ಅಗರ್ತಲಾ: ತ್ರಿಪುರಾದಲ್ಲಿ ವ್ಯಕ್ತಿಯೊರ್ವ ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದು ಸಾವನ್ನಪ್ಪಿದ್ದಾನೆ.
ಶುಕ್ರವಾರ ತ್ರಿಪುರಾದ ಖೋವೈ ಜಿಲ್ಲೆಯ ಲಂಕಾಪುರ ಎಡಿಸಿ ಗ್ರಾಮದಲ್ಲಿ 55 ವರ್ಷದ ವ್ಯಕ್ತಿಯೊಬ್ಬ ಆಸಿಡ್ ಸೇವಿಸಿ ಮೃತಪಟ್ಟಿದ್ದಾನೆ. ಮೃತ ದುರ್ದೈವಿ ಕಾರ್ತಿಕ್ ಮೋಹನ್ ದೆಬ್ಬರ್ಮ ಮದ್ಯದ ಅಮಲಿನಲ್ಲಿ ಆಸಿಡ್ ತುಂಬಿದ ಬಾಟಲಿಯನ್ನು ಕುಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಬ್ಬರ್ಮ ದಿನನಿತ್ಯ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿದ್ದ. ಶುಕ್ರವಾರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮೂಲಗಳ ಪ್ರಕಾರ, ದೆಬ್ಬರ್ಮ ಸ್ಥಳೀಯ ಹಳ್ಳಿಗಾಡಿನ ಮದ್ಯದ ಅಂಗಡಿಯಲ್ಲಿ ಅತಿಯಾಗಿ ಕುಡಿದಿದ್ದು, ಮನೆಗೆ ಹೋಗಿ ಮಲಗಿಕೊಂಡಿದ್ದಾನೆ. ನಂತರ ಮಧ್ಯರಾತ್ರಿ ಎದ್ದು, ಮದ್ಯ ಕುಡಿಯಲು ಹುಡುಕಾಡಿದ್ದಾನೆ. ಆದರೆ ಆತನ ಕೈಗೆ ಮನೆಯಲ್ಲಿದ್ದ ಆಸಿಡ್ ಬಾಟಲಿ ಸಿಕ್ಕಿದೆ. ಅದನ್ನೇ ಮದ್ಯ ಎಂದು ತಿಳಿದ ದೆಬ್ಬರ್ಮ ಆಸಿಡ್ ಕುಡಿದಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸರ್ಕಾರಿ ಶಾಲೆಯ ಕಂಪ್ಯೂಟರ್ ಕದ್ದ ಕಳ್ಳರು
ಆಸಿಡ್ ಕುಡಿದ ತಕ್ಷಣ ದೆಬ್ಬರ್ಮ ಪ್ರಜ್ಞಾಹೀನನಾಗಿದ್ದಾನೆ. ದೆಬ್ಬರ್ಮ ಕುಟುಂಬ ಸದಸ್ಯರು ಆತ ಪ್ರಜ್ಞಾಹೀನನಾಗಿರುವುದನ್ನು ನೋಡಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದರು ಎಂದು ಮೂಲಗಳು ಹೇಳಿದೆ.