Connect with us

Districts

ಉಪಚುನಾವಣಾ ಕಣದಲ್ಲಿ ಕುರುಡು ಕಾಂಚಾಣದ ಕೇಕೆ- ಇಂದು ಅಗ್ರ ನಾಯಕರ ಅಬ್ಬರದ ಪ್ರಚಾರ

Published

on

Share this

ಮೈಸೂರು: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕುರುಡು ಕಾಂಚಾಣದ ಸದ್ದು ಜೋರಾಗಿದೆ. ಜೊತೆಗೆ ಚುನಾವಣಾ ನೀತಿ ಸಂಹಿತೆಗೆ ಬೆಲೆಯೇ ಇಲ್ಲದಂತಾಗಿದೆ. ಇನ್ನು, ಇವತ್ತು ಅಖಾಡದಲ್ಲಿ ಎರಡೂ ಪಕ್ಷಗಳ ನಾಯಕರು ಭರ್ಜರಿ ಕ್ಯಾಂಪೇನ್ ನಡೆಸಲಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಪ್ರತಿಷ್ಠೆಯ ಕಣವಾಗಿರೋ ನಂಜನಗೂಡು, ಗುಂಡ್ಲುಪೇಟೆಯಲ್ಲಿ ಒಂದು ಕಡೆ ಹಣದ ಹೊಳೆ ಹರೀತಿದ್ರೆ, ಮತ್ತೊಂದು ಕಡೆ ನೀತಿ ಸಂಹಿತೆಗೆ ಲವಲೇಷವೂ ಬೆಲೆಯಿಲ್ಲದಂತಾಗಿದೆ. ಹೀಗಾಗಿ ಚುನಾವಣಾ ಆಯೋಗದಲ್ಲಿ ದಿನದಿಂದ ದಿನಕ್ಕೆ ದೂರು ದಾಖಲಾತಿ ಹೆಚ್ಚಾಗುತ್ತಿವೆ.

ಇದರ ಬೆನ್ನಲ್ಲೇ ನಂಜನಗೂಡಿನ ಮತದಾರರಿಗೆ ಮೈಸೂರಿನ ಬೊಂಬೂ ಬಜಾರ್‍ನಲ್ಲಿರುವ ರಾಮಯ್ಯ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಮುಖಂಡರು ಹಣ ಹಂಚುತ್ತಿದ್ದಾರೆ ಅಂತ ಬಿಜೆಪಿ ನಾಯಕರು ಮುತ್ತಿಗೆ ಹಾಕಿದ್ರು. ಇದಾದ ತಕ್ಷಣ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿಯೇ ಪ್ರತಿಭಟಿಸಿದರು.

ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್, ಡಿಸಿಪಿ ಎಚ್‍ಟಿ ಶೇಖರ್ ಆಗಮಿಸಿದರು. ಪೊಲೀಸರು ತಡವಾಗಿ ಸ್ಥಳಕ್ಕೆ ಆಗಮಿಸಿದರು ಅಂತ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಬಳಿಕ ಕಲ್ಯಾಣ ಮಂಟಪದಲ್ಲಿ ನಿಲ್ಲಿಸಲಾಗಿದ್ದ ಹದಿನೈದಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದ್ರು.

ಈಶ್ವರಪ್ಪ ಮೇಲೆ ಬಿತ್ತು ಕೇಸ್: ಗುಂಡ್ಲುಪೇಟೆಯ ಚಿಕ್ಕಾಟಿಯಲ್ಲಿ ಮಾರ್ಚ್ 30ರಂದು “ಕಾಂಗ್ರೆಸ್‍ನವರು ಹಣ ಕೊಟ್ರೆ ತಗೊಂಡು ಬಿಜೆಪಿಗೆ ಮತ ಹಾಕಿ” ಅಂತ ಭಾಷಣ ಮಾಡಿದ್ದ ಈಶ್ವರಪ್ಪ ಅವರ ಸಿಡಿ ಆಧರಿಸಿ ದೂರು ದಾಖಲಿಸಲಾಗಿದೆ.

ಅಗ್ರ ನಾಯಕರಿಂದ ಅಬ್ಬರದ ಪ್ರಚಾರ: ಇಂದು ಭಾನುವಾರ ಆಗಿರೋ ಕಾರಣ ಕ್ಯಾಂಪೇನ್ ಮತ್ತಷ್ಟು ಅಬ್ಬರದಿಂದ ನಡೆಯಲಿದೆ. ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಪ್ರಚಾರ ನಡೆಸಲಿದ್ದಾರೆ. ಬಿಜೆಪಿಯಿಂದ ಕೇಂದ್ರ ಸಚಿವ ಸದಾನಂದಗೌಡ, ಸಿಟಿ ರವಿ, ಮಾಳವಿಕ ಅವಿನಾಶ್ ಕೂಡ ಪ್ರಚಾರ ನಡೆಸಲಿದ್ದಾರೆ. ಇತ್ತ ಮೈಸೂರಿನ ನಂಜಗೂಡಿನಲ್ಲಿ ಸಿಎಂ ಸಿದ್ದರಾಮಯ್ಯ 3 ಗಂಟೆಯ ನಂತರ ಪ್ರಚಾರಕ್ಕೆ ಇಳಿಯುವ ಸಾಧ್ಯತೆಯಿದೆ. ಬಿಜೆಪಿಯಿಂದ ಕೇಂದ್ರ ಸಚಿವ ಅನಂತ್ ಕುಮಾರ್, ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement