ಮಂಗಳೂರು: ಚಲಿಸುತ್ತಿದ್ದ ರೈಲಿನ ಇಂಜಿನ್ ಬಳಿ ಏಕಾಏಕಿ ಬೆಂಕಿ ಹತ್ತಿಕೊಂಡು ಉರಿದ ಘಟನೆ ಕರ್ನಾಟಕ- ಗೋವಾ ಗಡಿಭಾಗದಲ್ಲಿ ನಡೆದಿದೆ.
ಇಂದು ಮುಂಜಾನೆ, ಮುಂಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಮತ್ಸ್ಯಗಂಧ ಸೂಪರ್ ಎಕ್ಸ್ ಪ್ರೆಸ್ ರೈಲಿನ ಇಂಜಿನ್ ನಲ್ಲಿ ಬೆಂಕಿ ಹತ್ತಿಕೊಂಡಿದ್ದು, ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ಇಂಜಿನ್ ಕೆಳಭಾಗದಲ್ಲೇ ಬೆಂಕಿ ಕಾಣಿಸಿಕೊಂಡು ಆರಂಭದ ಪ್ಯಾಸೆಂಜರ್ ಬೋಗಿಯಲ್ಲಿ ಭಾರೀ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಪ್ರಯಾಣಿಕರು ರೈಲ್ವೇ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಬೆಂಕಿ ಜೋರಾಗಿ ಉರಿಯುತ್ತಿದ್ರೂ ಬೆಂಕಿ ನಂದಿಸಲು ರೈಲಿನಲ್ಲಿ ಸಾಕಷ್ಟು ಉಪಕರಣಗಳು ಇರಲಿಲ್ಲ.
ಇಂಜಿನ್ ಕೆಳಭಾಗದಲ್ಲೇ ಬೆಂಕಿ ಹತ್ತಿಕೊಂಡಿದ್ದರಿಂದ ಡೀಸೆಲ್ ಟ್ಯಾಂಕಿಗೆ ಬೆಂಕಿ ತಗಲುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಸಕಾಲದಲ್ಲಿ ಪ್ರಯಾಣಿಕರೇ ಸೇರಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.
ಇತ್ತೀಚೆಗಷ್ಟೇ ಉಡುಪಿಯಲ್ಲಿ ರೈಲಿನ ಎಸಿ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಬೋಗಿ ಭಸ್ಮವಾಗಿತ್ತು. ಆದರೂ ರೈಲ್ವೇ ಇಲಾಖೆ ಎಚ್ಚೆತ್ತುಕೊಂಡಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.