ಬೆಂಗಳೂರು: ಐಎಎಸ್, ಐಪಿಎಸ್ ಅಧಿಕಾರಿಗಳ ಎತ್ತಂಗಡಿ ವಿಷಯವಾಗಿ ಸರ್ಕಾರದ ನಡೆಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ ಈ ಹಿಂದೆ ವರ್ಗಾವಣೆಯಿಂದ ನೊಂದಿದ್ದ ರಶ್ಮಿ ಮಹೇಶ್ ಎಲ್ಲಿದ್ದಾರೆ ಎನ್ನುವ ಪ್ರಶ್ನೆಯೊಂದು ತೂರಿಬಂದಿದ್ದು ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಕಳೆದ 1 ವರ್ಷದಿಂದ ಶಿಶುಪಾಲನಾ ರಜೆಯಲ್ಲಿರುವ ರಶ್ಮಿ ಮಹೇಶ್ ಪ್ರಸ್ತುತ ಜೆಪಿ ನಗರದ ಬ್ರಿಗೇಡ್ ಅಪಾರ್ಟ್‍ಮೆಂಟ್‍ನಲ್ಲಿದ್ದಾರೆ. 2017ರ ಏಪ್ರಿಲ್ 16 ರಿಂದ ಮಾರ್ಚ್ 30 ರವರೆಗೆ ರಜೆ ಪಡೆದಿದ್ದಾರೆ.
Advertisement
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ರಶ್ಮಿ ಮಹೇಶ್ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಗೃಹ ಸಚಿವ ರಾಮಲಿಂಗಾರೆಡ್ಡಿ, ಮಾಹಿತಿ ಇಲ್ಲ. ತಿಳಿದುಕೊಂಡು ಹೇಳುತ್ತೇನೆ ಎಂದಿದ್ದರು.
Advertisement
ಪಿಯು ಮಂಡಳಿಯಲ್ಲಿ ನಿರ್ದೇಶಕರಾಗಿದ್ದಾಗ ಮಂಡಳಿಯ ಅಕ್ರಮಗಳನ್ನು ರಶ್ಮಿ ಮಹೇಶ್ ಬಯಲು ಮಾಡಿದ್ದರು. ನಂತರ ಸರ್ಕಾರ ಅವರನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾವಣೆ ಮಾಡಿತ್ತು. ಕಾರ್ಯದರ್ಶಿಯಾಗಿದ್ದ ಇವರು ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಮೇಲೆ ತಿರುಗಿಬಿದ್ದ ಬಳಿಕ ಅವರನ್ನು ಅವರನ್ನು ರಜೆ ಮೇಲೆ ಕಳುಹಿಸಲಾಗಿತ್ತು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಐಪಿಎಸ್ ಅಧಿಕಾರಿಗಳ ಸಂಘ
Advertisement
ಇದಾದ ಬಳಿಕ ಮೈಸೂರಿನ ಆಡಳಿತ ಮತ್ತು ತರಬೇತಿ ಕೇಂದ್ರದ ಆಯಕ್ತರಾಗಿ ವರ್ಗ ಮಾಡಲಾಗಿತ್ತು. ಈ ತರಬೇತಿ ಕೇಂದ್ರದಲ್ಲಿ ಸುಮಾರು 100 ಕೋಟಿ ರೂ. ಹಗರಣ ಬೆಳಕಿಗೆ ತಂದಿದ್ದರು. ಇದಾದ ನಂತರ ಇವರ ಮೇಲೆ ಹಲ್ಲೆ ಸಹ ನಡೆದಿತ್ತು. ಇಲ್ಲಿಂದ ಆಹಾರ ಸಂಸ್ಕರಣೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನ ಇಲಾಖೆಗೆ ವರ್ಗಾಯಿಸಲಾಯಿತು. ಅಧಿಕಾರ ಸ್ವೀಕರಿಸಿದ ಕೆಲ ದಿನಗಳಲ್ಲಿ ಬಿಬಿಎಂಪಿ ಹಣಕಾಸು ಮತ್ತು ಜಾಹೀರಾತು ವಿಭಾಗದ ಮುಖ್ಯಾಧಿಕಾರಿಯಾಗಿ ಸರ್ಕಾರ ಮತ್ತೆ ಅವರನ್ನು ವರ್ಗ ಮಾಡಿತ್ತು. ಪದೇ ಪದೇ ವರ್ಗಾವಣೆ ಆಗುತ್ತಿದ್ದ ಹಿನ್ನೆಲೆಯಲ್ಲಿ ರಶ್ಮಿ ಮಹೇಶ್ ಸುದೀರ್ಘ ರಜೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗ