– ಬಾಬರಿ ಮಸೀದಿ ಧ್ವಂಸಕ್ಕೆ ಸೇಡು ತೀರಿಸಿಕೊಳ್ಳಲು ವಾಟ್ಸಪ್ ಗ್ರೂಪಲ್ಲಿ ಪ್ರಚೋದನೆ
– ಜ್ಞಾನವಾಪಿ ಮಸೀದಿ, ಕೆಂಪು ಕೋಟೆ ಫೋಟೋ ಪಾಕ್‌ಗೆ ರವಾನೆ
ಲಕ್ನೋ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ವಾರಣಾಸಿಯ (Varanasi) ವ್ಯಕ್ತಿಯೊಬ್ಬನನ್ನ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (UP ATS) ಬಂಧಿಸಿದೆ. ಇದರೊಂದಿಗೆ ದೇಶದ ವಿವಿಧೆಡೆ ಬಂಧಿತ ಪಾಕ್ ಬೇಹುಗಾರರ (Spy) ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ತುಫೈಲ್ ಬಂಧಿತ ಆರೋಪಿ. ಪಾಕ್ ಪ್ರಜೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ತುಫೈಲ್ ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ. ರಾಜ್‌ಘಾಟ್, ನಮೋ ಘಾಟ್, ಜ್ಞಾನವಾಪಿ ಮಸೀದಿ, ರೈಲ್ವೆ ನಿಲ್ದಾಣ ಮತ್ತು ಕೆಂಪು ಕೋಟೆ (Red Fort) ಸೇರಿದಂತೆ ಆಯಕಟ್ಟಿನ ಸ್ಥಳಗಳ ಫೋಟೋ ಮತ್ತು ಮಾಹಿತಿಯನ್ನ ಹಂಚಿಕೊಂಡಿದ್ದಾನೆ ಅನ್ನೋದು ತನಿಖೆ ಸಮಯದಲ್ಲಿ ಗೊತ್ತಾಗಿದೆ.
ಅಲ್ಲದೇ ಕೆಲವು ಸ್ಥಳೀಯರನ್ನು ಪಾಕಿಸ್ತಾನಿಯರೊಟ್ಟಿಗೆ ಸಂಪರ್ಕಿಸುವ ವಾಟ್ಸಪ್ ಗ್ರೂಪ್‌ಗಳಲ್ಲಿ ತುಫೈಲ್ ಸಕ್ರೀಯವಾಗಿದ್ದ. ಅಲ್ಲಿ ತೆಹ್ರೀಕ್-ಇ-ಲಬ್ಬೈಕ್ ಉಗ್ರ ಸಂಘಟನೆಯ ನಾಯಕ ಮೌಲಾನಾ ಸಾದ್ ರಿಜ್ವಿಯ ಉಪನ್ಯಾಸ ವಿಡಿಯೋಗಳನ್ನ ಹಂಚಿಕೊಳ್ಳುತ್ತಿದ್ದ. ಬಾಬರಿ ಮಸೀದಿ (Babri Masjid) ಧ್ವಂಸಕ್ಕೆ ಸೇಡು ತೀರಿಸಿಕೊಳ್ಳಲು ಮತ್ತು ಶರಿಯಾ ಕಾನೂನು ಹೇರಿಕೆಯನ್ನು ಉತ್ತೇಜಿಸುವ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದ ಅನ್ನೋದು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ನಫೀಸಾ ಎಂಬ ಪಾಕಿಸ್ತಾನಿ ಮಹಿಳೆಯ ಸಂಪರ್ಕದಲ್ಲೂ ತುಫೈಲ್ ಇದ್ದ. ಆಕೆಯ ಪತಿ ಪಾಕಿಸ್ತಾನಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಾರೆ ತುಫೈಲ್ 600 ಪಾಕಿಸ್ತಾನಿಯರೊಂದಿಗೆ ಸಂಪರ್ಕದಲ್ಲಿದ್ದ ಎಂದು ತನಿಖಾ ದಳದ ಮೂಲಗಳಿಂದ ತಿಳಿದುಬಂದಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.