ಉಡುಪಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನ, ರಾಜ್ಯದ ನೆರೆಯಿಂದಾಗಿ ಮಂತ್ರಿಮಂಡಲ ವಿಸ್ತರಣೆ ಮುಂದೂಡಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಪರಿಹಾರ ನಮ್ಮ ಮೊದಲ ಆದ್ಯತೆ. ನೆರೆ ಸಮಸ್ಯೆ ಮುಗಿದ ಕೂಡಲೇ ಹೈಕಮಾಂಡ್ ಬಳಿ ಹೋಗಿ ಮಂತ್ರಿ ಮಂಡಲ ವಿಸ್ತರಣೆ ಮಾಡುತ್ತೇವೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಅಸಹನೆಗೊಳಗಾಗಿ ಯಡಿಯೂರಪ್ಪ ಎಲ್ಲಿದ್ದೀಯಪ್ಪ ಎಂಬ ಪ್ರಶ್ನೆ ಮಾಡಿದ್ದಾರೆ. ಅಧಿಕಾರ ಇಲ್ಲದೆ ಬೇಸತ್ತು ನೊಂದಿದ್ದಾರೆ. ಕುಮಾರಸ್ವಾಮಿ ಬಹಳ ಸಿಟ್ಟಿನಲ್ಲಿದ್ದಾರೆ. ಭ್ರಮನಿರಸನಗೊಂಡವರ ಪ್ರಶ್ನೆಗೆ ಉತ್ತರಿಸಲ್ಲ ಎಂದು ವಾಗ್ದಾಳಿ ನಡೆಸಿದರು.
ನೆರೆಯ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಬೆಳಗಾವಿಗೆ ಧಾವಿಸಿದ್ದಾರೆ. ಅಧಿಕಾರ ಇದ್ದರೂ ಇಲ್ಲದಿದ್ದರೂ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವರು ನಿರಂತರವಾಗಿ ಜನರ ಜೊತೆಗಿದ್ದಾರೆ. ರಾಜ್ಯದ ನೆರೆ ಹಾನಿಯ ಸಂಪೂರ್ಣ ಲೆಕ್ಕ ಸಿಕ್ಕಿಲ್ಲ. ಮಳೆ ಹಾನಿ ಜಾಸ್ತಿಯಾಗುವ ಸಾಧ್ಯತೆ ಇದೆ. ಸಂಪೂರ್ಣ ಲೆಕ್ಕಾಚಾರ ಸಿಕ್ಕಕೂಡಲೇ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ಜಮ್ಮುಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ವಿಚಾರದಲ್ಲಿ ಕಾಂಗ್ರೆಸ್ ನಿಲುವಿನ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ, ಕಾಂಗ್ರೆಸ್‍ನ ನಿಲುವು ಏನು ಅನ್ನೋದು ಸ್ಪಷ್ಟವಾಗಿದೆ. ಕಾಂಗ್ರೆಸ್‍ನ ದಿವಾಳಿತನ, ದೇಶದ್ರೋಹ ಪ್ರದರ್ಶನವಾಗುತ್ತಿದೆ. ಕಾಂಗ್ರೆಸ್ ನಡೆಯಿಂದ ಬೇಸರವಾಗುತ್ತಿದೆ ಎಂದರು.