ಮಾಸ್ಕೋ/ವಾಷಿಂಗ್ಟನ್: ರಷ್ಯಾ-ಉಕ್ರೇನ್ (Ukraine Russia War) ನಡುವೆ ಸುದೀರ್ಘ ಅವಧಿಯಿಂದ ನಡೀತಿರೋ ಯುದ್ಧಕ್ಕೆ ಅಂತ್ಯವಾಡಲು ಎಲ್ಲಾ ಪ್ರಯತ್ನಗಳು ನಡೆದಿವೆ. ಸೌದಿಯಲ್ಲಿ ಉಕ್ರೇನ್-ಅಮೆರಿಕ ನಡುವೆ ಮಹತ್ವದ ಚರ್ಚೆ ನಡೆದಿದೆ. ಅಮೆರಿಕ ಪ್ರಸ್ತಾವದಂತೆ ರಷ್ಯಾ ಜೊತೆಗೆ 30 ದಿನಗಳ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲು ಸಿದ್ಧ ಎಂದು ಉಕ್ರೇನ್ ಘೋಷಿಸಿದೆ.
ಈ ಬೆನ್ನಲ್ಲೇ, ಉಕ್ರೇನ್‌ಗೆ (Ukraine) ಮಿಲಿಟರಿ ನೆರವು ಸ್ಥಗಿತ ಆದೇಶವನ್ನು ಅಮೆರಿಕ ಹಿಂಪಡೆದಿದೆ. ಅಲ್ಲದೇ ಕದನ ವಿರಾಮಕ್ಕೆ ರಷ್ಯಾವನ್ನು ಒಪ್ಪಿಸಲು ಅಮೆರಿಕ ಪ್ರಯತ್ನ ನಡೆಸಿದೆ. ಪುಟಿನ್ ಜೊತೆ ಟ್ರಂಪ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಆದ್ರೆ, ಇದು ಅಂತಿಮ ಹಂತ ತಲುಪಿಲ್ಲ. ಕದನ ವಿರಾಮ ಸಂಬಂಧ ಪುಟಿನ್ ನಿರ್ಣಯ ಬಾಕಿಯಿದೆ. ಗುರುವಾರ (ಮಾ.13) ವ್ಲಾಡಿಮಿರ್ ಪುಟಿನ್ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವುದಾಗಿಯೂ ಎಂದು ಟ್ರಂಪ್ ತಿಳಿಸಿದ್ದಾರೆ.
ಶ್ವೇತಭವನ ಮತ್ತು ಕೈವ್‌ನ ಜಂಟಿ ಹೇಳಿಕೆಯ ಪ್ರಕಾರ, 2 ಕಡೆಯವರೂ ಒಪ್ಪಿದರೆ ಮಾತ್ರವೇ ತಾತ್ಕಾಲಿಕವಾಗಿ 30 ದಿನಗಳ ವರೆಗೆ ಕದನ ವಿರಾಮ ಏರ್ಪಡಲಿದೆ ಎಂದು ಹೇಳಿದೆ. ಇನ್ನೂ ಟ್ರಂಪ್ 2ನೇ ಬಾರಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಮಹತ್ವದ ಹೆಜ್ಜೆಯಾಗಿದೆ.