– ಅತಿದೊಡ್ಡ ತೈಲ ಒಪ್ಪಂದ ಘೋಷಿಸಿದ ಅಮೆರಿಕ ಅಧ್ಯಕ್ಷ
ವಾಷಿಂಗ್ಟನ್: ಅಮೆರಿಕವು ವೆನೆಜುವೆಲಾದೊಂದಿಗೆ (Venezuela) ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ತೈಲ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅನ್ವಯ ವೆನೆಜುವೆಲಾದ 65 ಶತಕೋಟಿ ಬ್ಯಾರಲ್ ತೈಲ ನಿಕ್ಷೇಪಗಳ ಮೇಲೆ ಅಮೆರಿಕ ಹಿಡಿತ ಸಾಧಿಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದರು.
ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲರ್ ಮಡುರೊ ಅವರ ಸರ್ಕಾರವನ್ನು ಅಮೆರಿಕ ಉರುಳಿದ ಬಹುದಿನಗಳ ನಂತರ ಈ ಮಹತ್ವದ ಬೆಳವಣಿಗೆ ಸಂಭವಿಸಿದೆ.

ಈ ಮಹತ್ವದ ಒಪ್ಪಂದಕ್ಕಾಗಿ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗೂ ವೆನೆಜುವೆಲಾದ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿ ಹಾಗೂ ಈ ಒಪ್ಪಂದವು (Oil Deal) ಉಭಯ ದೇಶಗಳ ನಡುವಿನ ಸಂಬಂಧವನ್ನ ಮತ್ತಷ್ಟು ಬಲಪಡಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಈ ಐತಿಹಾಸಿಕ ಒಪ್ಪಂದ ಅಮೆರಿಕದ ತೈಲ ನಿಕ್ಷೇಪಗಳ ಸಾಮರ್ಥ್ಯವನ್ನ ದ್ವಿಗುಣಗೊಳಿಸಲಿದೆ, ನಮ್ಮ ತೈಲ ಪೂರೈಕೆ ಗಣನೀಯವಾಗಿ ಹೆಚ್ಚಿಸುವ ಜೊತೆಗೆ ಭವಿಷ್ಯದಲ್ಲಿ ಪ್ರತಿಯೊಬ್ಬ ಅಮೆರಿಕನ್ನರಿಗೆ ಕಡಿಮೆ ಬೆಲೆಯಲ್ಲಿ ತೈಲ ಮತ್ತು ಅನಿಲ ದೊರಕಿಸಿಕೊಡಲು ಸಹಾಯ ಮಾಡುತ್ತದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ವೆನೆಜುವೆಲಾವನ್ನು ಸಮೃದ್ಧಿಯತ್ತ ಸಾಗಿಸಲು ಸಹಾಯ ಮಾಡುತ್ತದೆ ಎಂದು ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ಟ್ರೂತ್ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.

ವೆನೆಜುವೆಲಾದೊಂದಿಗಿನ ನಮ್ಮ ಒಪ್ಪಂದವು ವಿಶ್ವ ಇತಿಹಾಸದಲ್ಲೇ ಇದುವರೆಗಿನ ಅತಿದೊಡ್ಡ ತೈಲ ಒಪ್ಪಂದವಾಗಿದೆ ಎಂದು ಅವರು ಪುನರುಚ್ಛರಿಸಿದ್ದಾರೆ.
ವೆನೆಜುವೆಲಾ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳಲ್ಲಿ ಒಂದಾಗಿದೆ. ಯುಎಸ್ ಇಂಧನ ಮಾಹಿತಿ ಆಡಳಿತದ ಅಂದಾಜಿನ ಪ್ರಕಾರ, ದಕ್ಷಿಣ ಅಮೆರಿಕಾದ ದೇಶವು ಸುಮಾರು 303 ಶತಕೋಟಿ ಬ್ಯಾರೆಲ್ ಕಚ್ಚಾ ತೈಲ ಹೊಂದಿದೆ. ಇದು ವಿಶ್ವದ ಒಟ್ಟು ಪೂರೈಕೆಯ ಸರಿಸುಮಾರು ಶೇ.17 ರಷ್ಟಿದೆ. ಇದರ ತೈಲ ನಿಕ್ಷೇಪಗಳನ್ನು ಸಹ ನಕ್ಷೆ ಮಾಡಲಾಗಿದೆ. ಆದರೆ ಕಳಪೆ ಮೂಲಸೌಕರ್ಯದಿಂದಾಗಿ ವೆನೆಜುವೆಲಾ ವಿಶ್ವದ ತೈಲದ ಸುಮಾರು ಶೇ.1 ರಷ್ಟು ಮಾತ್ರ ಉತ್ಪಾದಿಸುತ್ತದೆ. ಇದೀಗ ಹೊಸ ಒಪ್ಪಂದಗಳ ಅಡಿಯಲ್ಲಿ ಅಮೆರಿಕವು ವೆನೆಜುವೆಲಾ ತೈಲ ನಿಕ್ಷೇಪಗಳನ್ನ ಅಭಿವೃದ್ಧಿಪಡಿಸಲು ಅವಕಾಶ ನೀಡಲಿದ್ದು, ಇದಕ್ಕೆ ಪ್ರತಿಯಾಗಿ ಹೆಚ್ಚಿನ ಪಾಲನ್ನು ಅಮೆರಿಕ ಪಡೆಯಲಿದೆ ಎಂದು ತಿಳಿದುಬಂದಿದೆ.
