ಶ್ರಾವಣವು ಹಬ್ಬಗಳ ಮಾಸವಾಗಿದೆ. ಶ್ರಾವಣ ಮಾಸದ ಮೊದಲ ಹಬ್ಬವೇ ನಾಗರಪಂಚಮಿ. ಇದರ ನಂತರ ಪೌರ್ಣಮಿಗಿಂತ ಮೊದಲು ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ಒಂದೊಮ್ಮೆ ಶುಕ್ರವಾರ ಹುಣ್ಣಿಮೆ ಬಂದರೆ ಅಂದೇ ವರಮಹಾಲಕ್ಷ್ಮೀ ವ್ರತ. ಈ ಶುಕ್ರವಾರಕ್ಕೆ ‘ಸಂಪತ್ ಶುಕ್ರವಾರ’ ಎಂಬ ಹೆಸರೂ ಇದೆ. ವರಮಹಾಲಕ್ಷ್ಮೀ ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೆ.
‘ಲಕ್ಷ್ಮೀ’ ಎಂದರೆ ಎಲ್ಲವನ್ನೂ ಯಾವಾಗಲೂ ನೋಡುತ್ತಿರುವವಳು ಎಂದರ್ಥ. ಸರ್ವಸಾಕ್ಷಿಯಾಗಿರುವ ಭಗವಂತನೊಡನೆ ನಿತ್ಯಯೋಗವನ್ನು ಹೊಂದಿ ಸರ್ವಜ್ಞಳಾಗಿರುವಾಕೆಯೇ ‘ಲಕ್ಷ್ಮೀ’. ಲಕ್ಷ್ಮೀ ಸಂಪತ್ತಿನ ಅಧಿದೇವತೆ, ಅವಳ ಅನುಗ್ರಹವಾದರೆ ಮನೆಯಲ್ಲಿ ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸೌಭಾಗ್ಯಲಕ್ಷ್ಮೀ, ಸಂತಾನಲಕ್ಷ್ಮಿ, ವಿದ್ಯಾಲಕ್ಷ್ಮೀ, ವಿಜಯಲಕ್ಷ್ಮೀ, ಕೀರ್ತಿಲಕ್ಷ್ಮಿ, ಮೋಕ್ಷ ಲಕ್ಷ್ಮಿ ಎಲ್ಲವೂ ನೆಲೆಸುತ್ತವೆ. ಆದ್ದರಿಂದ ಸಿರಿ ಸೌಭಾಗ್ಯ ಸಂಪದಭಿವೃದ್ಧಿಗಾಗಿ ಸುಮಂಗಲಿಯರು, ಪುರುಷರು ಈ ವ್ರತವನ್ನು ಆಚರಿಸುತ್ತಾರೆ.
Advertisement
ಮಹಾಲಕ್ಷ್ಮೀಯ ಜನನ:
ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದ್ದಾಳೆ ಎನ್ನುವ ಕಥೆಯಿದೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದಾರ ಪರ್ವತವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಲಕ್ಷ್ಮೀ ಉದ್ಭವಿಸುತ್ತಾಳೆ. ಆದ್ದರಿಂದಲೇ ಇಷ್ಟಾರ್ಥಗಳನ್ನು ಪೂರೈಸುವ ಲಕ್ಷ್ಮೀ ಆರಾಧನೆಗಾಗಿ ಈ ಹಬ್ಬವಾಗಿದೆ. ಪ್ರತಿವರ್ಷವೂ ಲಕ್ಷ್ಮೀಯನ್ನು ಶ್ರದ್ಧೆ-ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಇಷ್ಟಾರ್ಥವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಕೂಡ ಇದೆ.
Advertisement
Advertisement
ಪುರಾಣದ ಕಥೆ:
ಒಮ್ಮೆ ಶಿವ ಪಾರ್ವತಿಯರು ಏಕಾಂತದಲ್ಲಿ ಮಾತನಾಡುತ್ತಿದ್ದಾಗ ಈ ಜಗತ್ತಿನ ಉದ್ಧಾರಕ್ಕಾಗಿ ಯಾವ ವ್ರತಮಾಡಿದರೆ ಶ್ರೇಷ್ಠ ಎಂದು ಜಗಜ್ಜನನಿಯಾದ ಪಾರ್ವತಿಯು ಕೇಳಿದಾಗ, ತಡಮಾಡದೇ ಸ್ವತಃ ಈಶ್ವರನು ವರಮಹಾಲಕ್ಷ್ಮೀ ವ್ರತವೇ ಅತ್ಯಂತ ಶ್ರೇಷ್ಠವಾದ ವ್ರತ ಎಂದು ತಿಳಿಸಿ ಆ ವ್ರತದ ಮಹಾತ್ಮೆಯನ್ನು ಪಾರ್ವರ್ತಿಗೆ ಕಥೆಯ ರೂಪದಲ್ಲಿ ಹೇಳುತ್ತಾನೆ.
Advertisement
ಕುಂಡಿನ ಎಂಬ ಊರಿನಲ್ಲಿ ಚಾರುಮತಿ ಎಂಬ ಬಡ ಮಹಿಳೆ ಇದ್ದಳು. ಬಡತನದಲ್ಲಿ ಆಕೆ ಖಾಯಿಲೆ ಪೀಡಿತ ತನ್ನ ವಯೋವೃಧ್ಧ ಅತ್ತೆ ಮಾವಂದಿರ ಸೇವೆಯನ್ನು ನಿಶ್ಕಲ್ಮಶವಾಗಿ ಅತ್ಯಂತ ಶ್ರಧ್ಧೆಯಿಂದ ಮಾಡುತ್ತಿದ್ದರೂ ಅವರ ಖಾಯಿಲೆಗಳು ವಾಸಿಯಾಗದೇ ಅವರು ನರಳುತ್ತಿದ್ದನ್ನು ನೋಡಿ, ದೇವರೇ, ದಯವಿಟ್ಟು ನಮ್ಮ ಅತ್ತೆ ಮಾವನವರ ಖಾಯಿಲೆಯನ್ನು ಗುಣಪಡಿಸು. ಅವರ ನರಳುವಿಕೆಯನ್ನು ನಾನು ನೋಡಲಾರೆ ಎಂದು ಪ್ರತೀ ದಿನವೂ ಕೇಳಿಕೊಳ್ಳುತ್ತಿದ್ದಳು. ಅದೊಂದು ದಿನ ಇದ್ದಕ್ಕಿದ್ದಂತೆಯೇ ಆಕೆಯ ಸ್ವಪ್ನದಲ್ಲಿ ಮಹಾಲಕ್ಷ್ಮೀ ಕಾಣಿಸಿಕೊಂಡು, ಚಾರುಮತಿ ನೀನು ಅತ್ತೆ- ಮಾವಂದಿರನ್ನು ಕಾಳಜಿಯಿಂದ ಸೇವೆ ಮತ್ತು ಶುಶ್ರೂಷೆ ಮಾಡುವುದನ್ನು ಕಂಡು ಮೆಚ್ಚಿದ್ದೇನೆ. ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲು ಬರುವ ಶುಕ್ರವಾರ ನನ್ನನ್ನು ಪೂಜಿಸು. ನಿನ್ನ ಇಷ್ಟಾರ್ಥಗಳನ್ನೆಲ್ಲಾ ನೆರವೇರಿಸುತ್ತೇನೆ ಎಂದು ಹೇಳಿ ಕಣ್ಮರೆಯಾದಳು.
ಸಾಕ್ಷಾತ್ ಮಹಾಲಕ್ಷ್ಮೀಯೇ ತನ್ನ ಕನಸಿನಲ್ಲಿ ಬಂದು ಅನುಗ್ರಹಿಸಿದ್ದನ್ನು ನೋಡಿ ಸಂತೋಷಗೊಂಡ ಚಾರುಮತಿಗೆ ತನ್ನ ಕನಸಿನ ಬಗ್ಗೆ ತನ್ನೆಲ್ಲಾ ಬಂಧು- ಮಿತ್ರರಿಗೆ ತಿಳಿಸಿ, ಶ್ರಾವಣ ಮಾಸದ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರ ಬಹಳ ಭಕ್ತಿ ಭಾವಗಳಿಂದ ಮಹಾಲಕ್ಷ್ಮೀಯನ್ನು ಆರಾಧನೆ ಮಾಡಿ ಆ ತಾಯಿಯ ಅನುಗ್ರಹ ಪಡೆಯುತ್ತಾಳೆ. ತದನಂತರ ಆಕೆಯ ಬಡತನವೂ ನೀಗುವುದಲ್ಲದೆ, ಆಕೆಯ ಅತ್ತೆ ಮತ್ತು ಮಾವನವರ ಖಾಯಿಲೆಗಳೂ ವಾಸಿಯಾಗುತ್ತದೆ. ಅಂದಿನಿಂದ ಪ್ರತೀ ವರ್ಷವೂ ಆಕೆ ತನ್ನ ಬಂಧು ಮಿತ್ರರೊಡನೆ ತಪ್ಪದೇ ಮಹಾಲಕ್ಷ್ಮಿಯ ವ್ರತಾಚರಣೆ ಮಾಡಿ ಸಕಲ ಆಯುರಾರೋಗ್ಯ ಐಶ್ವರ್ಯವಂತಳಾಗಿ ಹಲವಾರು ವರ್ಷ ಸುಖಃವಾದ ನೆಮ್ಮದಿಯಾದ ಜೀವನ ನಡೆಸುತ್ತಾಳೆ.
ವ್ರತಾಚರಣೆ ಹೇಗೆ?
ಲಕ್ಷ್ಮೀ ಎಂದರೆ ಶುದ್ಧತೆಯ ಸಂಕೇತ. ಹೀಗಾಗಿ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ. ಸಣ್ಣ ಉಕ್ಕಿನ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಲಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಬೇಕು. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಲಶವನ್ನು ಇಟ್ಟು, ಮಾವಿನ ಎಲೆ ಹಾಗೂ ವೀಳ್ಯೆದೆಲೆಯನ್ನು ಕಲಶದ ಸುತ್ತ ಜೋಡಿಸಿ ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸಿ ಅಲಂಕರಿಸುತ್ತಾರೆ. ಜೊತೆ ಒಡವೆಗಳನ್ನು ಹಾಕಿ ಸಿಂಗಾರಗೊಳಿಸುತ್ತಾರೆ.
ಲಕ್ಷ್ಮೀಗೆ ಹೂವುಗಳೆಂದರೆ ಬಹಳ ಪ್ರೀತಿ. ಅದರಲ್ಲೂ ಕಮಲದ ಹೂವು ಹಾಗೂ ಬಿಲ್ವಪತ್ರೆ ಎಂದರೆ ಲಕ್ಷ್ಮೀಗೆ ತುಂಬಾ ಪ್ರೀತಿ. ಹೀಗಾಗಿ ವ್ರತ ಮಾಡುವವರು ಈ ಹೂವನ್ನು ತಪ್ಪದೆ ತಾಯಿಯ ಬಳಿಯಿಟ್ಟು ಪೂಜೆ ಮಾಡುತ್ತಾರೆ. ಲಕ್ಷ್ಮೀ ಮುಂದೆ ಹಣ, ಚಿನ್ನ, ಬಳೆ, ಹಣ್ಣು, ಸ್ವೀಟ್, ಅರಿಶಿಣ, ಕುಂಕುಮ, ಎಲ್ಲವನ್ನೂ ಇಡುತ್ತಾರೆ. ಬಿಲ್ವ ವೃಕ್ಷದಲ್ಲಿ ಲಕ್ಷ್ಮೀ ನೆಲೆಸಿದ್ದಾಳೆ ಎಂಬುದು ನಂಬಿಕೆಯಾಗಿದೆ. ಹೀಗಾಗಿ ಬಿಲ್ವ ಪತ್ರೆಯಿಂದ ಪೂಜೆ ಮಾಡಿದರೆ ತಾಯಿ ಒಲಿಯುವಳೆಂಬ ಪ್ರತೀತಿಯೂ ಇದೆ. ವರಲಕ್ಷ್ಮೀ ಎಂದರೆ ವರಗಳನ್ನು ಕೊಡುವವಳು ಎಂದು ಕೂಡ ಹೇಳುತ್ತಾರೆ. ಸಾಮಾನ್ಯವಾಗಿ ಲಕ್ಷ್ಮೀ ಪೂಜೆಯನ್ನು ಗೋಧೂಳಿ ಸಮಯದಲ್ಲಿ ಮಾಡಿದರೆ ಶ್ರೇಷ್ಠ. ಈ ವ್ರತವನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆ ಹಾಗೂ ಅವರ ಮನೆಯವರಿಗೆಲ್ಲರಿಗೂ ಒಳ್ಳೆಯದಾಗುತ್ತದೆಂದೂ ಹಾಗೂ ಎಲ್ಲಾ ಕೆಲಸದಲ್ಲಿ ಏಳಿಗೆ ಆಗುತ್ತದೆಂಬ ನಂಬಿಕೆಯೂ ಇದೆ. ಹೀಗಾಗಿ ನಮ್ಮ ಪೂರ್ವಿಕರು ಎಲ್ಲಿ ತನು, ಮನ, ಮನೆ ಶುದ್ಧವಾಗಿರುತ್ತದೋ ಅಲ್ಲಿ ಲಕ್ಷ್ಮೀಯು ನೆಲೆಸುತ್ತಾಳೆ ಎಂಬ ನಂಬಿಕೆಯನ್ನು ಹೊಂದಿದ್ದರು.
ವರಮಹಾಲಕ್ಷ್ಮೀ ಹಬ್ಬದ ದಿನದಂದು ಸುಮಾರು ಎರಡು ಗೇಣಿನುದ್ದದ 12 ಹಸಿ ದಾರಗಳನ್ನು ತೆಗೆದುಕೊಂಡು ಅದಕ್ಕೆ 12 ಗಂಟುಗಳನ್ನು ಹಾಕಿ, ಅದನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರಿಶಿನ ಹಚ್ಚಿ ಅದಕ್ಕೆ ಸೇವಂತಿಗೆ ಹೂವನ್ನು ಕಟ್ಟಿ ದೇವಿಯ ಪಕ್ಕದಲ್ಲಿರಿಸಿ ಪೂಜೆ ಮಾಡಬೇಕು. ಲಕ್ಷ್ಮೀ ಪೂಜೆ ಮಾಡಿದ ನಂತರ ಈ ದಾರವನ್ನು ಮನೆಯ ಎಲ್ಲಾ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು, ಹಿರಿಯರಿಂದ ಕಂಕಣದಂತೆ ಬಲಗೈಗೆ ಕಟ್ಟಿಸಿಕೊಂಡು ಮುಂದೆ ಬರುವ ಗೌರೀ ಹಬ್ಬದವರೆಗೂ ಜನತದಿಂದ ಅದನ್ನು ಕಾಪಾಡಿಕೊಂಡು ಬಂದು ಗಣೇಶನ ವಿಸರ್ಜನೆಯ ದಿನ ಭೀಮನವಾಸ್ಯೆ, ಗೌರೀ ಹಬ್ಬದ ದಿನ ಕಟ್ಟಿಕೊಂಡ ದಾರದ ಸಮೇತ ಈ ದಾರವನ್ನು ವಿಸರ್ಜಿಸಬೇಕು.
ಪೂಜೆ ಮುಗಿದ ನಂತರ ಮನೆಯ ನೆರೆಹೊರೆಯ ಮುತ್ತೈದೆಯರನ್ನೆಲ್ಲಾ ಕರೆದು ಅವರಿಗೆ ಅರಿಶಿನ, ಕುಂಕುಮ, ಇನ್ನೂ ಕೆಲ ಹಿರಿಯ ಮುತ್ತೈದೆಯರಿಗೆ ಈ ದಾರ ಸಹಿತ ಹಸಿ ಮೊರದಲ್ಲಿ ಅಕ್ಕಿ, ತೆಂಗಿನಕಾಯಿ, ತಾಂಬೂಲ ಸಹಿತ ದಕ್ಷಿಣೆ, ಬಳೆ, ರವಿಕೆ ಕಣ ಅಥವಾ ಸೀರೆ ಇಟ್ಟು ವಾಯನದಾನ ಕೊಡುವ ಮೂಲಕ ವರಮಹಾಲಕ್ಷ್ಮೀಯ ಪೂಜೆ ಸಂಪೂರ್ಣವಾಗುತ್ತದೆ. ಲಕ್ಷ್ಮೀಗೆ ಪ್ರಿಯವಾದ ಧಾನ್ಯವೆಂದರೆ ಕಡಲೆಬೇಳೆ. ಆದ್ದರಿಂದ ವರಮಹಾಲಕ್ಷ್ಮಿ ಹಬ್ಬದ ದಿನದಂದು ನೈವ್ಯೇದ್ಯಕ್ಕೆ ಕಡಲೆಬೇಳೆಯಿಂದ ತಯಾರಿಸಿದ ಪಾಯಸ, ಹೋಳಿಗೆ ಇತ್ಯಾದಿ ಸಿಹಿ ತಿನಿಸುಗಳನ್ನು ದೇವರಿಗೆ ಅರ್ಪಿಸುತ್ತಾರೆ.