– ವಿಜಯ್ ಪದಗ್ರಹಣ ಸಮಾರಂಭದಲ್ಲಿ ರಾಹುಲ್ ಗಾಂಧಿ ಭಾಗಿ ಸಾಧ್ಯತೆ
ಚೆನ್ನೈ: ಸರ್ಕಾರ ರಚನೆಗೆ 5 ದಿನಗಳ ಬಹುಮತದ ಕಸರತ್ತಿನ ನಂತರ ತಮಿಳುನಾಡು ಸಿಎಂ (Tamil Nadu CM) ಪಟ್ಟಾಭಿಷೇಕಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಭಾನುವಾರ ಬೆಳಗ್ಗೆ 10 ಗಂಟೆಗೆ ತಮಿಳುನಾಡು ಸಿಎಂ ಆಗಿ ಟಿವಿಕೆ ಮುಖ್ಯಸ್ಥ ವಿಜಯ್ (Vijay) ಪ್ರಮಾಣವಚನ ಸ್ವೀಕರಿಸಲಿದ್ದಾರೆ.
234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತದ ಬೆಂಬಲವನ್ನು ಸಾಬೀತುಪಡಿಸುವ ಪತ್ರಗಳನ್ನು ಸಲ್ಲಿಸಿದ ನಂತರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ವಿಜಯ್ ಅವರನ್ನು ಸರ್ಕಾರ ರಚಿಸಲು ಔಪಚಾರಿಕವಾಗಿ ಆಹ್ವಾನಿಸಿದ್ದಾರೆ. ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ಪ್ರಮಾಣ ವಚನ ಸಮಾರಂಭ ನಡೆಯಲಿದೆ. ವಿಜಯ್ ಪ್ರಮಾಣ ವಚನ ಸಮಾರಂಭದಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ವಿಜಯ್ ಪಟ್ಟಾಭಿಷೇಕಕ್ಕೆ ಕೊನೆಗೂ ಮುಹೂರ್ತ ಫಿಕ್ಸ್
ತಮಿಳುನಾಡಿನಲ್ಲಿ ಮೊದಲ ಹಂತದ ಸಚಿವ ಸಂಪುಟ ರಚನೆಯಲ್ಲಿ ವಿಜಯ್ ಜೊತೆಗೆ ಒಂಬತ್ತು ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರಮಾಣವಚನ ಸಮಾರಂಭಕ್ಕೂ ಮುನ್ನ ಸಚಿವರು ಮತ್ತು ಖಾತೆಗಳ ತಾತ್ಕಾಲಿಕ ಪಟ್ಟಿ ಹೊರಬಿದ್ದಿದೆ.

ಯಾರ‍್ಯಾರಿಗೆ ಯಾವ ಖಾತೆ?
ಹೊಸ ಸರ್ಕಾರದಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್ ಗೃಹ, ಪೊಲೀಸ್ ಮತ್ತು ಸಾರ್ವಜನಿಕ ಆಡಳಿತ ಸೇರಿದಂತೆ ಪ್ರಮುಖ ಖಾತೆಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಹಿರಿಯ ನಾಯಕ ಕೆ.ಎ. ಸೆಂಗೊಟ್ಟೈಯನ್ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ನಿರ್ವಹಿಸುವ ನಿರೀಕ್ಷೆಯಿದ್ದರೆ, ಎನ್. ಆನಂದ್ ಅವರಿಗೆ ಪುರಸಭೆ ಆಡಳಿತ ಖಾತೆ ನೀಡುವ ಸಾಧ್ಯತೆಯಿದೆ. ಇಂಧನ ಖಾತೆ ಜವಾಬ್ದಾರಿಯನ್ನು ಸಿಟಿಆರ್ ನಿರ್ಮಲ್ ಕುಮಾರ್ ವಹಿಸಿಕೊಳ್ಳುವ ಸಾಧ್ಯತೆ ಇದೆ.
ಆಧವ್ ಅರ್ಜುನ ಅವರಿಗೆ ಕ್ರೀಡಾ ಅಭಿವೃದ್ಧಿ ಖಾತೆಯನ್ನು ವಹಿಸಲಾಗುವುದು. ರಾಜ್ ಮೋಹನ್ ಅವರು ಆದಿ ದ್ರಾವಿಡರ್ ಕಲ್ಯಾಣ ಖಾತೆ ಸಚಿವರಾಗುವ ಸಾಧ್ಯತೆ ಇದೆ. ಹೊಸ ಸಚಿವ ಸಂಪುಟದಲ್ಲಿ ವಿ.ಎನ್.ಎಸ್. ಮುಸ್ತಫಾ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ನಿರ್ವಹಿಸುವ ನಿರೀಕ್ಷೆಯಿದೆ. ಪಿ.ವೆಂಕಟರಮಣನ್ ಅವರಿಗೆ ಶಾಲಾ ಶಿಕ್ಷಣ ಖಾತೆ, ಅರುಣ್ ರಾಜ್ ಅವರಿಗೆ ವಾಣಿಜ್ಯ ತೆರಿಗೆ ಮತ್ತು ನೋಂದಣಿ ಖಾತೆಯನ್ನು ವಹಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ರಾಜ್ಯಪಾಲರ 4ನೇ ಭೇಟಿ ಸಕ್ಸಸ್ – ನಾಳೆ ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ
ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ವಿಜಯ್ ನೇತೃತ್ವದ ರಚನೆಗೆ ಬೆಂಬಲ ನೀಡಿದ ಕಾಂಗ್ರೆಸ್ ಕೂಡ ಸಂಪುಟದಲ್ಲಿ ಪ್ರಾತಿನಿಧ್ಯ ಪಡೆಯುವ ನಿರೀಕ್ಷೆಯಿದೆ. ಕಾಂಗ್ರೆಸ್ ನಾಯಕರಾದ ರಾಜೇಶ್ ಕುಮಾರ್ ಮತ್ತು ವಿಶ್ವನಾಥನ್ ಅವರನ್ನು ಸಂಪುಟ ದರ್ಜೆ ಸಚಿವರನ್ನಾಗಿ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

