ಮಧ್ಯಪ್ರಾಚ್ಯ ಸಂಘರ್ಷಕ್ಕೆ ಕದನವಿರಾಮ ಹಾಗೂ ಶಾಂತಿ ಮಾತುಕತೆಗಳ ಪ್ರಯತ್ನಗಳ ನಡುವೆ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ-ಇರಾನ್ ಹೋರಾಟ ನಡೆಸುತ್ತಿದ್ದು, ಇದೀಗ ಉಭಯರ ನಡುವೆ ಜಲಸಂಧಿಯಲ್ಲಿ ಪರಸ್ಪರ ಗುಂಡಿನ ಚಕಮಕಿ ನಡೆದಿದೆ. ಈ ಕುರಿತು ಉಭಯರ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಂದ ಮಾಡಿಕೊಳ್ಳಿ ಇಲ್ಲವಾದ್ರೆ, ಇನ್ನೂ ಹೆಚ್ಚಿನ ದಾಳಿಗಳನ್ನು ಎದುರಿಸಬೇಕಾಗುತ್ತೇ ಎಂದ ಕೆಲವೇ ಹೊತ್ತಿನಲ್ಲಿ ಜಲಸಂಧಿಯಲ್ಲಿ ನಡೆದ ದಾಳಿಗಳು ಕೇವಲ ಪ್ರೀತಿಯ ಸ್ಪರ್ಶವಾಗಿದ್ದು ಕದನವಿರಾಮ ಜಾರಿಯಲ್ಲಿದೆ ಎಂದು ಉಲ್ಟಾ ಹೊಡೆದಿದ್ದಾರೆ. ಆದಾಗ್ಯೂ, ಪ್ರಾದೇಶಿಕ ಉದ್ವಿಗ್ನತೆ ಮಾತುಕತೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.
ಇನ್ನೂ ಸಾಕಷ್ಟು ನಷ್ಟದ ಹೊರತಾಗಿಯೂ ಪ್ರತೀಕಾರ ತೀರಿಸಿಕೊಳ್ಳುತ್ತಿರುವ ಇರಾನ್ ಹೊಸ ಅಸ್ತ್ರವೊಂದನ್ನ ಯುದ್ಧಕ್ಕೆ ಪ್ರಯೋಗಿಸಿದೆ. ಈ ವಾರ ಅಮೆರಿಕದ ಪೆಂಟಗನ್‌ನಲ್ಲಿ ನಡೆದ ಪ್ರೆಸ್ ಬ್ರೀಫಿಂಗ್ ಅಥವಾ ಪತ್ರಿಕಾಗೋಷ್ಠಿಯಲ್ಲಿ ಚರ್ಚೆಯಾದ ವಿಷಯ ಜಿಯೋಪಾಲಿಟಿಕ್ಸ್ ಅಥವಾ ಭೌಗೋಳಿಕ ರಾಜಕೀಯಕ್ಕಿಂತ ಹೆಚ್ಚಾಗಿ, ಯಾವುದೋ ಹಾಲಿವುಡ್ ಸೈನ್ಸ್ ಫಿಕ್ಷನ್ ಸಿನಿಮಾದ ಕಥೆಯಂತೆ ಕೇಳಿಸ್ತಾ ಇತ್ತು.

ಪೆಂಟಗನ್ ಅಧಿಕಾರಿಗಳು ಇರಾನ್ ದೇಶದ ಕಾಮಿಕೇಜ್ ಡಾಲ್ಫಿನ್ಸ್ ವರದಿಗಳ ಬಗ್ಗೆ ಮಾತನಾಡಲು ಶುರುಮಾಡಿದಾಗ, ಅಲ್ಲಿದ್ದವರೆಲ್ಲರೂ ಇದೇನಿದು ವಿಚಿತ್ರ, ಇದೆಲ್ಲಾ ಕಟ್ಟುಕಥೆ ಅಂತಲೇ ಭಾವಿಸಿದ್ದರು. ಆದರೆ, ಅವರ ಆಲೋಚನೆ ಸಂಪೂರ್ಣವಾಗಿ ತಪ್ಪಾಗಿರಲಿಲ್ಲ. ಏಕೆಂದರೆ, ಶತ್ರುಗಳ ಮೇಲೆ ಆತ್ಮಾಹುತಿ ದಾಳಿ ಮಾಡಲು, ಸಮುದ್ರದ ಜಲಚರಗಳನ್ನು ಅಸ್ತ್ರಗಳಾಗಿ ಬಳಸುವ ಈ ಕಾನ್ಸೆಪ್ಟ್ ಇವತ್ತು ನಿನ್ನೆಯದ್ದಲ್ಲ. ಬದಲಾಗಿ, ನಾವೆಲ್ಲರೂ ಊಹಿಸಲೂ ಸಾಧ್ಯವಾಗದಷ್ಟು ಹಳೇ ಮಿಲಿಟರಿ ಇತಿಹಾಸ ಇದರ ಹಿಂದಿದೆ.
ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಈ ಹಿಂದೆ ಸಂಘರ್ಷದ ಪ್ರದೇಶಗಳಲ್ಲಿ ಕಾಮಿಕೇಜ್ ಡಾಲ್ಫಿನ್‌ಗಳನ್ನ (ಸ್ಫೋಟಕ ಹೊತ್ತೊಯ್ಯಬಲ್ಲ ಡಾಲ್ಫಿನ್) ಬಳಸಿವೆ. ಅಷ್ಟಕ್ಕೂ ಏನಿದು ಕಾಮಿಕೇಜ್ ಡಾಲ್ಫಿನ್? ಇದನ್ನ ಯುದ್ಧಕ್ಕೆ ಬಳಸುವುದು ಹೇಗೆ? ಅನ್ನೋದನ್ನ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…. ಮೊದಲಿಗೆ ಕಾಮಿಕೇಜ್ ಡಾಲ್ಫಿನ್ ಅಥವಾ ಆತ್ಮಹತ್ಯಾ ಡಾಲ್ಫಿನ್ ವಿಚಾರ ಮುನ್ನೆಲೆಗೆ ಬಂದಿದ್ದು ಹೇಗೆ ಅನ್ನೋದನ್ನ ನೋಡೋಣ…

ಕಾಮಿಕೇಜ್ ಡಾಲ್ಫಿನ್ ಮುನ್ನೆಲೆಗೆ ಬಂದಿದ್ದು ಹೇಗೆ?
ಪೆಂಟಗನ್‌ನಲ್ಲಿ ನಡೆಯುತ್ತಿದ್ದ ಸುದ್ದಿಗೋಷ್ಠಿ ವೇಳೆ ಪತ್ರಕರ್ತರೊಬ್ಬರು ಇರಾನಿನ ಆತ್ಮಹತ್ಯಾ ಡ್ರೋನ್ ಬಗ್ಗೆ ವಿಷಯ ಎತ್ತಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಯುಎಸ್ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗೆತ್ಸ್, ಯುದ್ಧದಲ್ಲಿ ಬಳಸಲು ಇರಾನ್ ಈ ರೀತಿಯ ಡಾಲ್ಫಿನ್‌ಗಳನ್ನ ಹೊಂದಿಲ್ಲ ಎಂಬುದನ್ನು ಖಚಿತಪಡಿಸಬಹುದು. ಆದ್ರೆ, ನಾವು ಹೊಂದಿಲ್ಲ ಅಂತ ಹೇಳೋಕೆ ಸಾಧ್ಯವಿಲ್ಲ ಅಂತ ಹೇಳಿದ್ರು.
ಇದಕ್ಕೂ ಮುನ್ನ ವಾಲ್‌ಸ್ಟ್ರೀಟ್ ಜರ್ನಲ್ ಇರಾನಿನ ಅಧಿಕಾರಿಗಳನ್ನ ಉಲ್ಲೇಖಿಸಿ ಟೆಹ್ರಾನ್, ಅಮೆರಿಕದ ಯುದ್ಧ ನೌಕೆಗಳ ಮೇಲೆ ದಾಳಿ ಮಾಡಲು ಹಿಂದೆದೂ ಬಳಸದ ಶಸ್ತ್ರಾಸ್ತ್ರಗಳನ್ನು ಬಳಸಬಹುದು ಎಂದು ಹೇಳಿತ್ತು. ಇವುಗಳಲ್ಲಿ ಜಲಾಂತರ್ಗಾಮಿಗಳಿಂದ ಹಿಡಿದು, ಮೈನಿಂಗ್ (ಜಲಬಾಂಬ್) ಸಾಗಿಸುವ ಡಾಲ್ಫಿನ್‌ಗಳವರೆಗೆ ಎಲ್ಲವೂ ಸೇರಿವೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಅಂದಿನಿಂದ ಸೂಸೈಡ್ ಡಾಲ್ಫಿನ್ ಚರ್ಚಿತ ವಿಷಯವಾಗಿದೆ. ಆದ್ರೆ ಇರಾನ್‌ನ ವಿದೇಶಾಂಗ ಸಚಿವಾಲಯದ ಹೇಳಿಕೆಗಳನ್ನ ಅಂತಾರಾಷ್ಟ್ರೀಯ ಶತ್ರುರಾಷ್ಟ್ರಗಳ ಸಚಿವಾಲಯಗಳು ಖಂಡಿಸಿವೆ. ಇರಾನ್‌ನ ವಿದೇಶಾಂಗ ಕಚೇರಿಯು ಎಐ- ಫೋಟೋವನ್ನ ಬಳಸಿಕೊಂಡಿದ್ದು, ಅದಕ್ಕೆ ಸ್ಫೋಟಕದ ಲೇಬಲ್ ಹಾಕಲಾಗಿದೆ ಎಂದು ಹೀಯಾಳಿಸಿವೆ.
ಡಾಲ್ಫಿನ್ ಯುದ್ಧ ನಡೆದಿತ್ತೆ? ಏನಿದರ ರಹಸ್ಯ?
ಮಿಲಿಟರಿ ಉದ್ದೇಶಗಳಿಗಾಗಿ ಸಮುದ್ರ ಸಸ್ತನಿಗಳನ್ನು ಬಳಸುವ ಏಕೈಕ ರಾಷ್ಟ್ರ ಅಮೆರಿಕ ಅಲ್ಲ. ಈ ಹಿಂದೆ ರಷ್ಯಾ ಸಹ ಬಂದರುಗಳನ್ನು ಕಾಪಾಡಲು ಡಾಲ್ಫಿನ್‌ಗಳನ್ನು ಬಳಸುತ್ತಿತ್ತು. ಇರಾನ್ 2,000 ಡಾಲ್ಫಿನ್‌ಗಳನ್ನು ಖರೀದಿಸಿತ್ತು. ಆದ್ರೆ, ಆ ಡಾಲ್ಫಿನ್‌ಗಳನ್ನ ಪ್ರಸ್ತುತ ಬಳಸಲು ಸಾಧ್ಯವಿಲ್ಲ. ಏಕೆಂದ್ರೆ ಅವುಗಳಿಗೆ ತುಂಬಾ ವಯಸ್ಸಾಗಿದೆ. ಅಲ್ಲದೇ ಇರಾನ್ ಸಕ್ರೀಯ ಡಾಲ್ಫಿನ್ ಕಾರ್ಯಕ್ರಮವನ್ನ ಹೊಂದಿದೆ, ಎಂಬುದಕ್ಕೆ ಯಾವುದೇ ಸಾಕ್ಷ್ಯಗಳೂ ಇಲ್ಲ. ಅಮೆರಿಕ ನೌಕಾಪಡೆಯ ಡಾಲ್ಫಿನ್ ಯೋಜನೆಯು 1959 ರಿಂದ ಸಕ್ರಿಯವಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಬಾಟಲ್‌ನೋಸ್ ಡಾಲ್ಫಿನ್‌ಗೂ ಮತ್ತು ಕ್ಯಾಲಿಫೋರ್ನಿಯಾ ಸಮುದ್ರ ಸಿಂಹಗಳಿಗೆ ನೀರಿನೊಳಗೆ ವಸ್ತುಗಳನ್ನು ಪತ್ತೆಹಚ್ಚಲು ತರಬೇತಿ ನೀಡಲಾಗುತ್ತದೆ.
ಮರುಕಳಿಸುತ್ತಾ 42 ವರ್ಷಗಳ ಹಿಂದಿನ ಭೀಭತ್ಸ ಯುದ್ಧ
ಮಧ್ಯಪ್ರಾಚ್ಯದಲ್ಲಿ ಕದನವಿರಾಮದ ಘೋಷಣೆಯಾದ ಬಳಿಕ ನೇರ ದಾಳಿಗಳು ಕೊಂಚ ತಣ್ಣಗಾಗಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಶೀತಲ ಸಮರದಂತಹ ಪರಿಸ್ಥಿತಿ ಎದುರಾಗಿತ್ತು. ಅಲ್ಲದೇ, ಉಭಯರ ನಡುವಿನ ರಾಜತಾಂತ್ರಿಕ ಪ್ರಯತ್ನಗಳು ಶಾಂತಿ ಒಪ್ಪಂದದ ಭರವಸೆ ಮೂಡಿಸಿತ್ತು. ಮತ್ತೆ ಹಾರ್ಮುಜ್ ಜಲಸಂಧಿಯಲ್ಲಿ ಯುದ್ಧದ ಚಟುವಟಿಕೆಗಳು ಹೆಚ್ಚಾಗಿದೆ, ಆದ್ರೆ ಈ ಬಾರಿ ಯುದ್ಧದ ಸ್ವರೂಪ ಅತ್ಯಂತ ಭೀಕರವಾಗಿರಲಿದೆ, ಹಾಗಾಗಿ 42 ವರ್ಷಗಳ ಹಿಂದಿನ ಭೀಭತ್ಸ ಯುದ್ಧ ಮತ್ತೆ ಮರುಕಳಿಸುತ್ತಾ? ಎಂಬುದನ್ನು ಕಾದುನೋಡಬೇಕಿದೆ.

1980 ರ ದಶಕದಲ್ಲಿ ಏನಾಗಿತ್ತು?
1979 ರ ಇರಾನ್ ಕ್ರಾಂತಿಕಾರಿ ಪಡೆಯು ಟೆಹ್ರಾನ್‌ನಲ್ಲಿದ್ದ ಯುಎಸ್ ರಾಯಭಾರ ಕಚೇರಿಯಲ್ಲಿ 52 ಜನರನ್ನ ಒತ್ತೆಯಾಳಾಗಿ ಇರಿಸಿಕೊಂಡಿತ್ತು. ಆ ಬಳಿಕ ಅಮೆರಿಕ, ಇರಾನ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನ ಕಡಿದುಕೊಂಡಿತು. 1980 ರಲ್ಲಿ ಇರಾಕ್‌ನ ಸದ್ದಾಂ ಹುಸೇನ್ ಇರಾನ್ ಮೇಲೆ ಅಕ್ರಮಣ ಮಾಡಿದಾಗ, ಅಮೆರಿಕ ಕೂಡ ಬೆಂಬಲ ನೀಡಿತ್ತು. ಇರಾನ್ – ಇರಾಕ್ ಯುದ್ಧ ಸುಮಾರು 8 ವರ್ಷಗಳ ಕಾಲ ನಡೆಯಿತು. ಈ ಮಧ್ಯೆ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡ್ಡಿಯುಉಂಟುಮಾಡುವ ಬೆದರಿಕೆಯನ್ನು ಉಭಯ ರಾಷ್ಟ್ರಗಳು ಒಡ್ಡುತ್ತಿದ್ದವು. 1984 ರಲ್ಲಿ ಇರಾಕ್, ಇರಾನ್‌ನ ಕೆಲವು ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ಮಾಡಿತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲೇಬೇಕೆಂದು ಪಣ ತೊಟ್ಟಿದ್ದ ಇರಾಕ್, ಪರ್ಷಿಯನ್ ಕೊಲ್ಲಿಗಳಲ್ಲಿ ಮೈನ್ಸ್‌ಗಳನ್ನು (ಜಲಬಾಂಬ್) ಸ್ಫೋಟಿಸುವ ಮೂಲಕ ಸಶಸ್ತ್ರ ಸ್ಪೀಡ್ ಬೋಟ್‌ಗಳನ್ನು ಬಳಸಿ, ಇರಾಕ್, ಕುವೈತ್ ಮತ್ತು ಸೌದಿ ಟ್ಯಾಂಕರ್‌ಗಳ ಮೇಲೆ ದಾಳಿ ಮಾಡಲು ಶುರು ಮಾಡಿತು.
ಈ ಮಧ್ಯೆ 1988 ರಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ತಟಸ್ಥ ಟ್ಯಾಂಕರ್‌ಗಳನ್ನ ಸುರಕ್ಷಿತವಾಗಿ ಕರೆತರಲು ಅಮೆರಿಕ ತನ್ನ ಯುದ್ಧ ನೌಕೆಗಳನ್ನ ಕಳಿಸಿತ್ತು. ಆದ್ರೆ ಪರ್ಷಿಯನ್ ಕೊಲ್ಲಿಯಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಇರಾನ್ ಯುದ್ಧನೌಕೆಯು ಅಮೆರಿಕದ ಯುಎಸ್‌ಎಸ್ ಸ್ಯಾಮ್ಯುಯೆಲ್ ಬಿ. ರಾಬರ್ಟ್ಸ್ ಇರಾನ್‌ನ ಮೈನ್ಸ್ ಹೊಡೆದು ಹಾನಿಗೆ ಒಳಗಾಯಿತು.
ಸದ್ಯ ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮದ ಬಳಿಕವೂ ದಾಳಿಗಳು ಮುಂದುವರಿಯುತ್ತಿದ್ದು, ಮತ್ತೆ ಟ್ಯಾಂಕರ್ ಯುದ್ಧ ಸಂಭವಿಸುವ ಸಾಧ್ಯತೆಗಳು ಏರ್ಪಡುತ್ತಿವೆ. ಇದು ಸಂಭವಿಸಿದಲ್ಲಿ, ವಿಶ್ವದ ಇತರ ರಾಷ್ಟ್ರಗಳು ಯುದ್ಧಕ್ಕೆ ಧುಮುಕುವ ಸಾಧ್ಯತೆಗಳಿವೆ.

