– ಆಸ್ಪತ್ರೆ ಮುಂದೆ ಗ್ರಾಮಸ್ಥರ ಆಕ್ರೋಶ
ಚಿಕ್ಕಬಳ್ಳಾಪುರ: ಜಿಲ್ಲೆಯ ಪೆರೇಸಂದ್ರ ಗ್ರಾಮ… ಚಿಕ್ಕಬಳ್ಳಾಪುರ (Chikkaballapura) ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಪವರ್ ಸೆಂಟರ್, ಇದು ಸಂಸದ ಡಾ.ಕೆ ಸುಧಾಕರ್ (Dr. K Sudhakar) ಹಾಗೂ ಶಾಸಕ ಪ್ರದೀಪ್ ಈಶ್ವರ್ ಅವರ ತವರು ಗ್ರಾಮ. ಆದರೆ ಇದೇ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಸಕಾಲಕ್ಕೆ ವೈದ್ಯರಿಲ್ಲ, ಅಗತ್ಯ ವೈದ್ಯಕೀಯ ಸೌಲಭ್ಯಗಳಿಲ್ಲ ಎಂಬ ಆರೋಪ ಕೇಳಿಬಂದಿದೆ. ತೀವ್ರ ಅಸ್ವಸ್ಥಗೊಂಡ 8 ವರ್ಷದ ಬಾಲಕಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಘಟನೆ ಬಳಿಕ ಗ್ರಾಮಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.
ಪೆರೇಸಂದ್ರ ಗ್ರಾಮದ ಚಂದ್ರಿಕಾ ಮತ್ತು ನವೀನ್ ದಂಪತಿಯ 8 ವರ್ಷದ ಪುತ್ರಿ ಶಶಿಕಲಾ ನಿನ್ನೆ ಸಂಜೆ ಮನೆ ಮೇಲೆ ಕೋತಿ ಬಂದಿದೆ ಅಂತ ಭಯದಿಂದ ಮನೆಗೆ ಓಡಿ ಬಂದಿದ್ದಾಳೆ. ಏಕಾಏಕಿ ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ್ದಾಳೆ. ಕೂಡಲೇ ಕುಟುಂಬಸ್ಥರು ಆಕೆಯನ್ನ ಪೆರೇಸಂದ್ರ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಭಾನುವಾರವಾದ ಕಾರಣ ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಅಗತ್ಯ ವೈದ್ಯಕೀಯ ಉಪಕರಣಗಳೂ ಇಲ್ಲ. ಕರ್ತವ್ಯದಲ್ಲಿದ್ದ ನರ್ಸ್ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ, ಇದರಿಂದ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಗ್ರಾಮಸ್ಥರಿಂದ ಆಸ್ಪತ್ರೆ ಎದುರು ಪ್ರತಿಭಟನೆ
ಇನ್ನೂ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಆಸ್ಪತ್ರೆ ಮುಂದೆ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಿಸಬೇಕು. ಆಕ್ಸಿಜನ್ ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಮನೆ ಬಾಗಿಲಿಗೇ ಶಾಶ್ವತ ನಿವಾಸ ಪತ್ರ, ಜಾತಿ ಪ್ರಮಾಣ ಪತ್ರ ತಲುಪಿಸುವ ಕಾರ್ಯಕ್ರಮಕ್ಕೆ ಸಿಎಂ ಡಿಕೆಶಿ ಚಾಲನೆ
ಮಾಹಿತಿ ತಿಳಿದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚೇತನ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಈ ಬಗ್ಗೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚೇತನ್, ಬಾಲಕಿ ಆಸ್ಪತ್ರೆಗೆ ಬಂದಾಗಲೇ ಪಲ್ಸ್ ಇರಲಿಲ್ಲ, ಉಸಿರಾಟವೂ ಅತ್ಯಂತ ಕಡಿಮೆ ಇತ್ತು. ಕರ್ತವ್ಯದಲ್ಲಿದ್ದ ಸಿಬ್ಬಂದಿ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ ಮೇಲ್ದರ್ಜೆಯ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದರೆ ಮಾತ್ರ ಸಾವಿನ ನಿಖರ ಕಾರಣ ತಿಳಿಯುತ್ತದೆ ಎಂದರು.
ಒಂದೆಡೆ ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರ ಆರೋಪ. ಮತ್ತೊಂದೆಡೆ ಭಾನುವಾರ ಸಂಜೆ ವೈದ್ಯರಿಗೆ ರಜೆ ಇದ್ದರೂ, ಕರ್ತವ್ಯದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ನಿಯಮಾನುಸಾರ ಚಿಕಿತ್ಸೆ ನೀಡಿದ್ದಾರೆ ಎನ್ನುವುದು ಆರೋಗ್ಯ ಇಲಾಖೆಯ ಸ್ಪಷ್ಟನೆ. ಆದರೆ ಇಬ್ಬರು ಪ್ರಭಾವಿ ಜನಪ್ರತಿನಿಧಿಗಳ ತವರು ಗ್ರಾಮದಲ್ಲೇ ವೈದ್ಯರು ಇಲ್ಲದೇ ಇರುವುದು ಮಾತ್ರ ವಿಪರ್ಯಾಸ. ಇದನ್ನೂ ಓದಿ: ಮಾನದಂಡಗಳ ಅನ್ವಯವೇ ಶಾಶ್ವತ ನಿವಾಸ ಪ್ರಮಾಣಪತ್ರ – ಅಕ್ರಮ ನಿವಾಸಿಗಳು ಹೊರಕ್ಕೆ: ಪರಮೇಶ್ವರ್
