ಹಿಂದಿನ ಕಾಲದಲ್ಲಿ, ಕ್ಯಾನ್ಸರ್ ಇರುವುದನ್ನ ಕಂಡುಹಿಡಿಯುವುದು ತುಂಬಾ ಕಷ್ಟ ಆಗಿತ್ತು. ಯಾರಿಗಾದರೂ ಕ್ಯಾನ್ಸರ್ ಬಂದರೆ ಅವರಿಗೆ ಸಾವು ಖಚಿತ ಎಂದು ಜನ ನಂಬುತ್ತಿದ್ದರು. ಯಾಕೆಂದರೆ ಆಗ ಕ್ಯಾನ್ಸರ್‌ಗೆ ಯಾವ ಚಿಕಿತ್ಸೆಯೂ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ದಿನ ಕಳೆದಂತೆ ಪ್ರತಿಯೊಂದು ರೋಗಕ್ಕೂ ವೈದ್ಯರು ಹಾಗೂ ವಿಜ್ಞಾನಿಗಳು ಚಿಕಿತ್ಸೆಯನ್ನು ಕಂಡು ಹಿಡಿಯುತ್ತಿದ್ದಾರೆ.
ಅಂತೆಯೇ ಕ್ಯಾನ್ಸರ್ ರೋಗಕ್ಕೂ ಇಮ್ಯುನೋಥೆರಪಿ ಎಂಬ ಚಿಕಿತ್ಸಾ ವಿಧಾನವನ್ನು ಕಂಡು ಹಿಡಿಯಲಾಗಿದೆ. ಇದರಿಂದ ಕ್ಯಾನ್ಸರ್ ಸಂಪೂರ್ಣವಾಗಿ ಗುಣವಾಗದಿದ್ದರೂ ಹರಡುವುದನ್ನು ತಡೆಗಟ್ಟುತ್ತದೆ. ಅಲ್ಲದೇ ಕೀಟ್ರೂಡಾ ಎಂಬ ಔಷಧಿ ಕೂಡ ಕ್ಯಾನ್ಸರ್ ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಹಾಗಿದ್ರೆ ಇಮ್ಯುನೋಥೆರಪಿ ಎಂದರೇನು? ಕ್ಯಾನ್ಸರ್ ತಡೆಗಟ್ಟುವಲ್ಲಿ ಕೀಟ್ರೂಡಾ ಔಷಧಿ ಹಾಗೂ ಇಮ್ಯುನೋಥೆರಪಿ ಪಾತ್ರವೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಇಮ್ಯುನೋಥೆರಪಿ ಎಂದರೇನು?
ಇಮ್ಯುನೋಥೆರಪಿ ಒಂದು ಹೊಸತಾದ ಚಿಕಿತ್ಸಾ ವಿಧಾನವಾಗಿದ್ದು, ಹೆಚ್ಚಾಗಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಈ ಚಿಕಿತ್ಸಾ ಪದ್ಧತಿಯ ಮೂಲಕ ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಶಕ್ತಿಯುತವಾಗಿ ಮಾಡಿ, ಕ್ಯಾನ್ಸರ್‌ಕಾರಕ ಜೀವಕೋಶಗಳನ್ನು ಪತ್ತೆ ಹಚ್ಚಿ, ಅದನ್ನು ನಾಶ ಮಾಡುವಂತೆ ಪ್ರಚೋದಿಸುತ್ತಾರೆ.
ಹಲವಾರು ರೀತಿಯ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಇದನ್ನು ಬಳಸುತ್ತಾರೆ. ಇಮ್ಯುನೋಥೆರಫಿಯನ್ನು ಕೆಲವೊಮ್ಮೆ ಕಿಮೋಥೆರಪಿ ಜೊತೆಗೆ ಅಥವಾ ಕ್ಯಾನ್ಸರ್ ಚಿಕಿತ್ಸೆ ಜೊತೆಗೂ ಬಳಸುತ್ತಾರೆ. ಇದು ಕೆಲವರು ವ್ಯಕ್ತಿಗಳಲ್ಲಿ ಫಲಿತಾಂಶ ನೀಡುತ್ತದೆ ಮತ್ತು ಕೆಲವರಿಗೆ ಯಾವುದೇ ಪರಿಣಾಮ ಬೀರದೇ ಇರಬಹುದು. ಒಟ್ಟಿನಲ್ಲಿ ಈ ಚಿಕಿತ್ಸಾ ಪದ್ಧತಿಯ ಯಶಸ್ಸಿನ ಅನುಪಾತ 15%ನಿಂದ 20%ನಷ್ಟಿದೆ . ಹೆಚ್ಚಿನ ಸಂದರ್ಭಗಳಲ್ಲಿ ಇಮ್ಯುನೋಥೆರಪಿಯನ್ನು ಮುಂದುವರಿದ ಹಂತದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಾತ್ರ ಬಳಸಲಾಗುತ್ತದೆ. ಸರ್ಜರಿ ಸಾಧ್ಯವಾಗದ ರೋಗಗಳಲ್ಲಿ ಅಥವಾ ಸರ್ಜರಿಯನ್ನು ಮಾಡಿಯೂ ಧನಾತ್ಮಕ ಫಲಿತಾಂಶ ದೊರಕದೆ ಇರಬಹುದಾದ ರೋಗಿಗಳಿಗೆ ಹೆಚ್ಚಾಗಿ ಈ ಚಿಕಿತ್ಸಾ ಪದ್ಧತಿಯನ್ನು ರೋಗವನ್ನು ನಿಯಂತ್ರಿಸಲು ಒಳಸಲಾಗುತ್ತದೆ.

ಇಮ್ಯುನೋಥೆರಪಿಯಿಂದ ಕ್ಯಾನ್ಸರ್ ಗುಣವಾಗುತ್ತಾ?
ಇಮ್ಯುನೋಥೆರಪಿಯಿಂದ ಪೂರ್ತಿಯಾಗಿ ಕ್ಯಾನ್ಸರ್ ರೋಗದಿಂದ ವಿಮುಕ್ತಗೊಳಿಸಲು ಸಾಧ್ಯವಿಲ್ಲ. ಆದರೆ ಕೆಲವೊಂದು ರೀತಿಯ ಕ್ಯಾನ್ಸರ್‌ಗಳಲ್ಲಿ ಆಶಾದಾಯಕ ಫಲಿತಾಂಶ ದೊರಕಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯೋಗಗಳು ಮತ್ತು ಪ್ರಾರಂಭಿಕ ಚಿಕಿತ್ಸೆಗಳು ನಡೆಯುತ್ತಿದ್ದು, ವೈದ್ಯರಿಗೆ ಮತ್ತು ಕ್ಯಾನ್ಸರ್ ರೋಗಿಗಳಿಗೆ ಆಶಾದಾಯಕ ದಾರಿಯನ್ನು ತೆರೆದಿದೆ.
ಕಿಮೋಥೆರಪಿಯಲ್ಲಿ ಕೆಲವೊಂದು ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುವುದುಂಟು. ಕೂದಲು ಉದುರುವಿಕೆ, ವಾಕರಿಕೆ, ರಕ್ತಕಣಗಳ ಸಂಖ್ಯೆ ವಿಪರೀತವಾಗಿ ಕಡಿಮೆಯಾಗುವುದು ಕಿಮೋಥೆರಪಿಯಲ್ಲಿ ಸಾಮಾನ್ಯ. ಇದಕ್ಕೆ ಹೋಲಿಸಿದಲ್ಲಿ ಇಮ್ಯುನೋಥೆರಪಿಯು ಕಿಮೋಥೆರಪಿಗಿಂತ ಉತ್ತಮ ಎಂಬ ಅಭಿಪ್ರಾಯ ವೈದ್ಯರಲ್ಲಿ ಮತ್ತು ರೋಗಿಗಳಲ್ಲಿ ಇದೆ. ಆದರೆ ಯಾವ ರೀತಿಯ ಚಿಕಿತ್ಸೆ ಯಾವಾಗ ಹೇಗೆ ಕೊಡಬೇಕು ಎಂಬುದನ್ನು ವೈದ್ಯರು ರೋಗಿಯ ಪರಿಸ್ಥಿತಿಯನ್ನು ಗಮನಿಸಿ ನಿರ್ಧರಿಸುತ್ತಾರೆ.
ಯಾವಾಗ ಬಳಸುತ್ತಾರೆ?:
1.ಯಕೃತ್ತಿನ ಕ್ಯಾನ್ಸರ್, ಮಿದುಳಿನ ಕ್ಯಾನ್ಸರ್
2ಮೂತ್ರಪಿಂಡದ ಕ್ಯಾನ್ಸರ್, ಮೂತ್ರಚೀಲದ ಕ್ಯಾನ್ಸರ್
3.ಶ್ವಾಸಕೋಶ, ಬಾಯಿ ಮತ್ತು ಗಂಟಲು, ಹೊಟ್ಟೆ, ಗರ್ಭಾಶಯದ ಕ್ಯಾನ್ಸರ್
4.ಮರುಕಳಿಸಿದ ಕ್ಯಾನ್ಸರ್ ಮತ್ತು ಕಿಮೋಥೆರಪಿ
ಈ ಎಲ್ಲ ಕ್ಯಾನ್ಸರ್‌ಗಳಲ್ಲಿ ಆರಂಭಿಕ ಹಂತದಲ್ಲಿ ಸರ್ಜರಿಯನ್ನು ಮುಖ್ಯವಾಗಿ ಬಳಸುತ್ತಾರೆ. ಆದರೆ ಮುಂದುವರಿದ 4ನೇ ಹಂತದಲ್ಲಿ ಇಮ್ಯುನೋಥೆರಪಿಯನ್ನು ಬಳಸುತ್ತಾರೆ.

ಯಾವುದು ಉತ್ತಮ?
ಕಿಮೋಥೆಯಪಿಯಲ್ಲಿ ಬಳಸುವ ಔಷಧಗಳು ಕ್ಯಾನ್ಸರ್‌ಕಾರಕ ಜೀವಕೋಶಗಳನ್ನು ಗುರುತಿಸಿ ನಾಶಪಡಿಸುತ್ತದೆ. ಆದರೆ ಇಮ್ಯುನೋಥೆರಪಿಯಲ್ಲಿ ಕ್ಯಾನ್ಸರ್ ರೋಗಿಗಳ ದೇಹದ ರಕ್ಷಣಾ ವ್ಯವಸ್ಥೆಯನ್ನು ಸಧೃಡಗೊಳಿಸಿ ದೇಹವೇ ಕ್ಯಾನ್ಸರ್ ಜೀವಕೋಶಗಳನ್ನು ಎದುರಿಸಿ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಒಂದಕ್ಕಿಂತ ಇನ್ನೊಂದು ಉತ್ತಮ ಎಂಬುದಕ್ಕಿಂತ ಕೆಲವೊಮ್ಮೆ ಎರಡನ್ನೂ ಬಳಸಿ ರೋಗಿಯ ದೇಹಸ್ಥಿತಿಯನ್ನು ಉತ್ತಮಪಡಿಸಲಾಗುತ್ತದೆ. ಈ ಮೊದಲೆಲ್ಲಾ 4ನೇ ಹಂತದ ಕ್ಯಾನ್ಸರ್‌ಗಳಲ್ಲಿ (ಸರ್ಜರಿ ಮಾಡಲು ಸಾಧ್ಯವಿಲ್ಲದ ಹಂತ) ಕೇವಲ ಕಿಮೊಥೆರಪಿ ನೀಡಲಾಗುತ್ತಿತ್ತು. ಇಮ್ಯುನೋಥೆರಪಿಯಿಂದಾಗಿ ಕ್ಯಾನ್ಸರ್ ರೋಗಿಗಳ ಬದುಕಿ ಉಳಿಯುವ ಸಾಧ್ಯತೆಯನ್ನು ಹೆಚ್ಚಿಸಿದೆ.
ವೆಚ್ಚ ಎಷ್ಟು?
*ಇಮ್ಯುನೋಥೆರಪಿ ಚಿಕಿತ್ಸೆ ಬಹಳ ದುಬಾರಿ ಆರೋಗ್ಯ. ಪ್ರತಿ ಸಲದ ಚುಚ್ಚುಮದ್ದು ಕನಿಷ್ಠ ಒಂದೂವರೆ ಲಕ್ಷದಿಂದ ಐದು ಲಕ್ಷದವರೆಗೆ ಆಗುತ್ತದೆ. ಸುಮಾರು ಒಂದರಿಂದ ಎರಡು ವರುಷಗಳವರೆಗೆ ಈ ಚುಚ್ಚುಮದ್ದನ್ನು ನಿರಂತರವಾಗಿ ನೀಡಬೇಕಾಗುತ್ತದೆ.
*ಎಲ್ಲ ಕೇಂದ್ರಗಳಲ್ಲಿ ಈ ಚಿಕಿತ್ಸೆ ದೊರಕುವುದಿಲ್ಲ. ನುರಿತ ತಜ್ಞ ಮತ್ತು ಪರಿಣತವೈದ್ಯರ ಮಾರ್ಗದರ್ಶನದಲ್ಲಿ ಈ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕಾಗುತ್ತದೆ.
*ಕಿಮೊಥೆರಪಿಯಷ್ಟು ಅಡ್ಡಪರಿಣಾಮ ಇಲ್ಲದಿದ್ದರೂ ಇಮ್ಯುನೋಥೆರಪಿಯಲ್ಲಿ ಕೆಲವೊಮ್ಮೆ ಥೈರಾಯ್ಡ್ ತೊಂದರೆ, ಚರ್ಮದಲ್ಲಿ ಗುಳ್ಳೆಗಳು, ಅತಿಸಾರ ಮುಂತಾದ ಸಮಸ್ಯೆಗಳು ಕಂಡುಬರುತ್ತವೆ.
*ಇಮ್ಯುನೋಥೆರಪಿ ಚಿಕಿತ್ಸೆ ನಿಲ್ಲಿಸಿದ ಬಳಿಕ ಕ್ಯಾನ್ಸರ್ ಜೀವಕೋಶಗಳು ಮತ್ತೆ ಕ್ರಿಯಾಶೀಲವಾಗುವ ಸಾಧ್ಯತೆ ಇರುತ್ತದೆ.
ಇತ್ತೀಚಿನ ವರದಿಗಳ ಪ್ರಕಾರ, ಆರಂಭಿಕ ಹಂತದ ಎದೆಗೂಡಿನ ಕ್ಯಾನ್ಸರ್‌ಗೆ ಇಮ್ಯುನೋಥೆರಪಿ ನೀಡಿ ಐದು ವರ್ಷಗಳು ಬದುಕಿ ಉಳಿಯುವ ಸಾಧ್ಯತೆ ಶೇ.80ರಷ್ಟಾಗಿದೆ ಎಂಬುದು ಆಶಾದಾಯಕ. ಈ ನಿಟ್ಟಿನಲ್ಲಿ ಇಮ್ಯುನೋಥೇರಪಿ ರೋಗಿಗಳಲ್ಲಿ ಹೊಸ ಆಶಾವಾದ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕೀಟ್ರೂಡಾ ಎಂದರೇನು?
ಕೀಟ್ರೂಡಾ ಎಂಬುದು ಅಮೆರಿಕದ ಪ್ರಮುಖ ಔಷಧ ಕಂಪನಿ Merck & Co (MSD) ತಯಾರಿಸಿದ ಇಮ್ಯುನೊಥೆರಪಿ ಔಷಧವಾಗಿದ್ದು ಅದರ ಅಧಿಕೃತ ಮಾರುಕಟ್ಟೆ ಬೆಲೆ 100 ಮಿಗ್ರಾಂ ಬಾಟಲಿಗೆ 1.5 ಲಕ್ಷ ರೂ.ಗಿಂತ ಹೆಚ್ಚಿದೆ. ಹಾಗಾಗಿ ಹೆಚ್ಚಿನ ಕುಟುಂಬಗಳಿಗೆ ಇದು ಕೈಗೆಟುಕುವುದಿಲ್ಲ.
ಕೀಟ್ರೂಡಾ ಎಂಬುದು ಪೆಂಬ್ರೊಲಿಜುಮಾಬ್‌ನ ಬ್ರಾಂಡ್ ಹೆಸರು. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ನಿರ್ಣಾಯಕ ಆಯುಧವಾಗಿರುವ ದೇಹದ ಟಿ ಕೋಶ (T cells) ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ಮಾಡುವುದನ್ನು ತಡೆಯುತ್ತದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ದೇಹದ ಸ್ವಂತ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಳಸುತ್ತದೆ.
ಚರ್ಮ ಕ್ಯಾನ್ಸರ್‌ಗೆ 2014ರಲ್ಲಿ ಅಮೆರಿಕದ FDAಯಿಂದ ಮೊದಲು ಅನುಮೋದಿಸಲ್ಪಟ್ಟ ಕೀಟ್ರೂಡಾವನ್ನು ಈಗ ಜಾಗತಿಕವಾಗಿ ಶ್ವಾಸಕೋಶದ ಕ್ಯಾನ್ಸರ್‌ಗಳು, ಗರ್ಭಕಂಠದ ಕ್ಯಾನ್ಸರ್, ಮೂತ್ರಪಿಂಡದ ಕೋಶ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್‌ಗೆ ಬಳಸಲಾಗುತ್ತದೆ. ಇದು ಜಾಗತಿಕವಾಗಿ ಹೆಚ್ಚು ಮಾರಾಟವಾಗುವ ಔಷಧವಾಗಿದ್ದು, 2024ರಲ್ಲಿ 29.5 ಶತಕೋಟಿ ಡಾಲರ್ ಹಣ ಇದರಿಂದಲೇ ಬಂದಿದೆ. ಇದು ಮೆರ್ಕ್ ಕಂಪನಿಯ ಆದಾಯದ ಅರ್ಧದಷ್ಟಾಗಿದೆ.
ಕೀಟ್ರೂಡಾ ಕ್ಯಾನ್ಸರ್ ಕೋಶಗಳನ್ನು ಗುರುತಿಸಲು ಮತ್ತು ನಾಶಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. Merck & Co ಶಿಫಾರಸು ಮಾಡಿದ ಡೋಸೇಜ್ ಪ್ರತಿ ಮೂರು ವಾರಗಳಿಗೊಮ್ಮೆ 200 ಮಿಗ್ರಾಂ. ಪ್ರತಿ 100 ಮಿಗ್ರಾಂ ಬಾಟಲಿಯನ್ನು 1.5 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದರಿಂದ, ಆರೋಗ್ಯ ರಕ್ಷಣೆ ಅಥವಾ ಸಹಾಯ ಯೋಜನೆಗಳಿಲ್ಲದ ರೋಗಿಗಳು ಪ್ರತಿ ತಿಂಗಳು 3 ಲಕ್ಷ ರೂ.ಗಳಿಗಿಂತ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.
ಕೀಟ್ರೂಡಾವನ್ನು ಹೆಚ್ಚು ಕೈಗೆಟುಕುವಂತೆ ಮಾಡಲು, ಸರ್ಕಾರವು ಕಳೆದ ವರ್ಷ ಔಷಧದ ಮೇಲಿನ ಮೂಲ ಕಸ್ಟಮ್ ಸುಂಕವನ್ನು ತೆಗೆದುಹಾಕಲು ನಿರ್ಧರಿಸಿದೆ.



