ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಪಕ್ಷ ವಿರೋಧಿ ಹೇಳಿಕೆ ನೀಡಿದ ತೃಣಮೂಲ ಕಾಂಗ್ರೆಸ್‌ನ (TMC) ಮೂವರು ವಕ್ತಾರರನ್ನು ಅಮಾನತು ಮಾಡಲಾಗಿದೆ.
ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪದ ಮೇಲೆ ವಕ್ತಾರರಾದ ಕೊಹಿನೂರ್ ಮಜುಂದಾರ್, ರಿಜು ದತ್ತ ಮತ್ತು ಕಾರ್ತಿಕ್ ಘೋಷ್ ಅವರನ್ನು 6 ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ – ಕುರ್ಚಿ ಕಿತ್ತಾಟಕ್ಕೆ ಮೋದಿ ಲೇವಡಿ
ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ, ನಾಯಕತ್ವ ಮತ್ತು ಪಕ್ಷದ ಚುನಾವಣಾ ಕಾರ್ಯತಂತ್ರವನ್ನು ಟೀಕಿಸಿದ ಐವರು ವಕ್ತಾರರಿಗೆ ಪಕ್ಷವು ಶೋಕಾಸ್ ನೋಟಿಸ್ ನೀಡಿತ್ತು. ಅದಾದ ಕೆಲವು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಫಲಿತಾಂಶದಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದಿದ್ದರೆ, ಟಿಎಂಸಿ 80 ಸ್ಥಾನಗಳಿಗೆ ಕುಸಿದಿದೆ.
ಪಕ್ಷದ ಶಿಸ್ತು ಸಮಿತಿಯ ಸದಸ್ಯರೂ ಆಗಿರುವ ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್ ಅವರು ನೋಟಿಸ್‌ಗಳನ್ನು ಜಾರಿ ಮಾಡಿದ್ದಾರೆ. ಅಮಾನತುಗೊಂಡ ಮೂವರು ನಾಯಕರಲ್ಲದೆ, ಕೃಷ್ಣೇಂದು ಚೌಧರಿ ಮತ್ತು ಪಪಿಯಾ ಘೋಷ್ ಅವರಿಗೂ ನೋಟಿಸ್ ನೀಡಲಾಗಿದೆ.
ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಭೇಟಿ ಮಾಡಲು ಪಕ್ಷದ ನಾಯಕರು ಗಂಟೆಗಟ್ಟಲೆ ಕಾಯಬೇಕಾಗಿತ್ತು ಎಂದು ಮಜುಂದಾರ್ ಮಾತನಾಡಿದ್ದರು. ಮಾಲ್ಡಾದ ಹಿರಿಯ ನಾಯಕರಾದ ಚೌಧರಿ ಅವರು ಡೈಮಂಡ್ ಹಾರ್ಬರ್ ಸಂಸದರ ಕಾರ್ಯವೈಖರಿಯನ್ನು ಟೀಕಿಸಿದ್ದರು. ಏತನ್ಮಧ್ಯೆ, ದತ್ತಾ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಚುನಾವಣೋತ್ತರ ಹಿಂಸಾಚಾರವನ್ನು ನಿಗ್ರಹಿಸಲು ಬಿಜೆಪಿ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಶ್ಲಾಘಿಸಿದ್ದರು. ಇದನ್ನೂ ಓದಿ: ಭವಿಷ್ಯದಲ್ಲಿ INDIA ಒಕ್ಕೂಟವನ್ನು ವಿಜಯ್ ಸೇರಬಹುದು: ಚಿದಂಬರಂ

