ಪಶ್ಚಿಮ ಘಟ್ಟಗಳ (Western Ghats) ಸಂರಕ್ಷಣೆಗೆ ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯ ಯೋಜನೆ (Ecologically Sensitive Area) ಜಾರಿಗೆ ತರಲು ಮುಂದಾಗಿದೆ. 2022 ರಿಂದಲೂ ಕೇಂದ್ರ ಹಂತ-ಹಂತವಾಗಿ ESA ಜಾರಿಗೆ ಚಿಂತನೆ ನಡೆಸಿದೆ. ಕಸ್ತೂರಿ ರಂಗನ್ ವರದಿ ಶಿಫಾರಸು ಆಧಾರದ ಮೇಲೆ 56,825 ಚ.ಕಿ.ಮೀ ಪ್ರದೇಶವನ್ನು ESA ಎಂದು ಗುರುತಿಸಲಾಗಿದೆ. ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ವ್ಯಾಪ್ತಿಯಲ್ಲಿ ಬರುತ್ತದೆ. ಈ ಯೋಜನೆಯ ಒಳಿತು ಕೆಡಕುಗಳ ಬಗ್ಗೆ ಒಂದು ದಶಕದಿಂದಲೂ ಚರ್ಚೆ ನಡೆಯುತ್ತಲೇ ಇದೆ. ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ESA ಯೋಜನೆ ಏನು? ಇದರ ಉಪಯೋಗ? ಜನರ ವಿರೋಧ ಯಾಕೆ ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಏನಿದು ಪರಿಸರ ಸೂಕ್ಷ್ಮ ಪ್ರದೇಶ?
1986 ರ ಪರಿಸರ (ಸಂರಕ್ಷಣೆ) ಕಾಯ್ದೆಯಡಿ ವಿಶೇಷ ಪರಿಸರ ರಕ್ಷಣೆಗಾಗಿ ಗುರುತಿಸಲಾದ ಪ್ರದೇಶಗಳನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ (ಇಎಸ್‌ಎ) ಎನ್ನಲಾಗುತ್ತದೆ. ಇದರ ಉದ್ದೇಶ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದಲ್ಲ. ಬದಲಿಗೆ, ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹಾನಿ ಮಾಡುವ ಕೆಲವು ಚಟುವಟಿಕೆಗಳನ್ನು ನಿಯಂತ್ರಿಸುವುದಾಗಿದೆ. ಒಮ್ಮೆ ಈ ಅಧಿಸೂಚನೆ ಜಾರಿಯಾದರೆ, ಕೆಲವು ಕೈಗಾರಿಕೆಗಳು ಮತ್ತು ಯೋಜನೆಗಳು ಪರಿಶೀಲನೆಗೆ ಒಳಗಾಗಬೇಕಾಗುತ್ತದೆ.

ಗಾಡ್ಗೀಳ್ ವರದಿ (2010): ಪ್ರಸಿದ್ಧ ಪರಿಸರ ತಜ್ಞ ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿಯು ಇಡೀ ಪಶ್ಚಿಮ ಘಟ್ಟ ಪ್ರದೇಶವನ್ನೇ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಶಿಫಾರಸು ಮಾಡಿತ್ತು. ಆದರೆ ರಾಜ್ಯಗಳು ಇದನ್ನು ತೀವ್ರವಾಗಿ ವಿರೋಧಿಸಿದವು.
ಕಸ್ತೂರಿರಂಗನ್ ವರದಿ (2012): ವಿರೋಧದ ಬೆನ್ನಲ್ಲೇ ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಲಾಯಿತು. ಈ ಸಮಿತಿಯು ಮಧ್ಯಮ ಮಾರ್ಗವನ್ನು ಅನುಸರಿಸಿತು. ಇಡೀ ಪಶ್ಚಿಮ ಘಟ್ಟಗಳ ಬದಲಿಗೆ, ಕೇವಲ ದಟ್ಟ ಅರಣ್ಯ ಮತ್ತು ನೈಸರ್ಗಿಕ ಪ್ರದೇಶಗಳನ್ನು ಮಾತ್ರ (Natural Landscapes) ರಕ್ಷಿಸಲು ಮತ್ತು ಮಾನವ ವಸಾಹತು, ಕೃಷಿ ಭೂಮಿಯನ್ನು (Cultural Landscapes) ಇದರಿಂದ ಹೊರಗಿಡಲು ಶಿಫಾರಸು ಮಾಡಿತು. ಆದರೆ, ಈ ಪರಿಷ್ಕೃತ ವರದಿಗೂ ವಿರೋಧ ವ್ಯಕ್ತವಾದ ಕಾರಣ 2014 ರಿಂದೀಚೆಗೆ ಕೇಂದ್ರ ಸರ್ಕಾರ ಆರು ಬಾರಿ ಕರಡು ಅಧಿಸೂಚನೆಗಳನ್ನು ಹೊರಡಿಸಬೇಕಾಯಿತು.
ಪಶ್ಚಿಮ ಘಟ್ಟಗಳ ಮಹತ್ವ
ಭಾರತದ ಪಶ್ಚಿಮ ಕರಾವಳಿಯುದ್ದಕ್ಕೂ ಸುಮಾರು 1,600 ಕಿಲೋಮೀಟರ್‌ಗಳಷ್ಟು ಉದ್ದಕ್ಕೆ ಹರಡಿರುವ ಪಶ್ಚಿಮ ಘಟ್ಟಗಳು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹರಡಿಕೊಂಡಿವೆ.
ESA ಯಾಕೆ ಮುಖ್ಯ?
ಇದು ವಿಶ್ವದ ಎಂಟು ಶ್ರೀಮಂತ ಜೀವವೈವಿಧ್ಯತೆಯ ತಾಣಗಳಲ್ಲಿ (Hottest Biodiversity Hotspots) ಒಂದಾಗಿದೆ. ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ನೂರಾರು ಅಪರೂಪದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ಆವಾಸಸ್ಥಾನವಾಗಿದೆ. ಭಾರತದ ಮಾನ್ಸೂನ್ (ಮಳೆ) ವ್ಯವಸ್ಥೆಯ ಮೇಲೆ ಇದು ಭಾರಿ ಪ್ರಭಾವ ಬೀರುತ್ತದೆ. ದಕ್ಷಿಣ ಭಾರತದ ಪ್ರಮುಖ ನದಿಗಳಾದ ಕೃಷ್ಣಾ, ಗೋದಾವರಿ, ಕಾವೇರಿ, ಪೆರಿಯಾರ್, ಮಾಂಡೋವಿ ಮತ್ತು ಶರಾವತಿ ನದಿಗಳ ಉಗಮ ಸ್ಥಾನ ಇದಾಗಿದ್ದು, ಇದನ್ನು ದಕ್ಷಿಣ ಭಾರತದ ವಾಟರ್ ಟವರ್ ಎಂದು ಕರೆಯಲಾಗುತ್ತದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಈ ವಲಯವದ ರಕ್ಷಣೆಗೆ ನಿಯಮಗಳ ಜಾರಿಗೆ ಮುಂದಾಗಿದೆ.

ESA ಜಾರಿಯಿಂದ ಏನೆಲ್ಲ ನಿಷೇಧ?
ಸಂಪೂರ್ಣ ನಿಷೇಧ: ಹೊಸ ಗಣಿಗಾರಿಕೆ, ಕಲ್ಲುಗಣಿ, ಥರ್ಮಲ್ ಪವರ್ ಪ್ಲಾಂಟ್, ರೆಡ್-ಕ್ಯಾಟಗರಿ ಮಾಲಿನ್ಯ ಕಾರ್ಖಾನೆಗಳು. ಕಟ್ಟಡಗಳ ನಿರ್ಮಾಣಕ್ಕೆ ನಿಷೇಧ ಹೇರಲಾಗುತ್ತದೆ.
ನಿಯಂತ್ರಣ: 20,000 ಚ.ಮೀ ಗಿಂತ ದೊಡ್ಡ ವಾಣಿಜ್ಯ ಕಟ್ಟಡ, ಟೌನ್‌ಶಿಪ್ ನಿರ್ಮಾಣಕ್ಕೆ ನಿಷೇಧ ಹೇರಲಾಗುತ್ತದೆ.
ಕೃಷಿ: ಭಾರೀ ಕೀಟನಾಶಕ, ಮಾರ್ಪಡಿಸಿದ ತಳಿಯ ಬೆಳೆಗಳ ಮೇಲೆ ನಿಷೇಧ ಹೇರಲಾಗುತ್ತದೆ. ಸಾವಯವ ಕೃಷಿ, ಮಳೆ ನೀರು ಕೊಯ್ಲಿಗೆ ಅವಕಾಶ ಒದಗಿಸಲಾಗುತ್ತದೆ.
ಜಲವಿದ್ಯುತ್: ನದಿ ಹರಿವು ಮತ್ತು ಯೋಜನೆಗಳ ಅಂತರ ಪರಿಗಣಿಸಿ ಅನುಮತಿ ನೀಡಲಾಗುತ್ತದೆ.
ಕರ್ನಾಟಕದ ಸ್ಥಿತಿ ಏನು?
ESA ವ್ಯಾಪ್ತಿಯಲ್ಲಿ ಕರ್ನಾಟಕದ ಒಟ್ಟು ಪ್ರದೇಶ 20,668 ಚ.ಕಿ.ಮೀ ಪ್ರದೇಶ ಒಳಪಡುತ್ತದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ದ.ಕನ್ನಡ ಜಿಲ್ಲೆಗಳ ಸಾವಿರಾರು ಹೆಕ್ಟೇರ್ ಜಾಗ ಇದರಲ್ಲಿ ಬರಲಿದೆ.
ಕರ್ನಾಟಕ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗೆ ನಿರಂತರ ವಿರೋಧ ವ್ಯಕ್ತಪಡಿಸಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೊಳಿಸದಿರಲು ನಿರ್ಣಯ ಕೈಗೊಂಡಿದೆ. ವರದಿಯ ಜಾರಿಯಾದರೆ ಜೀವನೋಪಾಯಕ್ಕೆ ತೊಂದರೆಯಾಲಿದೆ. ಗುರುತಿಸಲಾದ ಗ್ರಾಮಗಳ ಜನರ ಭೂಮಿ ಹಕ್ಕು ಹೋಗಲಿದೆ ಎಂಬ ಆತಂಕವಿದೆ. ಗುಜರಾತ್, ಮಹಾರಾಷ್ಟ್ರ, ಗೋವಾ ಈ ಯೋಜನೆಗೆ ಒಪ್ಪಿದ್ದರೆ, ಕರ್ನಾಟಕ-ಕೇರಳದಲ್ಲಿ ವಿರೋಧವಿದೆ.
ಯಾಕೆ ವಿರೋಧ?
5 ರಾಜ್ಯಗಳ ಸಾವಿರಾರು ಗ್ರಾಮಗಳ ಕಾಫಿ-ಅಡಿಕೆ-ಏಲಕ್ಕಿ ತೋಟಗಳು ESA ಒಳಗೆ ಬಂದ್ರೆ ಹೊಸ ಕಟ್ಟಡ, ಗಣಿಗಾರಿಕೆ, ದೊಡ್ಡ ಪ್ರಾಜೆಕ್ಟ್‌ಗಳಿಗೆ ನಿರ್ಬಂಧ ಬೀಳುತ್ತೆ ಅನ್ನೋದು ಜನರ ಆತಂಕಕ್ಕೆ ಕಾರಣವಾಗಿದೆ.
