ದಾವಣಗೆರೆ: ನಕಲಿ ದಾಖಲೆಗಳನ್ನು ನೀಡಿ ಬ್ಯಾಂಕ್‍ಗಳಲ್ಲಿ (Bank) ಮ್ಯೂಲ್ ಅಕೌಂಟ್‌ಗಳನ್ನು ತೆರೆದು ಸೈಬರ್ ವಂಚಕರಿಗೆ (Cyber Crime) ಸಹಕರಿಸುತ್ತಿದ್ದ ಆರೋಪದ ಮೇಲೆ ಎಂಜಿನಿಯರಿಂಗ್ ವಿದ್ಯಾರ್ಥಿ ಸೇರಿ ಇಬ್ಬರನ್ನು ದಾವಣಗೆರೆಯ (Davanagere) ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಮೊದಲ ಪ್ರಕಣದಲ್ಲಿ ಹೊನ್ನಾಳಿ ತಾಲೂಕಿನ ಕುಂಕುಮ ಗ್ರಾಮದ ಪರಶುರಾಮ ಎಂಬಾತನನ್ನು ಬಂಧಿಸಿದ್ದಾರೆ. ಈತ ಬೆಂಗಳೂರಿನ ರಾಜಾಜಿನಗರದಲ್ಲಿ ಟ್ಯಾಲೆಂಟೆಡ್ ಸ್ಕ್ವಾಡ್ ಸೊಲ್ಯೂಷನ್ ಜಾಬ್ ಪ್ಲೇಸ್ ಮೆಂಟ್ ಹೆಸರಲ್ಲಿ ಕಂಪನಿ ತಗೆದಿದ್ದ. ವಿವಿಧ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‍ಗಳಲ್ಲಿ 6 ಖಾತೆ ತಗೆದಿದ್ದು, ಈ 6 ಮ್ಯೂಲ್ ಅಕೌಂಟ್‍ಗಳಿಂದ ಕೋಟ್ಯಂತರ ಹಣ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. 6 ಮ್ಯೂಲ್ ಅಕೌಂಟ್‍ಗಳ ವಿರುದ್ಧ ದೇಶಾದ್ಯಂತ 95 ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ವಿಚಾರಣೆ ಮುಂದುವರಿದಿದೆ. ಇದನ್ನೂ ಓದಿ: ಹಣ ಹೂಡಿ ಅಧಿಕ ಲಾಭಗಳಿಸಿ – ಆಸೆಗೆ ಬಿದ್ದು 76 ಲಕ್ಷ ಪಂಗನಾಮ ಹಾಕಿಸಿಕೊಂಡ ವ್ಯಕ್ತಿ!
ಮತ್ತೊಂದು ಪ್ರಕರಣದಲ್ಲಿ 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಆನ್‍ಲೈನ್‍ನಲ್ಲಿ ಕೆಲಸ ಹುಡುಕುವ ಯುವ ಜನತೆಯೇ ಈತನ ಟಾರ್ಗೆಟ್ ಆಗಿದ್ದು, ಹೀಗೆ ಹಲವರು ಕೆಲಸದಾಸೆಗೆ ಸೈಬರ್ ವಂಚಕರ ಜಾಲಕ್ಕೆ ಸಿಲುಕಿದ್ದಾರೆ. ಈತ ಎರಡು ಬ್ಯಾಂಕ್‌ಗಳ ಮ್ಯೂಲ್ ಖಾತೆ ತೆರೆದು ವಂಚನೆ ಮಾಡಿದ್ದ ಈ ಯುವಕನನ್ನು ಬಂಧನ ಮಾಡಿ, ಆತನ ಮ್ಯೂಲ್ ಅಕೌಂಟ್‍ಗಳ ಪರಿಶೀಲನೆ ವೇಳೆ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಈತನನ್ನು ಟೆಲಿಗ್ರಾಂನಲ್ಲಿ ಆನ್‌ಲೈನ್ ವಂಚಕರು ಪರಿಚಯ ಮಾಡಿಕೊಂಡಿದ್ದರು. ‘ಅರ್ನ್ ವೈಲ್ ಲರ್ನ್’ ಕಲಿಯುವಾಗಲೇ ಸಂಪಾದಿಸಿ ಎಂದು ವಂಚಕರು ಆತನಿಗೆ ಹೇಳಿದ್ದು, ಖಾತೆಗೆ ಬಂದ ಹಣ ಅವರು ನೀಡುವ UPI ಐಡಿಗಳಿಗೆ ವರ್ಗಾಯಿಸುವ ಟಾಸ್ಕ್‌ನ್ನು ಇವನಿಗೆ ನೀಡಿದ್ದರು. ತನ್ನ ಖಾತೆಗೆ ಬಂದ ಹಣ ಬೇರೆಯವರ ಖಾತೆಗೆ ವರ್ಗಾಯಿಸುತ್ತಿದ್ದ. ಅಲ್ಲದೆ ಈ ಕೆಲಸಕ್ಕೆ ವಿದ್ಯಾರ್ಥಿಗೆ ವಂಚಕರು ಒಂದಷ್ಟು ಕಮಿಷನ್ ನೀಡುತ್ತಿದ್ದರು. ಬಳಿಕ ಹಣದಾಸೆಗೆ ಎರಡು ಬ್ಯಾಂಕ್ ಖಾತೆ ತೆರೆದಿದ್ದ. ಈ ಖಾತೆಗಳ ಉಲ್ಲೇಖಿಸಿ ದೇಶದ ವಿವಿಧೆಡೆ ಎಂಟು ಪ್ರಕರಣ ದಾಖಲಾಗಿವೆ. ಇದನ್ನೂ ಓದಿ: ಒಂದು ವಾರದಲ್ಲಿ ಡಬಲ್ ಹಣ ಆಮಿಷ – ಕೋಟ್ಯಂತರ ರೂ. ವಂಚಿಸಿ ಆಂಧ್ರ ದಂಪತಿ ಪರಾರಿ

