ಬೆಂಗಳೂರು: ಚಿತ್ರ ನಟಿಯರ ಮೀಟೂ ಆರೋಪಗಳಿಂದ ಚಲನಚಿತ್ರ ವಾಣಿಜ್ಯ ಮಂಡಳಿ ಎಚ್ಚೆತ್ತುಕೊಂಡಿದ್ದು, ಇನ್ನು ಮುಂದೆ ಇಂತಹ ವಿವಾದಗಳನ್ನು ತಡೆಯಲು ನಿರ್ಮಾಪಕ ರಕ್ಷಣಾ ಸಮಿತಿ ಸಮಿತಿ ರಚಿಸಲು ಚಿಂತನೆ ನಡೆಸಿದೆ.
ಇನ್ನು ಮೂರು ದಿನಗಳಲ್ಲಿ ರೂಪು ರೇಷೆ ರಚಿಸಿ ಮೀಟೂವಿನಂತಹ ವಿವಾದವನ್ನ ತಡೆಗಟ್ಟಲು ವಾಣಿಜ್ಯ ಮಂಡಳಿ ಮುಂದಾಗಿದೆ. ಅಕ್ಟೋಬರ್ 30 ರಂದು ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು, ಇನ್ಮುಂದೆ ಈ ರೀತಿ ದೂರುಗಳು ಬಂದಾಗ ಏನ್ ಮಾಡಬೇಕು ಅಂತ ಸಮಾಲೋಚನೆ ನಡೆಸುತ್ತೇವೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್‍ಎ ಚಿನ್ನೇಗೌಡ ಹೇಳಿದ್ದಾರೆ.
ಮೀಟೂ ಅನುಭವ ಆಗಿರುವರು ಕೋರ್ಟ್ ಗೆ ಹೋಗುವ ಮುನ್ನವೇ ವಾಣಿಜ್ಯ ಮಂಡಳಿಗೆ ಬರಬೇಕು. ಕೋರ್ಟ್ ಗೆ ಹೋಗಿ ಅನಂತರ ಬಂದಲ್ಲಿ ನಾವು ಜವಾಬ್ದಾರರಲ್ಲ. ಸರ್ಜಾ ಹಾಗೂ ಶ್ರುತಿ ಇಬ್ಬರು ತಮ್ಮ ಇಮೇಜ್ ಗೆ ಧಕ್ಕೆಯಾಗಿದೆ ಎಂದಿದ್ದು ಮಾತ್ರವಲ್ಲದೇ ಇಬ್ಬರೂ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದರು. ಹಿರಿಯ ನಟ ಅಂಬರೀಶ್ ಅವರು ಇಬ್ಬರನ್ನು ಮನವೊಲಿಸಲು ಪ್ರಯತ್ನಿಸಿದರು. ಶುಕ್ರವಾರ ಹತ್ತು ಗಂಟೆಯವರೆಗೆ ಕಾಯ್ತಿನಿ ಅಂತ ಹೇಳಿದ್ದರೂ ರಾತ್ರಿಯೇ ದೂರು ದಾಖಲಿಸಿದ್ದಾರೆ. ಗುರುವಾರ ನಡೆದ ಸಂಧಾನ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸದೇ ಇರಲು ನಿರ್ಧರಿಸಿದೆ ಎಂದರು.