– ಉತ್ತರ ಪ್ರದೇಶದಲ್ಲೂ ಪರೀಕ್ಷಾ ಅಕ್ರಮದ ವಾಸನೆ
ಲಕ್ನೋ: UPSSSC ಪದವಿ ಮಟ್ಟದ ಮುಖ್ಯ ಪರೀಕ್ಷೆಯಲ್ಲಿ ಬ್ಲೂಟೂತ್ ಸಾಧನ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಯನ್ನ (UPSSSC Aspirant) ಉತ್ತರ ಪ್ರದೇಶ STF ಅಧಿಕಾರಿಗಳು ರೆಡ್‌ಹ್ಯಾಂಡಾಗಿ ಬಂಧಿಸಿದ್ದಾರೆ.
ಪ್ರಯಾಗ್‌ರಾಜ್ ಮೂಲದ ಬ್ರಿಜೇಶ್ ಕುಮಾರ್ ಯಾದವ್ ಲಕ್ನೋನ ಸೆಕ್ಟರ್-ಸಿ, ಮಹಾನಗರದಲ್ಲಿರುವ ದಯಾನಂದ ಕನ್ಯಾ ಇಂಟರ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸಿಕ್ಕಿಬಿದ್ದಿದ್ದಾನೆ. ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಾಗಿ ಹೇಳಿ ಆತ ಪರೀಕ್ಷಾ ದಂಧೆ ನಡೆಸುತ್ತಿದ್ದ ರಮೇಶ್ ಚಂದ್ರ ಪಟೇಲ್‌ಗೆ ಮುಂಗಡವಾಗಿ 10 ಲಕ್ಷ ರೂ. ನೀಡಿದ್ದ ಎನ್ನಲಾಗಿದೆ.
STF ಪ್ರಕಾರ, ಬ್ರಿಜೇಶ್ ಒಳಉಡುಪು ಹಾಗೂ ವಿಶೇಷವಾಗಿ ಹೊಲಿಯಲಾಗಿದ್ದ ವೆಸ್ಟ್‌ನಲ್ಲಿ SIM ಆಧಾರಿತ ಬ್ಲೂಟೂತ್ ಸಾಧನ ಬಚ್ಚಿಟ್ಟುಕೊಂಡಿದ್ದ. ಹೊರಗಿದ್ದ ‘ಸಾಲ್ವರ್’ನಿಂದ ಉತ್ತರಗಳನ್ನ ಪಡೆಯಲು ಈ ಸಾಧನ ಬಳಸಲಾಗುತ್ತಿತ್ತು. ಸದ್ಯ ಆತನನ್ನ ಲಾಕ್ ಮಾಡಿರುವ ಅಧಿಕಾರಿಗಳು ಬ್ಲೂಟೂತ್ ಸಾಧನ, ಮೊಬೈಲ್, ಅಡ್ಮಿಟ್ ಕಾರ್ಡ್, ಆಧಾರ್ ಕಾರ್ಡ್, OMR ಶೀಟ್ ಹಾಗೂ ಮೂಲ ಪ್ರಶ್ನೆಪತ್ರಿಕೆಗಳನ್ನ ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ರಮೇಶ್ ಚಂದ್ರ ಪಟೇಲ್ ಈ ವ್ಯವಸ್ಥೆ ಮಾಡಿಕೊಟ್ಟಿದ್ದಾಗಿ ಬ್ರಿಜೇಶ್ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿಂದೆ ಕೂಡ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇದೇ ರೀತಿಯ ದಂಧೆ ನಡೆಸಿದ್ದಾನೆ ಎನ್ನಲಾಗಿದ್ದು, ಆತನಿಗಾಗಿ STF ಶೋಧ ನಡೆಸುತ್ತಿದೆ.
ಈ ಪ್ರಕರಣದ ಹಿಂದೆ ಇರುವ ಸಂಪೂರ್ಣ ‘ಸಾಲ್ವರ್ ಗ್ಯಾಂಗ್’ ಜಾಲದ ಬಗ್ಗೆ STF ತನಿಖೆ ಮುಂದುವರಿಸಿದೆ.
