ಉತ್ತರ ಕರ್ನಾಟಕದ ಅಡುಗೆ ಎಂದ ತಕ್ಷಣ ನೆನಪಾಗುವುದೇ ಮಸಾಲೆ ಭರಿತ ಖಾರ ಮತ್ತು ಅದ್ಭುತ ರುಚಿ. ಅದರಲ್ಲಿ ಬದನೆಕಾಯಿ ಎಣ್ಣೆಗಾಯಿ ಪಲ್ಯದ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತೆ. ರೊಟ್ಟಿ ಜೊತೆಗೆ ಎಣ್ಣೆಗಾಯಿ ಪಲ್ಯ ಇದ್ದರಂತೂ ಊಟದ ಮಜಾನೇ ಬೇರೆ.
ಬಾಯಲ್ಲಿ ನೀರೂರಿಸುವ ಸಾಂಪ್ರದಾಯಿಕ ಶೈಲಿಯ ಬದನೆಕಾಯಿ ಎಣ್ಣೆಗಾಯಿ ಮಾಡುವ ಸುಲಭ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು:
ಬಿಳಿ ಎಳ್ಳು
ಶೇಂಗಾ
ಒಣಕೊಬ್ಬರಿ ತುರಿ
ಬದನೆಕಾಯಿ
ಈರುಳ್ಳಿ
ಶುಂಠಿ
ಬೆಳ್ಳುಳ್ಳಿ
ಲವಂಗ
ಚಕ್ಕೆ
ಕರಿಬೇವು
ಅರಿಶಿಣ ಪುಡಿ
ಅಚ್ಚಖಾರದ ಪುಡಿ
ಧನಿಯಾ ಪುಡಿ
ಬೆಲ್ಲ
ಹುಣಸೆಹಣ್ಣಿನ ರಸ
ಉಪ್ಪು
ಎಣ್ಣೆ
ಸಾಸಿವೆ
ಒಣಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:
ಮೊದಲು ಬಿಸಿ ತವೆಗೆ ಶೇಂಗಾ ಹಾಕಿಕೊಂಡು ಹುರಿದುಕೊಳ್ಳಿ. ಬಳಿಕ ಅದೇ ತವೆಯಲ್ಲಿ ಬಿಳಿ ಎಳ್ಳು ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ. ನಂತರ ಒಣಕೊಬ್ಬರಿ ತುರಿಯನ್ನು ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಬಳಿಕ ಮೂರನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಿ.
ಒಂದು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿಯನ್ನು ಹಾಕಿ, ನಂತರ ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಲವಂಗ, ಚಕ್ಕೆ ಮತ್ತು ಕರಿಬೇವು ಸೇರಿಸಿ 2 ನಿಮಿಷ ಹುರಿಯಿರಿ. ಈ ಹುರಿದ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ, ಅದರ ಜೊತೆಗೆ ಅರಿಶಿಣ, ಖಾರದಪುಡಿ, ಧನಿಯಾ ಪುಡಿ, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನೀರನ್ನು ಸೇರಿಸದೇ ಹುಣಸೆಹಣ್ಣಿನ ರಸವನ್ನು ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.

ಈಗ ರುಬ್ಬಿದ ಮಸಾಲೆ ಮತ್ತು ಮೊದಲೇ ಸಿದ್ಧಪಡಿಸಿದ ಒಣ ಮಸಾಲೆ ಪುಡಿಯನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿ. ಬದನೆಕಾಯಿ ನಡುವಿನಲ್ಲಿ ನಾಲ್ಕು ಭಾಗವಾಗಿ ಸೀಳಿ ಉಪ್ಪು ನೀರಿನಲ್ಲಿ ಹಾಕಿಡಿ. ಬಳಿಕ ನೀರನ್ನು ಸೋಸಿ, ಸಿದ್ಧಪಡಿಸಿದ ಮಸಾಲೆಯನ್ನು ಬದನೆಕಾಯಿಯ ಒಳಗೆ ಚೆನ್ನಾಗಿ ತುಂಬಿಕೊಳ್ಳಿ. ಉಳಿದ ಮಸಾಲೆಯನ್ನು ಹಾಗೇ ಇಟ್ಟುಕೊಳ್ಳಿ.
ಬಾಣಲೆಯಲ್ಲಿ 4-5 ಚಮಚ ಎಣ್ಣೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ಅದಕ್ಕೆ ಸಾಸಿವೆ ಮತ್ತು ಒಣಮೆಣಸಿನಕಾಯಿ ಒಗ್ಗರಣೆ ಕೊಡಿ. ನಂತರ ಮಸಾಲೆ ತುಂಬಿದ ಬದನೆಕಾಯಿಗಳನ್ನು ಎಣ್ಣೆಯಲ್ಲಿ ಹಾಕಿ, ಸ್ವಲ್ಪ ಸಮಯದ ಬಳಿಕ ಉಳಿದಿದ್ದ ಮಸಾಲೆ ಪೇಸ್ಟ್ ಮತ್ತು ಒಂದು ಕಪ್ ನೀರನ್ನು ಸೇರಿಸಿ, ಪಾತ್ರೆಯನ್ನು ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ, ಬಿಸಿಬಿಸಿ ಜೋಳದ ರೊಟ್ಟಿ, ಚಪಾತಿ ಅಥವಾ ಅನ್ನದ ಜೊತೆ ಸವಿಯಲು ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಎಣ್ಣೆಗಾಯಿ ಪಲ್ಯ ಸಿದ್ಧ.
