ಬೆಳಿಗ್ಗೆ ಎದ್ದ ಮೇಲೆ ಇವತ್ತು ತಿಂಡಿಗೆ ಏನು ಮಾಡುವುದು ಎಂಬ ಗೊಂದಲ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಅದರಲ್ಲೂ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಸೊಪ್ಪುಗಳನ್ನು ತಿನ್ನಿಸುವುದು ಪೋಷಕರಿಗೆ ದೊಡ್ಡ ಸವಾಲು. ಈ ಎಲ್ಲಾ ಸಮಸ್ಯೆಗಳಿಗೆ ಇಲ್ಲಿದೆ ಒಂದು ಪರಿಹಾರ. ನಿಮ್ಮ ದೈನಂದಿನ ಇಡ್ಲಿಗೆ ಕೊಂಚ ಟ್ವಿಸ್ಟ್ ನೀಡಿ, ಪಾಲಕ್ ಸೊಪ್ಪು ಮತ್ತು ಆಲೂಗಡ್ಡೆಯ ಮಸಾಲೆಯನ್ನು ಬಳಸಿ ಸ್ಟಫ್ಡ್ ಪಾಲಕ್ ಇಡ್ಲಿ (Stuffed Palak Idli) ಮಾಡಿ.

ಬೇಕಾಗುವ ಪದಾರ್ಥಗಳು:
ಇಡ್ಲಿ ಹಿಟ್ಟಿಗೆ:
- ಇಡ್ಲಿ ಹಿಟ್ಟು
- ಪಾಲಕ್ ಸೊಪ್ಪು
- ಹಸಿರು ಮೆಣಸಿನಕಾಯಿ
- ಶುಂಠಿ
- ಉಪ್ಪು
ಸ್ಟಫಿಂಗ್:
- ಬೇಯಿಸಿದ ಆಲೂಗಡ್ಡೆ
- ಈರುಳ್ಳಿ
- ಸಾಸಿವೆ
- ಜೀರಿಗೆ
- ಅರಿಶಿನ ಪುಡಿ
- ಗರಂ ಮಸಾಲಾ
- ಕೊತ್ತಂಬರಿ ಸೊಪ್ಪು
- ಎಣ್ಣೆ
ಮಾಡುವ ವಿಧಾನ:
ಮೊದಲು ಬಾಣಲೆಯಲ್ಲಿ ನೀರನ್ನು ಕಾಯಿಸಿ, ಅದರಲ್ಲಿ ತೊಳೆದ ಪಾಲಕ್ ಸೊಪ್ಪನ್ನು ಕೇವಲ 2 ನಿಮಿಷ ಬೇಯಿಸಿ, ತಣ್ಣಗಾಗಲು ಬಿಡಿ. ನಂತರ ಮಿಕ್ಸಿ ಜಾರ್‌ಗೆ ಪಾಲಕ್, ಹಸಿರು ಮೆಣಸಿನಕಾಯಿ ಮತ್ತು ಶುಂಠಿ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ನಾವು ರೆಡಿ ಮಾಡಿಟ್ಟುಕೊಂಡ ಪಾಲಕ್ ಪೇಸ್ಟ್ ಅನ್ನು ಇಡ್ಲಿ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ ಒಗ್ಗರಣೆ ಕೊಡಿ. ನಂತರ ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ಅರಿಶಿನ, ಗರಂ ಮಸಾಲಾ, ಉಪ್ಪು ಮತ್ತು ಬೇಯಿಸಿದ ಆಲೂಗಡ್ಡೆ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ ಕೆಳಗಿಳಿಸಿ. ಈ ಮಿಶ್ರಣ ತಣ್ಣಗಾದ ಮೇಲೆ ಸಣ್ಣ ಸಣ್ಣ ತಟ್ಟೆಯಾಕಾರದ ಉಂಡೆಗಳನ್ನು ಮಾಡಿಟ್ಟುಕೊಳ್ಳಿ.
ಈಗ ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ, ಮೊದಲು 1 ಚಮಚ ಹಸಿರು ಇಡ್ಲಿ ಹಿಟ್ಟನ್ನು ಹಾಕಿ. ಅದರ ಮಧ್ಯದಲ್ಲಿ ನಾವು ಸಿದ್ಧಪಡಿಸಿದ ಆಲೂಗಡ್ಡೆ ತಟ್ಟೆಯನ್ನು ಇಡಿ. ಈಗ ಆ ಆಲೂಗಡ್ಡೆ ಮಸಾಲೆಯ ಮೇಲೆ ಮತ್ತೊಂದು ಚಮಚ ಇಡ್ಲಿ ಹಿಟ್ಟನ್ನು ಹಾಕಿ ಮಸಾಲೆಯನ್ನು ಸಂಪೂರ್ಣವಾಗಿ ಮುಚ್ಚಿ. ನಂತರ ಸುಮಾರು 10 ರಿಂದ 12 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ.
ಬಇದನ್ನು ಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ತಿನ್ನಲು ಚೆನ್ನಾಗಿರುತ್ತದೆ.
