ಕಲಬುರಗಿ: ನೀಟ್ (NEET) ಪರೀಕ್ಷೆ ಬರೆದ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ನಗರದ ವಿದ್ಯಾರ್ಥಿನಿ ಭಾಗ್ಯಶ್ರೀ ಪ್ರಕರಣಕ್ಕೆ (Bhagyashree Suicide Case) ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಕೆ ಪಿಯುಸಿ ಪರೀಕ್ಷೆಯಲ್ಲಿ (PUC Exam) ಫೇಲ್ ಆಗಿದ್ದ ಆಘಾತಕಾರಿ ಸತ್ಯ ಇದೀಗ ಬೆಳಕಿಗೆ ಬಂದಿದೆ.
ದ್ವಿತೀಯ ಪಿಯುಸಿ ಫಲಿತಾಂಶ ಬಂದಾಗ ವಿದ್ಯಾರ್ಥಿನಿ ಭಾಗ್ಯಶ್ರೀ ತನಗೆ 92% ರಷ್ಟು ಅಂಕಗಳನ್ನು ಪಡೆದು ಪಾಸ್ ಆಗಿರುವುದಾಗಿ ಹೆತ್ತವರ ಬಳಿ ಹೇಳಿಕೊಂಡಿದ್ದಳು. ಮಗಳ ಮಾತನ್ನು ನಂಬಿದ್ದ ಪೋಷಕರು, ಆಕೆ ವೈದ್ಯಕೀಯ ಶಿಕ್ಷಣದ ಕನಸು ಹೊತ್ತು ನೀಟ್ ಪರೀಕ್ಷೆ ಬರೆಯಲು ಸಂಪೂರ್ಣ ಬೆಂಬಲ ನೀಡಿದ್ದರು. ಇತ್ತೀಚೆಗಷ್ಟೇ ಭಾಗ್ಯಶ್ರೀ ನೀಟ್ ಪರೀಕ್ಷೆಯನ್ನೂ ಬರೆದಿದ್ದಳು.
ಈಗ ಲಭ್ಯವಾಗಿರುವ ಮಾರ್ಕ್ಸ್‌ಕಾರ್ಡ್ ಪ್ರಕಾರ ಭಾಗ್ಯಶ್ರೀ ದ್ವಿತೀಯ ಪಿಯುಸಿಯ ಗಣಿತ (Mathematics) ಮತ್ತು ಭೌತಶಾಸ್ತ್ರ ಪರೀಕ್ಷೆಯಲ್ಲಿ ಫೇಲ್ ಆಗಿದ್ದಳು. ಬಳಿಕ ಅವಳು ಭೌತಶಾಸ್ತ್ರ ಮತ್ತು ಗಣಿತ ಮರು ಪರೀಕ್ಷೆ ಬರೆದಿದ್ದಳು. ಭೌತಶಾಸ್ತ್ರದಲ್ಲಿ 51 ಅಂಕ ಪಡೆದು ತೇರ್ಗಡೆಯಾಗಿದ್ದರೆ ಗಣಿತದಲ್ಲಿ 24 ಅಂಕ ಪಡೆದು ಅನುತ್ತೀರ್ಣಗೊಂಡಿದ್ದಳು. ಕಾಲೇಜಿನಿಂದ ನೀಡಲಾಗುವ 20 ಇಂಟರ್ನಲ್ (ಆಂತರಿಕ) ಅಂಕಗಳನ್ನು ಸೇರಿಸಿಯೂ ಆಕೆ ಗಣಿತದಲ್ಲಿ ಕೇವಲ 24 ಅಂಕ ಪಡೆದಿದ್ದಳು.
ದ್ವಿತೀಯ ಪಿಯುಸಿಯ ಪರೀಕ್ಷೆ-2 ರಫಲಿತಾಂಶ ಮೇ 21 ರಂದು ಪ್ರಕಟವಾಗಿತ್ತು. ಪಿಯುಸಿ ಫಲಿತಾಂಶದಲ್ಲಿ ತಾನು ಫೇಲ್ ಆಗಿರುವ ವಿಷಯ ಮನೆಯವರಿಗೆ ಗೊತ್ತಾದರೆ ಎಲ್ಲಿ ಬೈಯುತ್ತಾರೋ ಅಥವಾ ತಮ್ಮ ನಿರೀಕ್ಷೆ ಸುಳ್ಳಾಯಿತಲ್ಲ ಎಂಬ ತೀವ್ರ ಮನಸ್ತಾಪ ಹಾಗೂ ಭಯದಿಂದಲೇ ವಿದ್ಯಾರ್ಥಿನಿ ಆತ್ಮಹತ್ಯೆಯ ಹಾದಿ ಹಿಡಿದಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಕೊಪ್ಪಳದಲ್ಲಿ ಭಾರೀ ಮಳೆ – ರಸ್ತೆಗೆ ಬಿದ್ದ ಮರಕ್ಕೆ ಬೈಕ್ ಡಿಕ್ಕಿ, ಯುವಕ ಸ್ಥಳದಲ್ಲೇ ಸಾವು, ಮತ್ತೊಬ್ಬ ಗಂಭೀರ!

ಮಗಳು ಯಾವುದೋ ವಿಷಯದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಾರ ಮೇಲೂ ದೂರು ಇರುವುದಿಲ್ಲ ಎಂದು ಯುವತಿಯ ತಂದೆ ಸ್ಟೇಷನ್ ಬಜಾರ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅವರ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅನುಮಾನಗಳು ಸುಳಿದಾಡುತ್ತಿದ್ದವು. ಸದ್ಯ ವಿದ್ಯಾರ್ಥಿನಿಯ ಅಂಕಪಟ್ಟಿ ಕೈಸೇರುತ್ತಿದ್ದಂತೆ ತನಿಖೆಯ ದಿಕ್ಕು ಬದಲಾಗಿದೆ. ಈ ನಿಟ್ಟಿನಲ್ಲಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡು, ಪಿಯುಸಿ ಫೇಲ್ ಆದ ಮುಖಭಂಗ ಹಾಗೂ ಭಯದಿಂದಲೇ ಈ ಆತ್ಮಹತ್ಯೆ ನಡೆದಿದೆಯೇ ಎಂಬ ಕೋನದಲ್ಲಿ ತನಿಖೆ ಕೈಗೊಂಡಿದ್ದಾರೆ.
ಪಿಯುಸಿ ಅಂಕಗಳನ್ನು ಕೇವಲ ನೀಟ್ ಪರೀಕ್ಷೆ ಬರೆಯಲು ಅರ್ಹರೇ ಅಲ್ಲವೇ ಎಂದು ನೋಡಲು ಮಾತ್ರ ಬಳಸಲಾಗುತ್ತದೆ. ಮೆಡಿಕಲ್ ಸೀಟು ನೀಡುವಾಗ ಪಿಯುಸಿ ಅಂಕಗಳನ್ನು ಪರಿಗಣಿಸುವುದಿಲ್ಲ. ಸಂಪೂರ್ಣವಾಗಿ ನೀಟ್ ಪರೀಕ್ಷೆಯಲ್ಲಿ ಪಡೆಯುವ ರ‍್ಯಾಂಕ್ ಆಧಾರದ ಮೇಲೆ ಮಾತ್ರ ಸೀಟು ಸಿಗುತ್ತದೆ.ನೀಟ್‌ನಲ್ಲಿ ಎಷ್ಟು ಅಂಕ ಪಡೆದರೂ, ಪಿಯುಸಿ ಮಂಡಳಿ ಪರೀಕ್ಷೆಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಕನಿಷ್ಠ ಅಂಕಗಳನ್ನು ಹೊಂದಿರಬೇಕು. ಸಾಮಾನ್ಯ ವರ್ಗಕ್ಕೆ 50% ಅಂಕ, ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗದ ವಿದ್ಯಾರ್ಥಿಗಳು 40% ಅಂಕಗಳನ್ನು ಪಡೆದು ಉತ್ತೀರ್ಣರಾಗಬೇಕಾಗುತ್ತದೆ.
