ನವದೆಹಲಿ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ (SP) ಮತ್ತು ಕಾಂಗ್ರೆಸ್ (Congress) ನಡುವಿನ ಸೀಟು ಹಂಚಿಕೆ ಚರ್ಚೆ ಇಂದು ನಡೆಯಲಿದೆ.
ಕಾಂಗ್ರೆಸ್ 181 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿಸಿದ್ದು, ಈ ಬೇಡಿಕೆಯೇ ಈಗ ಚರ್ಚೆಯ ಕೇಂದ್ರವಾಗಿದೆ.
ಡಿಸೆಂಬರ್ ಮೊದಲ ವಾರದಿಂದ ಕಾಂಗ್ರೆಸ್ ಪ್ರಚಾರ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಉತ್ತರ ಪ್ರದೇಶದ ಹಿರಿಯ ನಾಯಕರೊಂದಿಗೆ ಈಗಾಗಲೇ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಚುನಾವಣಾ ಸಿದ್ಧತೆ, ಪಕ್ಷದ ಸಂಘಟನೆ ಮತ್ತು ಪ್ರಚಾರ ಕಾರ್ಯತಂತ್ರದ ಕುರಿತು ಚರ್ಚಿಸಲಾಗಿದೆ.
ಡಿಸೆಂಬರ್ ಮೊದಲ ವಾರದಿಂದ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಆರಂಭಿಸಲು ಕಾಂಗ್ರೆಸ್ ನಿರ್ಧರಿಸಿದೆ. ರ್ಯಾಲಿ ಮತ್ತು ಯಾತ್ರೆಗಳ ಮೂಲಕ ಜನರನ್ನು ತಲುಪಲು ಯೋಜನೆ ರೂಪಿಸಲಾಗಿದೆ. ಮೈತ್ರಿಯಲ್ಲಿ ಎಷ್ಟು ಸ್ಥಾನಗಳು ಸಿಗುತ್ತವೆ ಎಂಬುದಕ್ಕಿಂತ ಒಟ್ಟಾಗಿ ಚುನಾವಣೆ ಗೆಲ್ಲುವುದು ಮುಖ್ಯ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
181 ಕ್ಷೇತ್ರಗಳ ಪಟ್ಟಿಯನ್ನು ಎಸ್ಪಿಗೆ ಸಲ್ಲಿಕೆ
ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ 181 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಆಸಕ್ತಿ ತೋರಿಸಿದೆ. ಈ ಕ್ಷೇತ್ರಗಳ ಪಟ್ಟಿಯನ್ನು ಸಮಾಜವಾದಿ ಪಕ್ಷಕ್ಕೆ ಸಲ್ಲಿಸಲಾಗಿದೆ
ಸೀಟು ಹಂಚಿಕೆ ಕುರಿತು ಮಾತನಾಡಿರುವ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಯಾವ ಪಕ್ಷಕ್ಕೆ ಯಾವ ಕ್ಷೇತ್ರದಲ್ಲಿ ಗೆಲ್ಲುವ ಅವಕಾಶ ಹೆಚ್ಚಿದೆಯೋ ಆ ಪಕ್ಷಕ್ಕೆ ಆ ಸ್ಥಾನ ನೀಡುವ ಬಗ್ಗೆ ಎರಡೂ ಪಕ್ಷಗಳು ಚರ್ಚಿಸಲಿವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ನೊಂದಿಗೆ ಮಾತುಕತೆ ಮುಂದುವರಿಯಲಿದೆ. ಪ್ರತಿಯೊಂದು ಕ್ಷೇತ್ರದ ಬಗ್ಗೆಯೂ ವಿವರವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.ಇದನ್ನೂ ಓದಿ: ಪ್ರತಿದಿನ ಊಟದ ಸಮಯದಲ್ಲಿ ತಾಯಿ, ತಂದೆಯ ತೊಡೆಯ ಮೇಲೆ ಕುಳಿತಿರುತ್ತಿದ್ದರು: ರಾಹುಲ್
ಕಾಂಗ್ರೆಸ್ 181 ಸ್ಥಾನಗಳನ್ನು ಕೇಳಿದೆ ಎಂಬ ವಿಚಾರ ಬಹಿರಂಗವಾದ ಬಳಿಕ ಮೈತ್ರಿಕೂಟದ ಸೀಟು ಹಂಚಿಕೆ ಕುರಿತು ಚರ್ಚೆ ಹೆಚ್ಚಾಗಿದೆ. ಕಾಂಗ್ರೆಸ್ ಬೇಡಿಕೆಯಷ್ಟು ಸ್ಥಾನಗಳನ್ನು ಎಸ್ಪಿ ನೀಡುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯವೂ ಪಕ್ಷದ ವಲಯಗಳಲ್ಲಿ ವ್ಯಕ್ತವಾಗಿದೆ. ಕೆಲವು ಎಸ್ಪಿ ನಾಯಕರು ಕಾಂಗ್ರೆಸ್ 60ರಿಂದ 70 ಸ್ಥಾನಗಳಿಗೆ ತೃಪ್ತಿಪಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅಂತಿಮವಾಗಿ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂಬುದು ಎರಡೂ ಪಕ್ಷಗಳ ನಡುವಿನ ಮಾತುಕತೆಯ ಬಳಿಕವೇ ಸ್ಪಷ್ಟವಾಗಲಿದೆ. ಉತ್ತರ ಪ್ರದೇಶದಲ್ಲಿ 2027ರ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ನಿರೀಕ್ಷೆಯಿದೆ.ಇದನ್ನೂ ಓದಿ: ಫಿಲಿಫೈನ್ಸ್ನ ಐತಿಹಾಸಿಕ ಗುರುದ್ವಾರಕ್ಕೆ ಮೋದಿ ಭೇಟಿ
