ಕಳೆದ ವಾರವಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಪ್ರಚಾರಕ್ಕಾಗಿ ಶಿಗ್ಗಾಂವಿಗೆ ತೆರಳಿದ್ದ ನಟ ಕಿಚ್ಚ ಸುದೀಪ್ (Sudeep) ನಾಳೆ ಹಲವು ಊರುಗಳಲ್ಲಿ ಬಿಜೆಪಿ (BJP) ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಬೊಮ್ಮಾಯಿ ಮಾಮ ಸೂಚಿಸಿದ ಊರುಗಳಿಗೆ ಹೋಗಿ ಪ್ರಚಾರ ಮಾಡುತ್ತೇನೆ ಎಂದಿದ್ದ ಕಿಚ್ಚ ಕೊಟ್ಟ ಮಾತಿನಂತೆ ನಾಳೆಯಿಂದ ಭರ್ಜರಿ ಪ್ರಚಾರ (campaign) ಮಾಡಲಿದ್ದಾರೆ. ಕಿಚ್ಚನಿಗಾಗಿಯೇ ಹೆಲಿಕಾಪ್ಟರ್ ಸಿದ್ಧಗೊಂಡಿದೆ.
ನಾಳೆ ಸುದೀಪ್ ಯಾವೆಲ್ಲ ಊರಿಗೆ ಹೋಗಬೇಕು ಮತ್ತು ಯಾರ ಪರವಾಗಿ ಪ್ರಚಾರ ಮಾಡಬೇಕು ಎನ್ನುವುದರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಬೆಂಗಳೂರಿನಿಂದ ಹೊರಡುವ ಕಿಚ್ಚ, ನಾಳೆಯೇ ಐದು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಮಾಡಲಿದ್ದಾರೆ. ಬೆಂಗಳೂರಿನಿಂದ ಹೊರಡುವ ಇವರ ಪಯಣ ಮೊದಲು ಮೊಳಕಾಲ್ಮೂರು ಕ್ಷೇತ್ರದಿಂದ ಪ್ರಚಾರ ಆರಂಭಿಸಲಿದೆ. ಬೆಳಗ್ಗೆ 10.15ಕ್ಕೆ ಮೊಳಕಾಲ್ಮೂರು (Molakalmuru) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ಪರವಾಗಿ ಕಿಚ್ಚ ಮತಯಾಚನೆ ಮಾಡಲಿದ್ದಾರೆ.
ಮೊಳಕಾಲ್ಮೂರು ಕ್ಷೇತ್ರದಿಂದ ನೇರವಾಗಿ ಜಗಳೂರು (Jagaluru) ಕ್ಷೇತ್ರದತ್ತ ಹೆಲಿಕಾಪ್ಟರ್ ನಲ್ಲೇ ಪ್ರಯಾಣ ಮುಂದುವರೆಸುವ ಸುದೀಪ್ 12.30ಕ್ಕೆ ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಅವರ ಪರವಾಗಿ ರೋಡ್ ಶೋ ನಡೆಸಲಿದ್ದಾರೆ. ಒಂದು ಗಂಟೆಗೂ ಅಧಿಕ ಕಾಲ ಅವರು ರೋಡ್ ಶೋ ಮಾಡಲಿದ್ದಾರೆ. ಇದನ್ನೂ ಓದಿ:ವಿಜಯ್ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್ ಡೇಟ್
ಜಗಳೂರು ರೋಡ್ ಶೋ ಮುಗಿಸಿಕೊಂಡು ಊಟದ ನಂತರ ಸುದೀಪ್, ಮಾಯಕೊಂಡ (Mayakonda) ಕ್ಷೇತ್ರದತ್ತ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 3.10ಕ್ಕೆ ಮಾಯಕೊಂಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ನಾಯ್ಕ ಪರವಾಗಿ ಸುದೀಪ್ ಮತಯಾಚನೆ ಮಾಡಲಿದ್ದಾರೆ. ಅಲ್ಲದೇ, ಸರಕಾರಿ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಲಿದ್ದಾರೆ.
ಮಾಯಕೊಂಡದಿಂದ ಸುದೀಪ್ ದಾವಣಗೆರೆಗೆ (Davangere) ತೆರಳಲಿದ್ದು, ದಾವಣಗೆರೆಯ ಸೌತ್ ಮತ್ತು ನಾರ್ತ್ ಕ್ಷೇತ್ರಗಳ ಅಭ್ಯರ್ಥಿಗಳಾದ ಲೊಕ್ಕಿಕೆರೆ ನಾಗರಾಜ ಹಾಗೂ ಬಿ.ಜಿ. ಅಜಯ್ ಕುಮಾರ್ ಪರವಾಗಿ ಸಂಜೆ 4.20ಕ್ಕೆ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ. ಅಲ್ಲಿಂದ ನೇರವಾಗಿ ಸಂಡೂರಿಗೆ ತೆರಳಿ ಸಂಡೂರು (Sandur) ಬಿಜೆಪಿ ಅಭ್ಯರ್ಥಿ ಶಿಲ್ಪಾ ನಾಗೇಂದ್ರ ಪರವಾಗಿ ಸಂಜೆ 6.10ಕ್ಕೆ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ.