ಉಡುಪಿ: ನಾನು ಕಚೇರಿಯಲ್ಲಿ ಕೂತು ಕೆಲಸ ಮಾಡಲು ಬಂದಿಲ್ಲ. ಕರಾವಳಿ ನನಗೆ ಗೊತ್ತು. ನಾನು ಜನರ ಬಳಿ ಹೋಗಿ ಕೆಲಸ ಮಾಡುತ್ತೇನೆ ಎಂದು ಉಡುಪಿ ಜಿಲ್ಲೆ ನೂತನ ಡಿಸಿ ಕೂರ್ಮರಾವ್ ಹೇಳಿದ್ದಾರೆ.
ಪ್ರವಾಸ ಮಾಡಿ ಜನರ, ಜನಪ್ರತಿನಿಧಿಗಳ ಭಾವನೆ ಅರಿತು ಕೆಲಸ ಮಾಡುವೆ. ಜಿಲ್ಲೆಯಾದ್ಯಂತ ಪ್ರವಾಸ ಇವತ್ತಿಂದ ಶುರು ಮಾಡಿದ್ದೇನೆ. ಶಾಲಾ ಭೇಟಿ ಮಾಡಿ ವಿದ್ಯಾರ್ಥಿಗಳು ಶಿಕ್ಷಕರ ಜೊತೆ ಮಾತಾಡಿ ಅವರ ಅಭಿಪ್ರಾಯ ಸಂಗ್ರಹ ಮಾಡುವ ಮೂಲಕ ಜವಾಬ್ದಾರಿ ವಹಿಸಿಕೊಂಡಿದ್ದೇನೆ ಎಂದು ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ ಡಿಸಿ ಹೇಳಿದರು.
ಜಿಲ್ಲೆಯ ಎಲ್ಲಾ ವರ್ಗದ ಜನರ, ಜನಪ್ರತಿನಿಧಿಗಳ ಭಾವನೆ ಅರಿತು ಅದರಂತೆ ಕೆಲಸ ಮಾಡುತ್ತೇನೆ ಸರ್ಕಾರಿ ಬಾಲಕಿಯ ಅಜ್ಜರ ಕಾಡು ಶಾಲೆಗೆ ನನ್ನ ಮೊದಲ ಭೇಟಿ ಎಂದರು. ಇವತ್ತಿನಿಂದ ಶಾಲಾರಂಭವಾಗಿದೆ. ಮಕ್ಕಳ ಜೊತೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಪಾಸಿಟಿವಿಟಿ ದರ ಮತ್ತಿತರ ಅಂಶಗಳನ್ನು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಇದನ್ನೂ ಓದಿ:6 ರಿಂದ 8ನೇ ತರಗತಿ ಆರಂಭಕ್ಕೆ ವೇಳಾಪಟ್ಟಿ ಪ್ರಕಟಿಸಿದ ಶಿಕ್ಷಣ ಇಲಾಖೆ
ವೀಕೆಂಡ್ ಕಫ್ರ್ಯೂನ ಅಗತ್ಯ ಜಿಲ್ಲೆಯಲ್ಲಿಲ್ಲ ಎಂಬ ಶಾಸಕರ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ಅದರ ಬಗ್ಗೆ ಇನ್ನಷ್ಟೇ ಚರ್ಚೆ ನಡೆಸಬೇಕಿದೆ. ಎಲ್ಲರೂ ಕುಳಿತು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಅದ್ಯತೆಯ ಮೇಲೆ ಕೆಲಸ ಮಾಡಬೇಕು. ಭಟ್ಕಳದಲ್ಲಿ ಕೆಲಸ ಮಾಡಿದ ಅನುಭವ ಇದೆ. ಯಾದಗಿರಿಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಸದ್ಯ ಇರುವ ಸವಾಲು ಕೊರೊನಾ ನಿಯಂತ್ರಣ ಮತ್ತು ಜನರ ಜೀವನ ಈ ಬಗ್ಗೆ ಮುತುವರ್ಜಿ ವಹಿಸಲಾಗಿದ್ದು, ಕಡಿಮೆ ಮಾಡಲು ಜಿಲ್ಲೆಯ ಜನ ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು. ಉಡುಪಿ ಡಿಡಿಪಿಐ ಹೆಚ್ ಎನ್ ನಾಗೂರ ಜಿಲ್ಲಾಧಿಕಾರಿಗಳ ಜೊತೆ ಇದ್ದರು. ಇದನ್ನೂ ಓದಿ: ಪುಕ್ಸಟ್ಟೆ ಲೈಫು’ ಚಿತ್ರದ ಟ್ರೇಲರ್ ಔಟ್ – ಸಂಚಾರಿ ವಿಜಯ್ ಹೊಸ ಅವತಾರ ಕಂಡು ಬೆರಗಾದ ಚಿತ್ರರಸಿಕರು