ಮಾಸ್ಕೋ: ಉತ್ತರ ಪ್ರದೇಶದ (Uttar Pradesh) ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತದಲ್ಲಿ 121 ಜನರು ಸಾವನ್ನಪ್ಪಿದ ಘಟನೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ (Fumio Kishida) ಸಂತಾಪ ಸೂಚಿಸಿದ್ದಾರೆ.
ವ್ಲಾಡಿಮಿರ್ ಪುಟಿನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಸಂತಾಪ ಸಂದೇಶವನ್ನು ಕಳುಹಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸಂಭವಿಸಿದ ದುರಂತದ ಕುರಿತು ತೀವ್ರ ಸಂತಾಪ ಸೂಚಿಸಿರುವ ರಷ್ಯಾ, ಎಕ್ಸ್‌ನಲ್ಲಿ ತನ್ನ ಸಂದೇಶವನ್ನು ಹಂಚಿಕೊಂಡಿದೆ. ಅದರಂತೆ ಜಪಾನ್ ಪ್ರಧಾನಿ ಕಿಶಿದಾ ಅವರು ಸಹ ಉತ್ತರ ಪ್ರದೇಶದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಹಲವಾರು ಅಮೂಲ್ಯ ಜೀವಗಳು ಬಲಿಯಾಗಿವೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಸಂದೇಶವನ್ನು ಜಪಾನ್‍ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‍ಸೈಟ್‍ನಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಮಣ್ಣು ಕುಸಿತ ಪ್ರಕರಣ- ಮಣ್ಣಿನಡಿ ಸಿಲುಕಿದ ಕಾರ್ಮಿಕ ದುರ್ಮರಣ
ಉತ್ತರ ಪ್ರದೇಶದ ಹತ್ರಾಸ್ (Hathras) ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಂಗಳವಾರ (ಜು.2) ಕಾಲ್ತುಳಿತ ಸಂಭವಿಸಿತ್ತು. ಕೇವಲ 80,000 ಮಂದಿಗೆ ಮಾತ್ರ ಅನುಮತಿ ನೀಡಲಾಗಿದ್ದ ಕಾರ್ಯಕ್ರಮಕ್ಕೆ 2.5 ಲಕ್ಷ ಜನರು ಸೇರಿದ್ದ ಪರಿಣಾಮ ಈ ಅವಘಡ ಸಂಭವಿಸಿತ್ತು. ಈ ಅವಘಡದಲ್ಲಿ ಇಲ್ಲಿಯವರೆಗೂ 121 ಜನ ಸಾವಿಗೀಡಾಗಿದ್ದಾರೆ.
ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶ ಪೊಲೀಸರು ಬುಧವಾರ ಧಾರ್ಮಿಕ ಸಭೆಯ ಸಂಘಟಕರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹತ್ರಾಸ್ ಕಾಲ್ತುಳಿತಕ್ಕೆ 116 ಮಂದಿ ಬಲಿ – ಅಂದು ಹೆಡ್ ಕಾನ್‌ಸ್ಟೇಬಲ್ ಈಗ ಸ್ವಯಂಘೋಷಿತ ಗುರು!