗ್ ಮಾಡಿದ್ದಕ್ಕೆ ಭಾರತ ‘ಎ’ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ(Vaibhav Suryavanshi) ಬ್ಯಾಟ್ ಮೂಲಕವೇ ಸಿಡಿಲಬ್ಬರದ ಪ್ರತ್ಯುತ್ತರ ನೀಡಿದ್ದಾರೆ.
ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಲಂಕಾ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಸೂರ್ಯವಂಶಿ, ಮೈದಾನದ ಮೂಲೆ ಮೂಲೆಗೂ ಸಿಕ್ಸರ್-ಬೌಂಡರಿಗಳ ಮಳೆ ಹರಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಭಾರತಕ್ಕೆ ವೈಭವ್ ಸೂರ್ಯವಂಶಿ ಅಕ್ಷರಶಃ ಬಿರುಗಾಳಿಯ ಆರಂಭ ನೀಡಿದರು. ಕೇವಲ 29 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿ ಹಾಗೂ ಭರ್ಜರಿ 8 ಸಿಕ್ಸರ್‌ಗಳ ನೆರವಿನಿಂದ ಬರೋಬ್ಬರಿ 94 ರನ್ ಚಚ್ಚಿ ಶತಕದ ಅಂಚಿನಲ್ಲಿ ಔಟಾದರು.
ತಮ್ಮ ಇನಿಂಗ್ಸ್‌ನ ಆರಂಭದಲ್ಲೇ ಅಬ್ಬರಿಸಿದ ಸೂರ್ಯವಂಶಿ, ಕೇವಲ 11 ಎಸೆತಗಳಲ್ಲಿ (5 ಬೌಂಡರಿ, 5 ಸಿಕ್ಸರ್) ಅರ್ಧಶತಕ ಪೂರೈಸಿ ವಿಶ್ವದಾಖಲೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ಅತಿ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರವಾದರು. ಈ ಹಿಂದೆ 2005 ರಲ್ಲಿ ಶ್ರೀಲಂಕಾದಲ್ಲಿ ನಡೆದ ದೇಶೀಯ ಲಿಸ್ಟ್ ಎ ಪಂದ್ಯದಲ್ಲಿ ಕೌಶಲ್ಯ ವೀರರತ್ನೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
ಅರ್ಧಶತಕದ ನಂತರದ 18 ಎಸೆತಗಳಲ್ಲಿ 44 ರನ್‌ಗಳನ್ನು ವೈಭವ್ ಅವರು ಚಚ್ಚಿದ್ದು ಲಂಕಾ ಬೌಲರ್‌ಗಳನ್ನು ಅಸಹಾಯಕರನ್ನಾಗಿ ಮಾಡಿತು. ಇದನ್ನೂ ಓದಿ: ಕಿಚಾಯಿಸಿದ ಲಂಕಾ ಆಟಗಾರನ ಮೇಲೆ ಮುಗಿಬಿದ್ದ ವೈಭವ್ – ಮೈದಾನದಲ್ಲೇ ತಳ್ಳಾಟ, ಹೈಡ್ರಾಮಾ!
Vaibhav Sooryavanshi says ‘Good Morning’ 💥
Watch Sri Lanka ‘A’ vs India ‘A’, LIVE NOW on Sony Sports Network TV channels & Sony LIV. 📺#SonySportsNetwork #SonyLIV #TalentTVCup pic.twitter.com/e5PDd6NNPd
— Sony Sports Network (@SonySportsNetwk) June 21, 2026
ಕಳೆದ ಪಂದ್ಯದ ಕೋಪವನ್ನು ಮೈದಾನದಲ್ಲಿ ತೀರಿಸಿಕೊಂಡ ವೈಭವ್, ಲಂಕಾದ ಪ್ರಮುಖ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಪಂದ್ಯದ 4ನೇ ಓವರ್ ಎಸೆದ ಸಮುದಿತಾ ಬೌಲಿಂಗ್‌ನಲ್ಲಿ 20 ರನ್ ಲೂಟಿ ಮಾಡಿದರೆ, 7ನೇ ಓವರ್ ಎಸೆದ ಕುಗಥಾಸ್ ಮಥುಲನ್ ಓವರ್‌ನಲ್ಲಿ 16 ರನ್ ಚಚ್ಚಿ ಮೈದಾನದಲ್ಲಿ ಅಕ್ಷರಶಃ ಬಿರುಗಾಳಿ ಎಬ್ಬಿಸಿದರು.
ವೈಭವ್ ಸೂರ್ಯವಂಶಿ ಅವರಿಗೆ ಮತ್ತೊಬ್ಬ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಭರ್ಜರಿ ಸಾಥ್ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ 53 ಎಸೆತಗಳಲ್ಲಿ 132 ರನ್‌ಗಳ ಬೃಹತ್ ಜೊತೆಯಾಟ ಆಡಿತು. ಈ ಸ್ಫೋಟಕ ಮೊತ್ತದಲ್ಲಿ ಸೂರ್ಯವಂಶಿ ಸಿಂಹಪಾಲು (94 ರನ್) ಹೊಂದಿದ್ದರೆ, ಪ್ರಿಯಾಂಶ್ ಆರ್ಯ 24 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಂತೆ 35 ರನ್ ಬಾರಿಸಿ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಕಳೆದ ಪಂದ್ಯದಲ್ಲಿ ಕೆಣಕಿದ್ದ ಲಂಕಾ ಪಡೆಗೆ ಫೈನಲ್‌ನಲ್ಲೇ ಭಾರತದ ಯುವ ಬ್ಯಾಟರ್ ಸೂರ್ಯವಂಶಿ ಬ್ಯಾಟಿಂಗ್ ಮೂಲಕವೇ ಮರೆಯಲಾಗದ ಪಾಠ ಕಲಿಸಿದ್ದಾರೆ.
