ರಾಜ್ಯದ ಹಲವು ಕ್ಷೇತ್ರಗಳಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಸ್ಪರ್ಧಿಸುವಂತೆ ಒತ್ತಾಯಿಸ್ತಾ ಇದ್ದಾರೆ. ನಾನು ಇನ್ನೂ ಏನೂ ನಿರ್ಧಾರ ಮಾಡಿಲ್ಲ. ಎಲ್ಲಿ ಸ್ಪರ್ಧಿಸಬೇಕೆಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅವರ ಸೂಚನೆಯನ್ನು ನಾನು ಪಾಲಿಸ್ತೇನೆ ಅಷ್ಟೇ ಎಂದು ಪ್ರತಿಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳುವುದನ್ನು ಗಮನಿಸಿದ್ದೇವೆ. ಅಂದರೆ, ಮುಂದಿನ ವಿಧಾನಸಭೆ ಚುನಾವಣೆಗೆ ಅವರು ಯಾವ ಕ್ಷೇತ್ರದಿಂದ ಸ್ಪರ್ದಿಸ್ತಾರೆ ಎನ್ನುವುದು ಖಚಿತವಾಗಿಲ್ಲ. ಇನ್ನೂ ಅವರು ಕ್ಷೇತ್ರದ ಹುಡುಕಾಟದಲ್ಲೇ ಇದ್ದಾರೆ.
ಇದನ್ನೇ ಅಸ್ತ್ರ ಮಾಡಿಕೊಂಡು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮುಖಂಡರನ್ನು ಬಿಜೆಪಿ ಕಾಲೆಳೆಯುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಮತ್ತು ಸ್ಪರ್ಧಾಕಾಂಕ್ಷಿಗಳು ಒಂದು ಕಡೆ ಜೋರಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ರೆ, ಕಾಂಗ್ರೆಸ್ ಪಕ್ಷವನ್ನು ಮುಂದಿನ ಬಾರಿ ಅಧಿಕಾರಕ್ಕೆ ತರಬೇಕೆಂದು ಹೊರಟಿರುವ ಸಿದ್ದರಾಮಯ್ಯ ಅವರೇ ಕ್ಷೇತ್ರ ಹುಡುಕುತ್ತಿರುವುದು ಸಹಜವಾಗಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಚೀನಾ-ಭಾರತ ಗಡಿ ಸಂಘರ್ಷ – ಚೀನಾ ಯಾಂಗ್‌ಟ್ಸೆ ಪ್ರದೇಶವನ್ನೇ ಟಾರ್ಗೆಟ್ ಮಾಡೋದೇಕೆ?
Advertisement
Advertisement
ಮೈಸೂರಿನಲ್ಲಿ ಉಪನ್ಯಾಸಕರಾಗಿ, ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾಗ, ರೈತ ಚಳುವಳಿಯ ನೇತಾರ ಪ್ರೊ.ನಂಜುಂಡಸ್ವಾಮಿ ಅವರ ಪ್ರಭಾವಕ್ಕೆ ಒಳಗಾಗಿ ರಾಜಕೀಯಕ್ಕೆ ಸಿದ್ದರಾಮಯ್ಯ ಧುಮುಕಿದ್ರು. 1983 ರಿಂದ ಸತತವಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಾ ಬಂದಿರುವ ಸಿದ್ದರಾಮಯ್ಯ, ರಾಜಕೀಯದಲ್ಲಿ ಏಳು-ಬೀಳುಗಳನ್ನು ಕಂಡಿದ್ದಾರೆ. 10 ಸಲ ವಿಧಾನಸಭೆಗೆ ಸ್ಪರ್ಧಿಸಿ 8 ಬಾರಿ ಗೆದ್ದಿರುವ ಅವರು, ಒಂದು ಸಲ 1991 ರಲ್ಲಿ ಕೊಪ್ಪಳದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಬಸವರಾಜ ಪಾಟೀಲ್ ಅನ್ವರಿ ವಿರುದ್ಧ ಸೋತಿದ್ದಾರೆ. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ, ಶಾಸಕರಾಗಿ, ಸಚಿವರಾಗಿ, ಅತ್ಯಂತ ಹೆಚ್ಚು ಬಾರಿ ಹಣಕಾಸು ಖಾತೆ ಹೊಂದಿ ಬಜೆಟ್ ಮಂಡಿಸಿ, ಪ್ರತಿಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅವರು, ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪನ್ನು ಹೊಂದಿದ್ದಾರೆ. 2013 ರಿಂದ 2018 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಗಳಿಸಿದ ಜನಪ್ರಿಯತೆ ಅಪಾರವಾದದ್ದು.
Advertisement
ಆದರೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ವಿಚಾರದಲ್ಲಿ ಮಾಡಿದ ಎಡವಟ್ಟು ಇಂದು ಅವರು ಕ್ಷೇತ್ರ ಹುಡುಕಾಡುವ ಸ್ಥಿತಿಗೆ ತಂದು ನಿಲ್ಲಿಸಿದೆ. ಸ್ವಕ್ಷೇತ್ರ ವರುಣಾವನ್ನು ಪುತ್ರ ಡಾ.ಯತೀಂದ್ರ ಅವರಿಗೆ ಬಿಟ್ಟುಕೊಟ್ಟು, ತಮ್ಮ ಮೂಲ ಕ್ಷೇತ್ರವಾದ ಪಕ್ಕದ ಚಾಮುಂಡೇಶ್ವರಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರು. ಕೊನೆಯ ಕ್ಷಣದಲ್ಲಿ ಸೋಲುವ ಸುಳಿವರಿತ ಸಿದ್ದರಾಮಯ್ಯ, ತಮ್ಮ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ದೂರದ ಬದಾಮಿ ಕ್ಷೇತ್ರದಲ್ಲೂ ಸ್ಪರ್ದಿಸಬೇಕಾಯಿತು. ಹಾಲಿ ಸಿಎಂ ಆಗಿದ್ದುಕೊಂಡು ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತ ಸಿದ್ದರಾಮಯ್ಯ, ಬದಾಮಿ ಕ್ಷೇತ್ರದಲ್ಲಿ ಅದೃಷ್ಟವಶಾತ್ ಅಲ್ಪಮತಗಳಿಂದ ಗೆದ್ದು ಮರ್ಯಾದೆ ಉಳಿಸಿಕೊಂಡರು. ಪಕ್ಷವನ್ನೂ ಅಧಿಕಾರಕ್ಕೆ ತರಲಾಗದ ಅವರು, ಬದಾಮಿಯಲ್ಲೂ ಸೋತಿದ್ರೆ ರಾಜಕೀಯ ಭವಿಷ್ಯವೇ ಕೊನೆಗೊಳ್ಳುವ ಸಾಧ್ಯತೆ ಇತ್ತು. ಇದನ್ನೂ ಓದಿ: 2023ರಲ್ಲಿ ಜನಸಂಖ್ಯೆಯಲ್ಲಿ ಚೀನಾ ಮೀರಿಸುತ್ತೆ ಭಾರತ – ಇದು ವರದಾನವೋ.. ತಲೆನೋವೊ?
Advertisement
ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಹೈಕಮಾಂಡ್ ಸೂಚನೆಗೆ ಕಟ್ಟು ಬಿದ್ದು, ಒಲ್ಲದ ಮನಸ್ಸಿನಿಂದ ಜೆಡಿಎಸ್‌ಗೆ ಬೆಂಬಲ ನೀಡಿ ಸಮ್ಮಿಶ್ರ ಸರ್ಕಾರ ರಚನೆಗೆ ಕಾರಣರಾದರು. ಸಮನ್ವಯ ಸಮಿತಿ ಅಧ್ಯಕ್ಷರಾಗಿ ಪರೋಕ್ಷ ಆಡಳಿತ ನಡೆಸುವ ಹಾದಿಯಲ್ಲಿಯೇ, ತಮ್ಮ ಆಪ್ತ ಬಳಗದ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ಸರ್ಕಾರ ಪತನಗೊಳ್ಳುವಂತಾಯಿತು. ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಮತ್ತೆ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಈ ಬಾರಿ ಪುನಃ ಪಕ್ಷವನ್ನು ಅಧಿಕಾರಕ್ಕೆ ತರುವ ಹೊಣೆ ಹೊತ್ತಿದ್ದಾರೆ. ಹೀಗಿರುವಾಗ, ಮುಂದಿನ ಚುನಾವಣೆಯಲ್ಲಿ ಅವರ ಸ್ಪರ್ಧೆಯ ಬಗ್ಗೆ ಗೊಂದಲ ಮಾತ್ರ ಇನ್ನೂ ಮುಂದುವರಿದಿದೆ.
ಪುತ್ರ, ಶಾಸಕ ಡಾ.ಯತೀಂದ್ರ ಅಂತೂ, ವರುಣಾ (Varuna) ಕ್ಷೇತ್ರದಲ್ಲೇ ಸ್ಪರ್ಧಿಸುವಂತೆ ತಂದೆಗೆ ಒತ್ತಾಯಿಸುತ್ತಿದ್ದಾರೆ. ಕೋಲಾರದ (Kolara) ಮುಖಂಡರು, ಕಾರ್ಯಕರ್ತರು ಅಲ್ಲಿ ಸ್ಪರ್ಧಿಸುವಂತೆ ದುಂಬಾಲು ಬಿದ್ದಿದ್ದಾರೆ. ಹಿಗೆ ಹಲವು ಕ್ಷೇತ್ರಗಳಿಂದ ಸ್ಪರ್ಧಿಸುವ ಒತ್ತಾಯ ಇದೆ. ಕೆಲವರಂತೂ ಸಿದ್ದರಾಮಯ್ಯ ಎಲ್ಲೂ ಸ್ಪರ್ಧಿಸದೇ ರಾಜ್ಯಾದ್ಯಂತ ಸುತ್ತಾಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮುಂದಾಗಿ ಪಕ್ಷವನ್ನು ಅಧಿಕಾರಕ್ಕೆ ತರಲಿ ಅಂತ ಸಲಹೆ ನೀಡಿದ್ದಾರೆ. ಆದರೆ ಜನರ ನಾಡಿಮಿಡಿತ ಏನು ಎಂದು ಅಧ್ಯಯನ ಮಾಡುತ್ತಿರುವ ಸಿದ್ದರಾಮಯ್ಯ, ಇನ್ನೂ ಬಹಿರಂಗವಾಗಿ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇನ್ನೂ ಗುಟ್ಟು ಬಿಟ್ಟುಕೊಡದ ಅವರ ತಂತ್ರಗಾರಿಕೆ ಏನು ಎಂಬುದು ನಿಗೂಢವಾಗಿದೆ. ಆದರೆ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಣತೊಟ್ಟಿರುವ ಮಾಸ್ ಲೀಡರ್, ತಾವು ಗೆಲ್ಲಲು ಸುರಕ್ಷಿತ ಕ್ಷೇತ್ರ ಯಾವುದು ಎಂಬ ಗೊಂದಲದಲ್ಲಿ ಇರುವುದು ಮಾತ್ರ ವಿಪರ್ಯಾಸ. ಬೇರೆಯವರನ್ನು ಗೆಲ್ಲಿಸುವ ಈ ಮಾಜಿ ಸಿಎಂ, ತಮ್ಮನ್ನು ಗೆಲ್ಲಿಸುವವರು ಯಾರು ಎಂಬ ಚಿಂತೆಯಲ್ಲಿ ಇದ್ದಾರೆ. ಇದನ್ನೂ ಓದಿ: ಕರ್ನಾಟಕದ ಅಳಿಯ ರಿಷಿ ಸುನಾಕ್ ಬ್ರಿಟನ್ ರಾಜ 3ನೇ ಚಾರ್ಲ್ಸ್‌ಗಿಂತಲೂ ಶ್ರೀಮಂತ
ಸದ್ಯದ ಪರಿಸ್ಥಿಯಲ್ಲಿ ವರುಣಾ ಅವರಿಗೆ ಅತ್ಯಂತ ಸುರಕ್ಷಿತ ಕ್ಷೇತ್ರ. ಅವರಿಗೆ ಇರುವ ಜನಪ್ರಿಯತೆಗೆ ಕೋಲಾರದಲ್ಲಿ ಗೆಲ್ಲುವುದು ಕಷ್ಟವೇನೂ ಅಲ್ಲ. ನನ್ನನ್ನು ಸೋಲಿಸಲು ತುಂಬಾ ಜನ ಕಾದುಕುಳಿತಿದ್ದಾರೆ ಎಂಬ ಅವರ ಇತ್ತೀಚಿನ ಹೇಳಿಕೆಯ ಮರ್ಮ ಏನೆಂದು ಗೊತ್ತಿರುವ ವಿಷಯ. ಇದು ಸಿದ್ದರಾಮಯ್ಯ ಎಷ್ಟು ಗಂಭೀರವಾಗಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿದೆ. ಹಿತಶತ್ತುಗಳ ಕಾಟ, ರಾಜಕೀಯ ವಿರೋಧಿಗಳಾದ ಬಿಜೆಪಿ ಮತ್ತು ಜೆಡಿಎಸ್ ನಡೆಯ ಬಗ್ಗೆ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿರುವ ಸಿದ್ದರಾಮಯ್ಯ ಈ ಬಾರಿ ಎಚ್ಚರಿಕೆ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ.
ಅಂತಿಮವಾಗಿ ನಾಯಕರು, ಕಾರ್ಯಕರ್ತರು ಮತ್ತು ಬೆಂಬಲಿಗರ ಒತ್ತಡಕ್ಕೆ ಜೋತು ಬಿದ್ದು ಕೋಲಾರದಲ್ಲಿ ಸ್ಪರ್ಧಿಸುವ ಸಾಧ್ಯತೆಯೇ ಹೆಚ್ಚು. ಒಟ್ಟಿನಲ್ಲಿ ಹಲವು ಸಲ ಇದು ತಮ್ಮ ಕೊನೆಯ ಚುನಾವಣೆ ಎಂದಿದ್ದ ಸಿದ್ದರಾಮಯ್ಯ ಅವರಿಗೆ ಈ ಬಾರಿಯಂತೂ ಖಂಡಿತವಾಗಿ ಕೊನೆಯ ಚುನಾವಣೆ. ನಾಲ್ಕು ದಶಕಗಳ ತಮ್ಮ ರಾಜಕೀಯ ಜೀವನದ ಕೊನೆಯ ಕಾಲಘಟ್ಟದಲ್ಲಿ, ಪಕ್ಷವನ್ನು ಅಧಿಕಾರಕ್ಕೆ ತಂದು ಸಿದ್ದರಾಮಯ್ಯ ದಡ ಸೇರುತ್ತಾರೆ ಎಂಬುದೇ ಅವರ ಬೆಂಬಲಿಗರ ನಿರೀಕ್ಷೆ.