ಚಿರಂಜೀವಿ ಚಿತ್ರದಲ್ಲಿ ಯಾಕೆ ನಟಿಸಲಿಲ್ಲ?: ಪೃಥ್ವಿರಾಜ್ ಪ್ರತಿಕ್ರಿಯೆ

Public TV
2 Min Read
Prithviraj Sukumaran 1

ಅಂದುಕೊಂಡಂತೆ ಆಗಿದ್ದರೆ, ತೆಲುಗಿನ ಹೆಸರಾಂತ ನಟ ಚಿರಂಜೀವಿ (Chiranjeevi) ಅವರ ಎರಡು ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸಬೇಕಿತ್ತು. ಆದರೆ, ಅವರು ನಟಿಸಲಿಲ್ಲ. ಅದಕ್ಕೆ ನಾನಾ ರೀತಿಯ ಅರ್ಥಗಳನ್ನು ಕಲ್ಪಿಸಲಾಗಿತ್ತು. ಇದೀಗ ಸ್ವತಃ ಪೃಥ್ವಿರಾಜ್  ಅವರೇ ಉತ್ತರ ಕೊಟ್ಟಿದ್ದಾರೆ. ತಾವು ಆ ಎರಡು ಸಿನಿಮಾಗಳಲ್ಲಿ ನಟಿಸದೇ ಇರುವ ಕಾರಣ ಆಡು ಜೀವತಂ ಸಿನಿಮಾ ಎಂದಿದ್ದಾರೆ. ನಟಿಸಲು ಅವಕಾಶ ಸಿಕ್ಕಾಗೆಲ್ಲ ಈ ಸಿನಿಮಾದಲ್ಲಿ ಅವರು ಬ್ಯುಸಿ ಇದ್ದೆ ಎಂದಿದ್ದಾರೆ.

Aadujeevitham 1

ಈ ನಡುವೆ ನಿರ್ದೇಶಕ ಬ್ಲೆಸ್ಸಿ ಅವರ ನಿರ್ದೇಶನದಲ್ಲಿ ಪೃಥ್ವಿರಾಜ್ ಸುಕುಮಾರನ್ (Prithviraj) ನಾಯಕರಾಗಿ ನಟಿಸಿರುವ  ಬಹು ನಿರೀಕ್ಷಿತ ‘ಆಡುಜೀವಿತಂ’(ಗೋಟ್ ಲೈಫ್) (Aadujeevitham) ಚಿತ್ರ ಇದೇ ಮಾರ್ಚ್ 28 ರಂದು ತೆರೆಗೆ ಬರಲಿದೆ. ಹೆಸರಾಂತ ಹೊಂಬಾಳೆ ಫಿಲಂಸ್ (Hombale Films) ಕರ್ನಾಟಕದ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ. ಕರ್ನಾಟಕದಾದ್ಯಂತ ಹೊಂಬಾಳೆ ಫಿಲಂಸ್ ಸಂಸ್ಥೆಯ ವಿಜಯ್ ಕಿರಗಂದೂರ್ ಅವರು ಈ ಚಿತ್ರವನ್ನು  ಅರ್ಪಿಸಿ,ಬಿಡುಗಡೆ ಮಾಡುತ್ತಿದ್ದಾರೆ.

Aadujeevitham 4

ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಅವರು ಹಾಗೂ ನಟ ಪೃಥ್ವಿರಾಜ್ ಸುಕುಮಾರನ್ ಅವರು ಆತ್ಮೀಯ ಸ್ನೇಹಿತರು. ಹೊಂಬಾಳೆ ಫಿಲಂಸ್ ನ ಕೆ.ಜಿ.ಎಫ್, ಕಾಂತಾರದಂತಹ ಜನಪ್ರಿಯ ಚಿತ್ರಗಳನ್ನು ಕೇರಳದಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರು ಬಿಡುಗಡೆ ಮಾಡಿದ್ದರು. ಈಗ ಪೃಥ್ವಿರಾಜ್ ಅವರ ನಟನೆಯ, ವಿಭಿನ್ನ ಕಥಾಹಂದರ ಹೊಂದಿರುವ “ಆಡುಜೀವಿತಂ” ಚಿತ್ರವನ್ನು ಹೊಂಬಾಳೆ ಫಿಲಂಸ್ ಸಂಸ್ಥೆ ಕರ್ನಾಟಕದಾದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದೆ. ಈ ಚಿತ್ರದ ಕುರಿತು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

Aadujeevitham

ನನಗೆ ವಿಜಯ್ ಕಿರಗಂದೂರ್ ಅವರು ಆತ್ಮೀಯ ಸ್ನೇಹಿತರು ಎಂದು ಮಾತು ಆರಂಭಿಸಿದ ನಟ ಪೃಥ್ವಿರಾಜ್, ನಮ್ಮ ಆಡುಜೀವಿತಂ ಚಿತ್ರವನ್ನು  ಕರ್ನಾಟಕದಾದ್ಯಂತ ಹೊಂಬಾಳೆ ಫಿಲಂಸ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ, ಕೆಜಿಎಫ್, ಕಾಂತಾರ ದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್ ಮೂಲಕ ನಮ್ಮ ಚಿತ್ರ ಬಿಡುಗಡೆಯಾಗುತ್ತಿರುವುದು ತುಂಬಾ ಸಂತೋಷವಾಗಿದೆ. ಇನ್ನು ಬ್ಲೆಸ್ಸಿ ಅವರು ಗೋಟ್ ಲೈಫ್ ಚಿತ್ರ ಮಾಡಬೇಕೆಂದುಕೊಂಡಿದ್ದು 2008 ರಲ್ಲಿ. ಚಿತ್ರೀಕರಣ ಆರಂಭವಾಗಿದ್ದು 2018 ರಲ್ಲಿ. ಈ ಚಿತ್ರಕ್ಕಾಗಿ ಹದಿನಾರು ವರ್ಷಗಳ ಪರಿಶ್ರಮವಿದೆ. ನಾನು ಈ ಚಿತ್ರಕ್ಕಾಗಿ 31 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದೇನೆ. ಇದು ಬೆನ್ಯಾಮಿನ್ ಅವರು ಬರೆದಿರುವ “ಆಡುಜೀವಿತಂ” ಕಾದಂಬರಿ ಆಧಾರಿತ ಚಿತ್ರ. ಈ ಜನಪ್ರಿಯ ಕಾದಂಬರಿ ಈವರೆಗೂ 251 ಬಾರಿ ಮುದ್ರಣವಾಗಿದೆ. ನಜೀಬ್ ಎಂಬುವವರ ಜೀವನದ ನೈಜ ಕಥೆ ಆಧರಿಸಿದೆ. ಅಮಲಾ ಪೌಲ್, ಹಾಲಿವುಡ್ ನಟ ಜಿಮ್ಮಿ ಜೀನ್ ಲೂಯಿಸ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಸಂಗೀತ ನೀಡಿದ್ದಾರೆ ಎಂದರು.

 

ಚಿತ್ರ ಮಾರ್ಚ್ 28 ರಂದು ಮಲಯಾಳಂ, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಎಲ್ಲರೂ ನೋಡಿ ಎಂದರು ನಿರ್ದೇಶಕ ಬ್ಲೆಸ್ಸಿ. ಹಾಲಿವುಡ್ ನಟ ಜಿಮ್ಮಿ ಜೀನ್ ಲೂಯಿಸ್ ಸಹ ಈ ಚಿತ್ರದಲ್ಲಿ ನಟಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

Share This Article