– ಇರಾನ್ ಸಂಘರ್ಷದಿಂದ ಇಂಧನ ಪೂರೈಕೆ, ವ್ಯಾಪಾರದಲ್ಲಿ ವ್ಯತ್ಯಯವೇ ಭಾರತದ ಕಳವಳ
ನವದೆಹಲಿ: ಜಾಗತಿಕ ಭೂ-ರಾಜಕೀಯದಲ್ಲಿ ಅಮೆರಿಕದ (America) ನಿಲುವಿನಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಇದು ಉದ್ದೇಶಪೂರ್ವಕ ಆಯ್ಕೆಯ ಭಾಗವಾಗಿದೆ. ʻಅಮೆರಿಕವು ಉದ್ದೇಶಪೂರ್ವಕವಾಗಿ ಏಕಾಂಗಿಯಾಗುತ್ತಿರುವ ಶಕ್ತಿʼಯಾಗಿ ರೂಪುಗೊಳ್ಳುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ (S Jaishankar) ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಯಲ್ಲಿ ನಡೆದ ಮ್ಯೂನಿಚ್ ನಾಯಕರ ಸಭೆಯನ್ನುದ್ದೇಶಿಸಿ (Munich Leaders Meeting) ಮಾತನಾಡಿದ ಅವರು, ಜಾಗತಿಕ ರಾಜಕೀಯದ ಶಕ್ತಿಸಮೀಕರಣ ವೇಗವಾಗಿ ಬದಲಾಗುತ್ತಿದೆ. ಅಮೆರಿಕದ ವಿದೇಶಾಂಗ ನಿಲುವಿನಲ್ಲಿ ಮಹತ್ವದ ಬದಲಾವಣೆ ಮತ್ತು ಚೀನಾದ ಹೆಚ್ಚುತ್ತಿರುವ ಪ್ರಭಾವವು ಹೊಸ ಜಾಗತಿಕ ವ್ಯವಸ್ಥೆಗೆ ದಾರಿ ಮಾಡಿಕೊಡುತ್ತಿದೆ ಎಂದು ಹೇಳುವ ಮೂಲಕ ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನ ರೂಪಿಸುತ್ತಿರುವ ಪ್ರಮುಖ ಶಕ್ತಿಗಳ ಕುರಿತು ವಿಶ್ಲೇಷಣೆ ನಡೆಸಿದರು.

ಈ ವೇಳೆ ಅಮೆರಿಕದ ನಿಲುವುಗಳ ಕುರಿತು ಮಾತನಾಡಿ, ಇಂದು ಜಾಗತಿಕ ಭೂದೃಶ್ಯವು ಮುಖ್ಯವಾಗಿ ಅಮೆರಿಕದ ʻರ‍್ಯಾಡಿಕಲ್ ರಿಪೊಸಿಷನಿಂಗ್ʼನಿಂದ ಗುರುತಿಸಲ್ಪಡುತ್ತಿದೆ ಎಂಬುದನ್ನು ಇಲ್ಲಿ ಇರುವ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಇದು ಆಯ್ಕೆಯ ನಿಲುವಾಗಿದೆ. ಒಂದು ರೀತಿಯಲ್ಲಿ ಹೇಳುವುದಾದ್ರೆ, ಅಮೆರಿಕವು ಉದ್ದೇಶಪೂರ್ವಕವಾಗಿ ಏಕಾಂಗಿಯಾಗಿರುವ ಶಕ್ತಿಯಾಗಿ ಬದಲಾಗಿದೆ ಎಂದರು. ರ‍್ಯಾಡಿಕಲ್ ರಿಪೊಸಿಷನಿಂಗ್ (Radical Repositioning) ಎಂದರೆ ಒಂದು ಕಂಪನಿಯು ತನ್ನ ಬ್ರ್ಯಾಂಡ್, ಉತ್ಪನ್ನ ಅಥವಾ ಇಡೀ ವ್ಯವಹಾರದ ಗುರುತನ್ನ ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಮತ್ತು ಆಮೂಲಾಗ್ರವಾಗಿ ಬದಲಾಯಿಸುವ ಒಂದು ಕಾರ್ಯತಂತ್ರ.
ಜಾಗತಿಕ ವ್ಯವಸ್ಥೆಯಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಭಾವವೂ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ. ಚೀನಾ ತನ್ನನ್ನು ‘ವಿಶಿಷ್ಟ ದೇಶ’ ಎಂದು ಪರಿಗಣಿಸುತ್ತದೆ. ಹಲವು ವಿಚಾರಗಳಲ್ಲಿ ಜಾಗತಿಕ ಮಟ್ಟದಲ್ಲಿ ಚೀನಾದ ಸ್ಥಾನಮಾನವೂ ಈ ಸ್ವಯಂ-ಗ್ರಹಿಕೆಗೆ ಪೂರಕವಾಗಿದೆ ಎಂದು ಜೈಶಂಕರ್ ಅಭಿಪ್ರಾಯಪಟ್ಟರು.
ಜಾಗತಿಕ ಪರಿಸ್ಥಿತಿಯ 2ನೇ ಪ್ರಮುಖ ಅಂಶವೆಂದರೆ ಚೀನಾದ ಏರಿಕೆ. ಚೀನಾ ತನ್ನನ್ನು ವಿಶಿಷ್ಟ ದೇಶವೆಂದು ನೋಡುತ್ತದೆ. ಇದು ಅದರ ಸ್ವಯಂ-ಗ್ರಹಿಕೆಯಷ್ಟೇ ಅಲ್ಲ, ಹಲವು ರೀತಿಯಲ್ಲಿ ಜಗತ್ತಿನಲ್ಲಿ ಅದರ ವಾಸ್ತವಿಕ ಸ್ಥಾನಮಾನವೂ ಆಗಿದೆ ಎಂದು ಹೇಳಿದರು.

‘ಸ್ಪರ್ಧೆ ಅಮೆರಿಕ-ಚೀನಾಕ್ಕೆ ಮಾತ್ರ ಸೀಮಿತವಲ್ಲ’
ಪ್ರಮುಖ ಶಕ್ತಿಗಳ ನಡುವಿನ ಹೆಚ್ಚುತ್ತಿರುವ ಸ್ಪರ್ಧೆ ಇನ್ನು ಅಮೆರಿಕ ಮತ್ತು ಚೀನಾಕ್ಕೆ ಮಾತ್ರ ಸೀಮಿತವಾಗಿಲ್ಲ. ಯಾವುದೇ ದೇಶಗಳು ತಮ್ಮ ಬಳಿ ಇರುವ ಯಾವುದೇ ರೀತಿಯ ಪ್ರಭಾವ ಅಥವಾ ಸಾಮರ್ಥ್ಯವನ್ನ ಜಾಗತಿಕ ಸ್ಪರ್ಧೆಯಲ್ಲಿ ಅಸ್ತ್ರವಾಗಿ ಬಳಸುತ್ತಿವೆ. ತೀವ್ರವಾದ ಕಾರ್ಯತಂತ್ರದ ಪೈಪೋಟಿ ಇದ್ದರೂ ಆರ್ಥಿಕ ಮತ್ತು ರಾಜಕೀಯ ಪರಸ್ಪರ ಅವಲಂಬನೆಯೂ ಮುಂದುವರಿದಿದೆ ಎಂದು ವಿವರಿಸಿದರು.
ಇರಾನ್ ಸಂಘರ್ಷದ ಬಗ್ಗೆ ಜೈಶಂಕರ್ ಮಾತು
ಇದೇ ವೇಳೆ, ಇರಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆಯೂ ಜೈಶಂಕರ್ ಮಾತನಾಡಿದರು. ಈ ಸಂಘರ್ಷದಿಂದ ಇಂಧನ ಪೂರೈಕೆ, ವ್ಯಾಪಾರ ಮತ್ತು ಜನರ ಸಂಚಾರಕ್ಕೆ ಉಂಟಾಗಬಹುದಾದ ವ್ಯತ್ಯಯವೇ ಭಾರತದ ಪ್ರಮುಖ ಕಳವಳವಾಗಿದೆ ಎಂದು ಅವರು ಹೇಳಿದರು.

ಭಾರತವು ಪರಮಾಣು ಪ್ರಸರಣ ತಡೆ ಒಪ್ಪಂದ (NPT)ಕ್ಕೆ ಸಹಿ ಹಾಕಿಲ್ಲ. ಆದರೆ ಇರಾನ್ NPTಗೆ ಸಹಿ ಹಾಕಿದೆ. ಹೀಗಾಗಿ ಎರಡೂ ದೇಶಗಳ ಪರಿಸ್ಥಿತಿ ವಿಭಿನ್ನವಾಗಿದೆ. ಇರಾನ್ ವಿಚಾರದಲ್ಲಿ ಭಾರತ NPT (ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ತಡೆ ಒಪ್ಪಂದ)ಗೆ ಸಹಿ ಹಾಕದ ದೇಶವಾಗಿದೆ. ಹೀಗಾಗಿ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದೆ. ನಮಗೆ ತಕ್ಷಣದ ಕಳವಳವೆಂದರೆ ಈ ಸಂಘರ್ಷದಿಂದ ಉಂಟಾಗಿರುವ ಇಂಧನ ಮತ್ತು ವ್ಯಾಪಾರದ ವ್ಯತ್ಯಯ. ಇಂಧನ ಮಾರುಕಟ್ಟೆಗಳು ತೀವ್ರ ಅಸ್ಥಿರತೆ ಎದುರಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಇದು ಜನರ ಅಡುಗೆ ಮನೆ, ಉದ್ಯೋಗಗಳು ಮತ್ತು ಜೀವನೋಪಾಯದ ಮೇಲೂ ಪರಿಣಾಮ ಬೀರುವ ವಿಚಾರವಾಗಿದೆ. ಇವುಗಳೆಲ್ಲವೂ ನಮಗೆ ಅತ್ಯಂತ ಮಹತ್ವದ್ದಾಗಿವೆ. ಏಕೆಂದರೆ ನಾವು ಮುಖ್ಯವಾಗಿ ಆ ಭಾಗದ ಇಂಧನ ಪೂರೈಕೆಯ ಮೇಲೆ ಅವಲಂಬಿತರಾಗಿದ್ದೇವೆ. ಆದ್ದರಿಂದ ಸ್ಥಗಿತಗೊಂಡಿರುವ ಅಥವಾ ವ್ಯತ್ಯಯ ಉಂಟಾಗಿರುವ ಇಂಧನ ಮತ್ತು ವ್ಯಾಪಾರದ ನಿರಂತರ ಹರಿವು ಮರುಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದರು.

