ನವದೆಹಲಿ: ರಷ್ಯಾ-ಉಕ್ರೇನ್ (Russia-Ukraine) ಯುದ್ಧ ಮತ್ತೆ ತೀವ್ರಗೊಂಡಿದ್ದು, ರಷ್ಯಾದ ತೈಲ ( Crude Oil) ಸಂಸ್ಕರಣಾಗಾರಗಳ ಮೇಲೆ ಉಕ್ರೇನ್ ಡ್ರೋನ್ ದಾಳಿಯನ್ನು ಮುಂದುವರೆಸಿದೆ. ಈ ಬೆಳವಣಿಗೆ ಭಾರತದ ತೈಲ ಆಮದು (India Oil Import) ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಚರ್ಚೆ ಶುರುವಾಗಿದೆ.
2026ರಲ್ಲಿ ಉಕ್ರೇನ್ ರಷ್ಯಾದ ತೈಲ ಮತ್ತು ಅನಿಲ ಮೂಲಸೌಕರ್ಯಗಳ ಮೇಲೆ 194 ಬಾರಿ ದಾಳಿ ನಡೆಸಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 11 ಪಟ್ಟು ಹೆಚ್ಚು ಎಂದು ವರದಿಯಾಗಿದೆ. ಮೇ 1ರಿಂದ ಜುಲೈ 6ರವರೆಗೆ ಮಾತ್ರ 36 ಡ್ರೋನ್ ದಾಳಿಗಳು ನಡೆದಿವೆ.
ಇತ್ತೀಚೆಗೆ ಸೈಬೀರಿಯಾದ ಒಮ್‌ಸ್ಕ್‌ನಲ್ಲಿರುವ ರಷ್ಯಾದ ಅತಿದೊಡ್ಡ ತೈಲ ಸಂಸ್ಕರಣಾಗಾರದ ಮೇಲೆಯೂ ಡ್ರೋನ್ ದಾಳಿ ನಡೆದಿದೆ. ಪ್ರತಿದಿನ ಸುಮಾರು 4.6 ಲಕ್ಷ ಬ್ಯಾರೆಲ್ ತೈಲ ಸಂಸ್ಕರಿಸುವ ಈ ಘಟಕಕ್ಕೆ ಹಾನಿಯಾಗಿರುವುದು ರಷ್ಯಾದ ಇಂಧನ ವಲಯಕ್ಕೆ ದೊಡ್ಡ ಹೊಡೆತವಾಗಿದೆ.
ಈ ದಾಳಿಗಳಿಂದ ರಷ್ಯಾದ ತೈಲ ಸಂಸ್ಕರಣಾ ಸಾಮರ್ಥ್ಯ ಸುಮಾರು 40 ಶೇಕಡಾ ಕುಸಿದಿದೆ. ಹಾನಿಗೊಳಗಾದ ಘಟಕಗಳ ದುರಸ್ತಿ ಕಾರ್ಯಕ್ಕೆ ಹಲವು ವಾರಗಳು ಅಥವಾ ತಿಂಗಳುಗಳು ಬೇಕಾಗಬಹುದು. ಇದರೊಂದಿಗೆ ಯುರೋಪಿನ ನಿರ್ಬಂಧಗಳಿಂದ ಅಗತ್ಯ ಬಿಡಿಭಾಗಗಳ ಕೊರತೆಯೂ ಎದುರಾಗಿದೆ.
ಸಂಸ್ಕರಣೆಯಲ್ಲಿ ಕುಸಿತವಾದರೂ ರಷ್ಯಾ ಕಚ್ಚಾ ತೈಲ ರಫ್ತು ಮುಂದುವರಿಸಿದೆ. ಆದರೆ ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗುತ್ತಿರುವ ವರದಿಗಳು ಕೇಳಿಬಂದಿವೆ. ಕೆಲ ಪ್ರದೇಶಗಳಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯಗಳೂ ವರದಿಯಾಗಿವೆ.ಇದನ್ನೂ ಓದಿ; ಒಂದೇ ದಿನದಲ್ಲಿ ಕೆಆರ್‌ಎಸ್‌ಗೆ 5,000 ಕ್ಯೂಸೆಕ್ ಒಳಹರಿವು ಹೆಚ್ಚಳ
ಭಾರತ ಈಗ ರಷ್ಯಾದ ಅತಿದೊಡ್ಡ ತೈಲ ಖರೀದಿದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ದಿನಕ್ಕೆ ಸುಮಾರು 2 ರಿಂದ 2.6 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಭಾರತದ ಒಟ್ಟು ತೈಲ ಆಮದಿನಲ್ಲಿ ರಷ್ಯಾದ ಪಾಲು ಶೇ.35ರಿಂದ ಶೇ.42ರಷ್ಟಿದೆ. ಹೀಗಾಗಿ ಯುದ್ಧ ಮತ್ತಷ್ಟು ತೀವ್ರವಾದರೆ ಭಾರತದ ತೈಲ ಪೂರೈಕೆ ಮತ್ತು ಬೆಲೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ತಜ್ಞರು ಸೂಚಿಸಿದ್ದಾರೆ.ಇದನ್ನೂ ಓದಿ; ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ – ಸುಪ್ರೀಂನಲ್ಲಿ ಶೀಘ್ರ ವಿಚಾರಣೆಗೆ ತರಲು ಪ್ರಯತ್ನ: ಫಡ್ನವಿಸ್

