ದಾವಣಗೆರೆ: ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರು ಹೊಸ ರೈಲ್ವೆ ಮಾರ್ಗದ ಕಾಮಗಾರಿ ಹಿನ್ನೆಲೆಯಲ್ಲಿ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಬೆಂಗಳೂರಿನಿಂದ ಬೆಳಗಾವಿ(Bengaluru-Belagavi) ಕಡೆಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat )ಸೇರಿದಂತೆ ನಾಲ್ಕು ರೈಲುಗಳು ಮಾರ್ಗಮಧ್ಯೆಯೇ ನಿಂತು ಪ್ರಯಾಣಿಕರು ಪರದಾಡಿದ ಪ್ರಸಂಗ ಮಂಗಳವಾರ ರಾತ್ರಿ ನಡೆದಿದೆ.
ಸಂಜೆ 5:30ರ ಸುಮಾರಿಗೆ ದಾವಣಗೆರೆ(Davanagere) ತಾಲೂಕಿನ ಮಾಯಕೊಂಡ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವಂದೇ ಭಾರತ್ ರೈಲು, ಅಲ್ಲಿಯೇ ಗಂಟೆಗಟ್ಟಲೆ ನಿಂತಿದೆ. ವಂದೇ ಭಾರತ್ ಜೊತೆಗೆ ಬೆಂಗಳೂರು(Bengaluru) ಕಡೆಯಿಂದ ಬರುತ್ತಿದ್ದ ಇತರ ಮೂರು ರೈಲುಗಳೂ ಕೊಡಗನೂರು, ಸಾಸಲು ಮತ್ತು ಶಿವನಿಯಲ್ಲಿ ನಿಲುಗಡೆಯಾಗಿತ್ತು.
ರೈಲು ಸಂಚಾರ ಯಾವಾಗ ಪುನರಾರಂಭಗೊಳ್ಳಲಿದೆ ಅಥವಾ ರೈಲ್ವೆ ಮಾರ್ಗ (ಲೈನ್) ಯಾವಾಗ ಮುಕ್ತವಾಗಲಿದೆ ಎಂಬುದರ ಬಗ್ಗೆ ರೈಲ್ವೆ ಅಧಿಕಾರಿಗಳು ಯಾವುದೇ ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ಇದರಿಂದಾಗಿ ರೈಲಿನಲ್ಲಿದ್ದ ಪ್ರಯಾಣಿಕರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಐದು ಪೊಲೀಸ್ ಕಮಿಷನರೇಟ್ ವಿಂಗಡನೆಗೆ ಸಚಿವ ಸಂಪುಟ ಅಸ್ತು – ಸಭೆಯ ಪ್ರಮುಖ ತೀರ್ಮಾನಗಳು ಏನು?
ಮಾಯಕೊಂಡದಲ್ಲಿ ನಿಂತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ರೈಲಿನ ಒಳಗಡೆ ಊಟದ ವ್ಯವಸ್ಥೆ ಇದ್ದ ಕಾರಣ ಪ್ರಯಾಣಿಕರಿಗೆ ಸಮಸ್ಯೆಯಾಗಲಿಲ್ಲ. ಆದರೆ, ಗ್ರಾಮೀಣ ಭಾಗದ ಸಣ್ಣ ನಿಲ್ದಾಣಗಳಾದ ಕೊಡಗನೂರು, ಸಾಸಲು ಮತ್ತು ಶಿವನಿಯಲ್ಲಿ ನಿಂತಿರುವ ಉಳಿದ ಮೂರು ರೈಲುಗಳ ಪ್ರಯಾಣಿಕರಿಗೆ ಕುಡಿಯುವ ನೀರು, ಆಹಾರವೂ ಸಿಗದೇ ತೀವ್ರ ಪರದಾಡುವಂತಾಗಿತ್ತು.
ರೈಲು ಸಂಚಾರ ಯಾವಾಗ ಪುನರಾರಂಭಗೊಳ್ಳಲಿದೆ ಅಥವಾ ರೈಲ್ವೆ ಲೈನ್ ಯಾವಾಗ ಕ್ಲಿಯರ್ ಆಗಲಿದೆ ಎಂಬ ಬಗ್ಗೆ ಅಧಿಕಾರಿಗಳು ಯಾವುದೇ ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ಇದರಿಂದ ಬೇಸತ್ತ ಹತ್ತಿರದ ಊರುಗಳ ಪ್ರಯಾಣಿಕರು ರೈಲಿನಿಂದ ಕೆಳಗಿಳಿದು ರಸ್ತೆ ಮಾರ್ಗದ ಮೂಲಕ ಬಸ್ ಹಿಡಿದು ತೆರಳಲು ಮುಂದಾದರು. ಆದರೆ ಗ್ರಾಮೀಣ ಭಾಗದ ಆ ನಿಲ್ದಾಣಗಳ ಬಳಿ ಸೂಕ್ತ ಬಸ್ ಸಂಪರ್ಕವಿಲ್ಲದ ಕಾರಣ ಅನಿವಾರ್ಯವಾಗಿ ಮತ್ತೆ ರೈಲನ್ನೇ ಹತ್ತಿ ಹತಾಶೆಯಿಂದ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ತಡರಾತ್ರಿ 4 ವಿವಿಧ ನಿಲ್ದಾಣಗಳಲ್ಲಿ ನಿಂತಿದ್ದ ರೈಲುಗಳು ಮತ್ತೆ ಪ್ರಯಾಣ ಮುಂದುವರಿಸಿವೆ.

