ಬೆಂಗಳೂರು: ಕುತೂಹಲಕ್ಕೆ ಕಾರಣವಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದಕ್ಕೆ ತೆರೆಬಿದ್ದಿದೆ. ಆದರೆ, ನಮಗೆ ಟೀಕೆಟ್ ನೀಡಬೇಕು ಎಂದು ಹಾಲಿ ಹಾಗೂ ಮಾಜಿ ಪಾಲಿಕೆ ಸದಸ್ಯರು ಪಟ್ಟು ಹಿಡಿದಿದ್ದಾರೆ.
ಬಿಜೆಪಿಯಿಂದ ಮಾಜಿ ಶಾಸಕ ವಿಜಯ್ ಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರ ಹೆಸರು ಪ್ರಕಟವಾಗಿದೆ. ಈ ಬೆನ್ನಲ್ಲೆ, ಪಟ್ಟಾಭಿರಾಮನಗರದ ಮಾಜಿ ಕಾರ್ಪೋರೆಟರ್ ಸಿ.ಕೆ.ರಾಮಮೂರ್ತಿ, ಬಿಬಿಎಂಪಿ ಮಾಜಿ ಮೇಯರ್ ಎಸ್.ಕೆ.ನಟರಾಜ್ ಹಾಗೂ ಬೈರಸಂದ್ರದ ವಾರ್ಡ್ ಬಿಬಿಎಂಪಿ ಸದಸ್ಯ ನಾಗರಾಜ್ ಅವರು ನಮ್ಮ ಮೂರು ಜನರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಇಂದು ಸಂಜೆ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ, ಅನಂತ್ ಕುಮಾರ್ ಅವರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.
Advertisement
ಸ್ಥಳೀಯರನ್ನು ಹೊರತುಪಡಿಸಿ ಬೇರೆಯವರಿಗೆ ಆದ್ಯತೆ ನೀಡಿದರೆ ಚುನಾವಣೆ ಕೆಲಸಕ್ಕೆ ಬೆಂಬಲ ಸಿಗಲ್ಲ. 30 ವರ್ಷದಿಂದಲೂ ಪಕ್ಷದಲ್ಲಿ ಸೇವೆ ಸಲ್ಲಿಸಿರುವೆ. ಮೂರು ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿರುವೆ. ಪಕ್ಷದಲ್ಲಿ ಕೆಲಸ ಮಾಡದವರಿಗೆ ಟಿಕೆಟ್ ಕೊಟ್ಟರೆ ಠೇವಣಿ ಕೂಡಾ ಮರಳುವುದಿಲ್ಲ. ನನಗೆ ಒಂದು ಅವಕಾಶ ಮಾಡಿಕೊಡುವಂತೆ ನಮ್ಮ ನಾಯಕರಿಗೆ ಮನವಿ ಸಲ್ಲಿಸಿರುವೆ ಎಂದು ಬಿಬಿಎಂಪಿ ಸದಸ್ಯ ಎನ್ ನಾಗರಾಜ್ ಹೇಳಿದ್ದಾರೆ.
Advertisement
ಜಯನಗರ ಮಾಜಿ ಕಾರ್ಪೋರೇಟರ್ ಸಿ.ಕೆ.ರಾಮಮೂರ್ತಿ ಅವರು ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ತಮ್ಮನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕೆಂದು ಮನವಿ ಸಲ್ಲಿಸಿದ್ದಾರೆ.
Advertisement
ಕಾರ್ಯಕರ್ತರೇ ವಿಜಯ್ ಕುಮಾರ್ ಅವರ ಕುಟುಂಬವಾಗಿದ್ದರು. ಅವರ ಮನೆಯಲ್ಲಿ ಯಾರು ಪಕ್ಷಕ್ಕಾಗಿ ಕೆಲಸ ಮಾಡಲಿಲ್ಲ. ಕ್ಷೇತ್ರದಲ್ಲಿ ಸರ್ವೇ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದವಾಗಿದ್ದೇವೆ. ಆದರೆ ಹೊಸ ಮುಖಗಳಿಗಿಂತ, ಕಾರ್ಪೋರೇಟರ್ ಗಳಿಗೆ ಅವಕಾಶ ನೀಡುವುದು ಒಳಿತು ಎಂದು ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯ ರಾಮಮೂರ್ತಿ ಹೇಳಿದ್ದಾರೆ.
Advertisement
ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ವಿಜಯ್ ಕುಮಾರ್ ಅವರು ಜಯನಗರ ಕ್ಷೇತ್ರದಿಂದ 2 ಬಾರಿ ಆಯ್ಕೆಯಾಗಿದ್ದರು. ಚುನಾವಣೆಗೆ ಕೆಲ ದಿನಗಳು ಬಾಕಿ ಇರುವ ವೇಳೆಯಲ್ಲಿ ವಿಜಯ್ ಕುಮಾರ್ ಅವರು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದರು. ಮೇ 3 ರಂದು ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡು ಏಕಾಏಕಿ ಕುಸಿದು ಬಿದ್ದಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕಾರ್ಯಕರ್ತರು ಅವರನ್ನು ತಕ್ಷಣ ಜಯದೇವ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ಕರೆತರುವಾಗಲೇ ಅವರ ಹೃದಯ ಬಡಿತ, ಬಿಪಿ ಕುಸಿತ ಕಂಡಿತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 1 ಗಂಟೆ ಸುಮಾರಿಗೆ ಮೃತಪಟ್ಟಿದ್ದರು.