ಮುಂಬೈ: ಜೂನ್ 13ರಿಂದ ಮಲ್ಲನ್‌ಪುರದಲ್ಲಿ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಹಾಗೂ 3 ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗುತ್ತಿರುವ ಭಾರತ ಕ್ರಿಕೆಟ್ (Team India) ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಸ್ನಾಯು ಸೆಳೆತದಿಂದಾಗಿ ಈಗಾಗಲೇ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಸರಣಿಯಿಂದ ಹೊರಬಿದ್ದ ಬೆನ್ನಲ್ಲೇ ಈಗ ನಾಯಕ ರೋಹಿತ್ ಶರ್ಮಾ (Rohit Sharma) ಹೊರ ಬೀಳುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ಸರಣಿಗೂ ಮುನ್ನ ಬೆಂಗಳೂರಿನ (Bengaluru) ಸೆಂಟರ್ ಆಫ್ ಎಕ್ಸಲೆನ್ಸ್ (CoE) ಗೆ ತೆರಳಿ ಕಡ್ಡಾಯವಾಗಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗುವಂತೆ ಬಿಸಿಸಿಐ (BCCI) ಸೂಚಿಸಿತ್ತು. ಆದರೆ ರೋಹಿತ್ ಶರ್ಮಾ ಬೆಂಗಳೂರಿಗೆ ಬರುವ ಬದಲು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಅನ್ನು ಸಂಪರ್ಕಿಸಿದ್ದಾರೆ.
ಜೂನ್ 8 ಮತ್ತು 9 ರಂದು ಮೊಹಾಲಿಯ ಐ.ಎಸ್. ಬಿಂದ್ರಾ ಕ್ರೀಡಾಂಗಣದಲ್ಲಿ ತಾವು ನೇರವಾಗಿ ಅಭ್ಯಾಸ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಬಿಸಿಸಿಐ (BCCI) ನಿಯಮದಂತೆ ಫಿಟ್‌ನೆಸ್ ಟೆಸ್ಟ್ ಪಾಸ್ ಮಾಡದ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವುದು ಕಷ್ಟಸಾಧ್ಯವಾಗಿರುವುದರಿಂದ ಅಫ್ಘಾನ್ ವಿರುದ್ಧದ ಸರಣಿಯಲ್ಲಿ ಹಿಟ್‌ಮ್ಯಾನ್ ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ. ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಗಾಯ – ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಔಟ್

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಈಗಾಗಲೇ ಅಂತರರಾಷ್ಟ್ರೀಯ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಕೇವಲ ಏಕದಿನ (ODI) ಮಾದರಿಯಲ್ಲಿ ಮಾತ್ರ ಮುಂದುವರೆಯುತ್ತಿದ್ದಾರೆ. ಹೀಗಾಗಿ ಇವರಿಬ್ಬರ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಸದ್ಯ ಭಾರಿ ನಿರಾಸೆಯಾಗಿದೆ. ಕೊಹ್ಲಿ ಗಾಯದಿಂದ ಹೊರಗುಳಿದಿದ್ದರೆ, ರೋಹಿತ್ ಶರ್ಮಾ ಅವರ ಆಟ ಇನ್ನೂ ನಿಗೂಢವಾಗಿದೆ.
ಈ ವರ್ಷದ ಜನವರಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರೂ ಪಂದ್ಯಗಳಲ್ಲಿ ಆಡಿದ್ದ ರೋಹಿತ್ ಶರ್ಮಾ, ಕೇವಲ 61 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಈ ಬಾರಿಯ ಐಪಿಎಲ್‌ನಲ್ಲೂ ಅವರ ಬ್ಯಾಟಿಂಗ್ ವೈಫಲ್ಯ ಮುಂದುವರಿದಿತ್ತು. ಆಡಿದ 9 ಪಂದ್ಯಗಳಲ್ಲಿ 35.37ರ ಸರಾಸರಿ ಹಾಗೂ 157.22ರ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 283 ರನ್ ಕಲೆಹಾಕಿದ್ದರು.
ಒಂದೆಡೆ ಕಳಪೆ ಫಾರ್ಮ್, ಮತ್ತೊಂದೆಡೆ ಫಿಟ್‌ನೆಸ್ ಪರೀಕ್ಷೆಯ ವಿವಾದ ಈ ಎರಡರ ನಡುವೆ ನಾಯಕ ರೋಹಿತ್ ಶರ್ಮಾ ಅಫ್ಘಾನಿಸ್ತಾನ ಸರಣಿಯ ಏಕದಿನ ಪಂದ್ಯಗಳಲ್ಲಿ ಜೂನ್ 13ಕ್ಕೆ ಮೈದಾನಕ್ಕಿಳಿಯುತ್ತಾರಾ ಎಂಬುದನ್ನು ಬಿಸಿಸಿಐನ ಮುಂದಿನ ಪ್ರಕಟಣೆಯಷ್ಟೇ ಸ್ಪಷ್ಟಪಡಿಸಬೇಕಿದೆ.

