ಪಣಜಿ: ದೂಧ್ ಸಾಗರ್ ಬಳಿ ವಾಸ್ಕೊ- ಹೌರಾ ಅಮರಾವತಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ದೂಧ್ ಸಾಗರ್ ಮತ್ತು ಕಾರಂಜೋಲ್ ನಡುವೆ ಈ ರೈಲಿನ ಎಂಜಿನಿನ ಮುಂಭಾಗದ ಎರಡು ಜೋಡಿ ಚಕ್ರಗಳು ಹಳಿ ತಪ್ಪಿವೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಮಾಹಿತಿ ನೀಡಿದರು. ಬೆಳಗ್ಗೆ 6:30ಕ್ಕೆ ವಾಸ್ಕೋ-ಡ-ಗಾಮಾದಿಂದ ಹೊರಟಿದ್ದ ಈ ರೈಲು, ಬೆಳಿಗ್ಗೆ 8:56ಕ್ಕೆ ದೂಧ್ ಸಾಗರ್ ಬಳಿ ಬಂದಾಗ ಹಳಿ ತಪ್ಪಿದೆ ಎಂದು ತಿಳಿಸಿದರು.
ವಿಷಯ ತಿಳಿದ ತಕ್ಷಣ ತ್ವರಿತ ಅಪಘಾತ ಪರಿಹಾರ ರೈಲು ಮತ್ತು ವೈದ್ಯಕೀಯ ಸಲಕರಣೆ ವ್ಯಾನ್ ಸ್ಥಳಕ್ಕೆ ಭೇಟಿ ನೀಡಿ, ಸುರಕ್ಷತಾ ಪರಿಹಾರ ಕಾರ್ಯಾಚರಣೆ ನಡೆಸಿ ಮತ್ತೆ ಎಂಜಿನ್ ಹಳಿಗೆ ತರಲಾಗಿದೆ. ಹಳಿ ತಪ್ಪಿದ್ದರಿಂದ ರೈಲಿನ ಯಾವುದೇ ಬೋಗಿಯ ಮೇಲೆ ಪರಿಣಾಮ ಬೀರಿಲ್ಲ. ಈ ಘಟನೆ ಹಿನ್ನೆಲೆಯಲ್ಲಿ ಎರ್ನಾಕುಲಂ-ಪುಣೆ ಎಕ್ಸ್‌ಪ್ರೆಸ್ ರೈಲು ಸಂಚಾರದಲ್ಲಿ ವಿಳಂಬ ಕೂಡಾ ಆಗಿದೆ.