ಶಿವಮೊಗ್ಗ: ಲಿಂಗನಮಕ್ಕಿ ಜಲ ವಿದ್ಯುತ್ ಯೋಜನೆಯ (Linganamakki Hydropower Project) ಶರಾವತಿ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಪೈಪ್ ಸಮಸ್ಯೆಯಿಂದ ಏಕಾಏಕಿ ನೀರು ನುಗ್ಗಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಇಂದು ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಬಳಿಯ ಶರಾವತಿ ವಿದ್ಯುದಾಗರದ (Sharavathi Power Station) ಆವರಣ ಮತ್ತು ಟರ್ಬೈನ್ ಬಳಿ ನೀರು ನುಗ್ಗಿದ್ದರಿಂದ, ಎಲ್ಲಾ ಯೂನಿಟ್ ಗಳಲ್ಲಿ ಕೆಲ ಕಾಲ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ಗೋಲ್‌ಮಾಲ್ ಆಗಿಲ್ಲ – ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ ಸ್ಪಷ್ಟನೆ

ಲಿಂಗನಮಕ್ಕಿ ಜಲಾಶಯದ ಶರಾವತಿ ವಿದ್ಯುದಾಗಾರದಲ್ಲಿ 10 ಯುನಿಟ್‌ಗಳಿದ್ದು, ತಲಾ 103.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈ ಘಟಕಗಳಿಗೆ ತಲಕಳಲೆ ಸಮಾನಾಂತರ ಜಲಾಶಯದಿಂದ 400 ಮೀಟರ್ ಎತ್ತರದಿಂದ ಬೃಹತ್ ಪೈಪ್‌ಗಳ ಮೂಲಕ ಟರ್ಬೈನ್‌ಗಳಿಗೆ ನೀರು ಹರಿಸಲಾಗುತ್ತದೆ. ಜಲಾಶಯದಲ್ಲಿ ನೀರು ಕಡಿಮೆ ಇದ್ದು, 10 ರಲ್ಲಿ ಕೇವಲ ಮೂರು ಯುನಿಟ್‌ಗಳನ್ನ ರನ್ ಮಾಡಲಾಗುತ್ತಿದೆ.
ಗುರುವಾರ 7ನೇ ಯೂನಿಟ್‌ಗೆ ಬಳಸದ ಕಾರಣ ನಿರ್ವಹಣೆ ಮಾಡಲಾಗುತಿತ್ತು. ಇದಕ್ಕಾಗಿ ಪೈಪ್‌ನಲ್ಲಿದ್ದ ನೀರನ್ನು ಖಾಲಿ ಮಾಡಲಾಗಿತ್ತು. ಬೃಹತ್ ಗಾತ್ರದ ಪೈಪ್‌ಗಳಿಗೆ ಡ್ರೈನ್ ಪೈಪ್‌ಗಳನ್ನು ಅಳವಡಿಸಲಾಗಿದ್ದು ಇದರಲ್ಲಿ ಲೀಕೇಜ್ ಇದ್ದ ಕಾರಣ ಪೈಪ್‌ನಲ್ಲಿ ನೀರು ತುಂಬಿ ಏಕಾಏಕಿ 7ನೇ ಯುನಿಟ್‌ಗೆ ನುಗ್ಗಿದೆ. ಇದರಿಂದ ಟರ್ಬೈನ್ ಸುತ್ತಮುತ್ತ ಒಂದೂವರೆ ಅಡಿಯಷ್ಟು ತುಂಬಿಕೊಂಡಿದೆ.

ನೀರು ನುಗ್ಗುತ್ತಿದ್ದಂತೆ ಸಿಬ್ಬಂದಿ ಆತಂಕಗೊಂಡು ಚಾಲನೆಯಲ್ಲಿದ್ದ ಎಲ್ಲಾ ಯೂನಿಟ್‌ಗಳನ್ನು ನಿಲ್ಲಿಸಿದ್ದಾರೆ. ಕೆಲವೇ ಗಂಟೆಯಲ್ಲಿ ನಿಂತಿದ್ದ ನೀರು ಖಾಲಿಯಾಗಿದ್ದು, ಎಲ್ಲಾ ಯುನಿಟ್‌ಗಳನ್ನ ಪರಿಶೀಲಿಸಿ ಸಂಜೆ ಹೊತ್ತಿಗೆ ವಿದ್ಯುತ್ ಉತ್ಪಾದನೆ ಶುರು ಮಾಡಲಾಗಿದೆ.
ಶರಾವತಿ ವಿದ್ಯುದಾಗಾರವು 1964 ರಿಂದಲೂ ಚಾಲ್ತಿಯಲ್ಲಿದೆ. ಸದ್ಯ ಅವಘಡಕ್ಕೆ ಒಳಗಾಗಿರುವ 7ನೇ ಯೂನಿಟ್ 1968 ರಿಂದ ಬಳಕೆಯಲ್ಲಿದೆ. ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಕಳ್ಳತನ ವಿವಾದ – SIT ವರದಿ ಬಳಿಕ 8 ಮಂದಿ ವಿರುದ್ಧ ಎಫ್‌ಐಆರ್, ಇಬ್ಬರು ಅರೆಸ್ಟ್
