ಬಡತನದಿಂದ ಬಳಲುತ್ತಿರುವ ಪಾಕ್‌ನ ಜನ ಚೀನಾದ ಮಾನವ ಕಳ್ಳಸಾಗಣಿಕೆದಾರರ ಬಣ್ಣದ ಮಾತುಗಳಿಗೆ ಮಾರು ಹೋಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗೆ ಪಾಕ್‌ನ ಬಡತನವನ್ನೇ ಬಂಡವಾಳ ಮಾಡಿಕೊಂಡ ವಂಚಕರು ಮದುವೆ ಹೆಸರಲ್ಲಿ ವಂಚಿಸಿ ಪಾಕಿಸ್ತಾನಿ ಯುವತಿಯರನ್ನು ಚೀನಾಕ್ಕೆ ಕಳ್ಳಸಾಗಣೆ ಮಾಡುತ್ತಿದ್ದಾರೆ. ಕಳ್ಳಸಾಗಣಿಕೆ ಹೇಗೆ ನಡೆಯುತ್ತದೆ? ಅದಕ್ಕೆ ಕಾರಣವೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಪಾಕ್‌ನ ಬಡತನವೇ ಬಂಡವಾಳ
ಪಾಕಿಸ್ತಾನದ ಹಲವೆಡೆ ಕಿತ್ತು ತಿನ್ನುವ ಬಡತನವಿದೆ. ಇದೇ ಚೀನಾದ ವಂಚಕರ ಬಂಡವಾಳವಾಗಿಸಿಕೊಂಡು ಹಣದ ಆಮೀಷವೊಡ್ಡಿ ಅಲ್ಲಿನ ಯುವತಿಯರನ್ನು ಮದುವೆಯಾಗುತ್ತಿದ್ದಾರೆ. ಯುವತಿಯರ ಕುಟುಂಬ ತಮ್ಮ ಹೆಣ್ಣು ಮಕ್ಕಳಿಗೆ ಉತ್ತಮ ಜೀವನ ದೊರೆಯಲಿದೆ ಎಂಬ ಭರವಸೆಯಿಂದ ದಲ್ಲಾಳಿಗಳ ಆಮಿಷಕ್ಕೆ ಒಳಗಾಗುತ್ತಿದ್ದಾರೆ. ಚೀನಾದ ಯುವಕರಿಗೆ ಹೆಣ್ಣುಮಕ್ಕಳ ಮದುವೆ ಮಾಡಿದ ಬಳಿಕ ಸಾವಿರಾರು ಡಾಲರ್ ಹಣವನ್ನು ಯುವತಿಯರ ಕುಟುಂಬ ಪಡೆಯುತ್ತಿವೆ. ಇದು ಉತ್ತಮ ಜೀವನದ ಬದಲು ನರಕವನ್ನು ಸೃಷ್ಟಿಗೆ ಕಾರಣವಾಗುತ್ತಿದೆ. ವಿಶೇಷವಾಗಿ ಬಡ ಕ್ರಿಶ್ಚಿಯನ್ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಈ ವಂಚನೆಗೆ ಒಳಗಾಗುತ್ತಿದ್ದಾರೆ.
ಚೀನಾಕ್ಕೆ ಪಾಕ್ ಬೆಡಗಿಯರ ಮದುವೆ
ಚೀನಾದ ತೀವ್ರ ಲಿಂಗ ಅಸಮತೋಲನತೆಯಿಂದ ಅಲ್ಲಿ ಹೆಣ್ಣುಗಳು ಸಿಗದೇ ಪಾಕ್‌ನ ಹೆಣ್ಣುಗಳನ್ನು ಹಣದ ಆಮಿಷ ತೋರಿಸಿ ಚೀನಾದ ಜನ ಮದುವೆ ಆಗುತ್ತಿದ್ದಾರೆ. ಈ ಮಹಿಳೆಯರಲ್ಲಿ ಅನೇಕರು ಕ್ರೂರ ಶೋಷಣೆಗೆ ಒಳಗಾಗುತ್ತಿದ್ದಾರೆ. ಅವರ ಮೇಲಾಗುತ್ತಿರುವ ದೌರ್ಜನ್ಯವನ್ನು ವಿವರಿಸಲು ಮಾನವ ಹಕ್ಕುಗಳ ಸಂಸ್ಥೆಗಳು ಮತ್ತು ಸುದ್ದಿ ಮಾಧ್ಯಮಗಳು “ಲೈಂಗಿಕ ಗುಲಾಮರು” ಎಂಬ ಪದ ಬಳಸಿ ವರದಿ ಮಾಡಿವೆ. ಅಲ್ಲಿಂದ ತಪ್ಪಿಸಿಕೊಂಡು ಪಾಕಿಸ್ತಾನಕ್ಕೆ ವಾಪಸ್ ಆದ ಮಹಿಳೆಯರು ಚಿತ್ರಹಿಂಸೆ ಮತ್ತು ಗುಲಾಮಗಿರಿಯ ಭಯಾನಕ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ.
ಪಾಕ್ ವಧುಗಳ ಮಾರುಕಟ್ಟೆ ಆಗಿದ್ದು ಹೇಗೆ?
ಚೀನಾದಲ್ಲಿ ಲಿಂಗ ಅಸಮತೋಲನ: ದಶಕಗಳಿಂದ ಒಂದು ಮಗು ನೀತಿ ಮತ್ತು ಲಿಂಗ ಆಯ್ಕೆ ಮಾಡಿ ಗರ್ಭಪಾತ ಮಾಡಿಸಿದ ಪರಿಣಾಮ ಚೀನಾದಲ್ಲಿ ಮಹಿಳೆಯರಿಗಿಂತ ಸುಮಾರು 30 ರಿಂದ 40 ಮಿಲಿಯನ್ ಪುರುಷರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಯಿತು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮದುವೆಗಾಗಿ ಹೆಣ್ಣು ಹುಡುಕಲು ಹೆಣಗಾಡುತ್ತಿದ್ದಾರೆ. ಇದು ವಿದೇಶಿ ವಧುಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸುತ್ತಿದೆ.
ಸಂಘಟಿತ ಕಳ್ಳಸಾಗಣೆ ಜಾಲಗಳು: ಚೀನೀ ಮತ್ತು ಪಾಕಿಸ್ತಾನಿ ಮಧ್ಯವರ್ತಿಗಳನ್ನು ಒಳಗೊಂಡ ಕ್ರಿಮಿನಲ್ ಗ್ಯಾಂಗ್‌ಗಳು, ಮತ್ತು ಕೆಲವು ಸಂದರ್ಭಗಳಲ್ಲಿ, ಭ್ರಷ್ಟ ಸ್ಥಳೀಯ ಕ್ರಿಶ್ಚಿಯನ್ ಪಾದ್ರಿಗಳು ಮತ್ತು ಮುಸ್ಲಿಂ ಧರ್ಮಗುರುಗಳು, ಈ ಮೋಸದ ವಿವಾಹಗಳಲ್ಲಿ ಪಾಲುದಾರರಾಗಿದ್ದಾರೆ. ಅವರು ನಕಲಿ ವಿವಾಹ ಪ್ರಮಾಣಪತ್ರಗಳು ಮತ್ತು ವೀಸಾಗಳನ್ನು ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ.ಇನ್ನೂ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಗಳಲ್ಲಿ ಕೆಲಸ ಮಾಡುವ ಎಂಜಿನಿಯರ್‌ಗಳಂತೆ ನಟಿಸಿ ಚೀನಾ ಯುವಕರು ಮದುವೆಯಾಗುತ್ತಿದ್ದಾರೆ.
ಮೇಲ್ವಿಚಾರಣೆ ಕೊರತೆ: CPEC ಮತ್ತು ವೀಸಾ-ಆನ್-ಆಗಮನ ನೀತಿಗಳಿಂದ ಪಾಕಿಸ್ತಾನಕ್ಕೆ ಚೀನೀ ಪ್ರಜೆಗಳ ಒಳಹರಿವು ಹೆಚ್ಚಾಗಿದೆ. ಇದು ಕಳ್ಳಸಾಗಣೆದಾರರಿಗೆ ಅನುಕೂಲವಾಗಿದೆ.
ಲೈಂಗಿಕ ಗುಲಾಮರಾಗುತ್ತಿರೋ ಪಾಕ್ ಯುವತಿಯರು
ಪಾಕ್‌ನಿಂದ ವಂಚನೆಯ ಮದುವೆಯ ಜಾಲಕ್ಕೆ ಸಿಲುಕಿರುವ ಮಹಿಳೆಯರು ಕ್ರೂರ ಶೋಷಣೆಗೊಳಗಾಗುತ್ತಿದ್ದಾರೆ. ಮಾನವ ಹಕ್ಕುಗಳ ಸಂಸ್ಥೆಗಳು ಈ ಕ್ರೌರ್ಯವನ್ನು ವಿವರಿಸಲು ʻಲೈಂಗಿಕ ಗುಲಾಮರುʼ ಎಂಬ ಪದವನ್ನು ಬಳಸಿವೆ.
ಮದುವೆಯ ಬಳಿಕ ಗಂಡ ಶ್ರೀಮಂತ ಉದ್ಯಮಿಯಲ್ಲ ಎಂದು ಅರಿವಾಗುವ ಹೊತ್ತಿಗೆ ಆ ಮಹಿಳೆಯರು ಸಂಕಷ್ಟದ ಕೂಪಕ್ಕೆ ಸಿಲುಕಿರುತ್ತಾರೆ. ಆಗ ಅವರು ಒಂಟಿಯಾಗಿರುತ್ತಾರೆ. ಅಲ್ಲಿನ ಭಾಷೆಯನ್ನೂ ಸಹ ಮಾತನಾಡಲು ಸಾಧ್ಯವಾಗದೇ ಪರದಾಡುತ್ತಾರೆ. ಅವರಿಗೆ ಯಾವುದೇ ಸಾಮಾಜಿಕ ಬೆಂಬಲವೂ ಈ ವೇಳೆ ಸಿಗುವುದಿಲ್ಲ. ಈ ರೀತಿ ಮದುವೆಯಾದ ಅನೇಕ ಮಹಿಳೆಯರು ದೈಹಿಕವಾಗಿ ಮತ್ತು ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾಗಿದ್ದಾರೆ. ಕೆಲವರನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಲಾಗುತ್ತದೆ. ಅವರ ಗಂಡ, ಆತನ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ ಎಂದು ಸಹ ವರದಿಯಾಗಿದೆ.
ಅಕ್ರಮ ಬಂಧನ
ಕಳ್ಳಸಾಗಣೆದಾರರು ಹೆಚ್ಚಾಗಿ ಮಹಿಳೆಯರ ದಾಖಲೆಗಳನ್ನು ಕಸಿದುಕೊಂಡು ಬಂಧಿಸುತ್ತಾರೆ. ಇದರಿಂದಾಗಿ ಅವರಿಗೆ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಅವರ ಬೇಡಿಕೆಗಳನ್ನು ನಿರಾಕರಿಸಿದರೆ ಹಿಂಸೆ ನೀಡಲಾಗುತ್ತದೆ.
ಅಂಗಾಂಗ ಕಳವು ಆರೋಪ: ತನಿಖೆಗಳ ಪ್ರಕಾರ ವೇಶ್ಯಾವಾಟಿಕೆಗೆ ಸೂಕ್ತವಲ್ಲದ ಮಹಿಳೆಯರ ಅಂಗಗಳನ್ನು ತೆಗೆದು ಮಾರಾಟ ಮಾಡಲಾಗುತ್ತಿದೆ. ಈ ಆರೋಪವನ್ನು ಚೀನಾ ಬಲವಾಗಿ ನಿರಾಕರಿಸಿದೆ. ಈ ಬಗ್ಗೆ ತನಿಖೆ ನಡೆದಿದ್ದು, ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ವರದಿಯಾಗಿದೆ. ತಪ್ಪಿಸಿಕೊಂಡು ಪಾಕಿಸ್ತಾನಕ್ಕೆ ಮರಳಿದ ಅನೇಕ ಮಹಿಳೆಯರು ಚಿತ್ರಹಿಂಸೆ ಮತ್ತು ಗುಲಾಮಗಿರಿಯ ಭಯಾನಕ ಕಣ್ಣೀರಿನ ಕಥೆಗಳನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.




