ಮಡಿಕೇರಿ: ರಾಜ್ಯದೆಲ್ಲೆಡೆ ವಿಧಾನಸಭಾ ಚುನಾವಣೆಯ ಕಾವು ರಂಗೇರಿದ್ದರೆ, ಪ್ರಕೃತಿ ತವರು ಕೊಡಗು (Kodagu) ಜಿಲ್ಲೆಯಲ್ಲಿ ಮಾತ್ರ ಚುನಾವಣಾ (Election) ಕಣ ಮಂಕಾಗಿದ್ದು, ರಣಬಿಸಿಲು ಜಿಲ್ಲೆಯ ಜನರನ್ನು ತತ್ತರಿಸುವಂತೆ ಮಾಡಿದೆ.
ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ಬಿಸಿಲು ಹೆಚ್ಚಾಗುತ್ತಿದೆ. ತಂಪಾದ ಗಾಳಿ ಬೇಕು ಎಂದು ಬಯಸಿರುವ ಜನ, ಫ್ಯಾನ್ ಹಾಗೂ ಎಸಿ ಮೊರೆ ಹೋಗಿದ್ದಾರೆ. ಛತ್ರಿ ಇಲ್ಲದೇ ಮನೆಯಿಂದ ಹೊರಗೆ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಸೇನಾ ವಾಹನಕ್ಕೆ ಬೆಂಕಿ ತಗುಲಿ 4 ಯೋಧರು ಸಜೀವದಹನ
ಪಶ್ಚಿಮಘಟ್ಟ (Western Ghats) ಮತ್ತು ನಿತ್ಯಹರಿದ್ವರ್ಣ ಕಾಡುಗಳಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತಲೂ ಅತೀ ಹೆಚ್ಚು ಬಿಸಿಲು ಕಂಡುಬರುತ್ತಿದೆ. ಈವರೆಗೂ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಸರಿಯಾಗಿ ಆಗದಿರುವುದರಿಂದ ತಾಪಮಾನ ಹೆಚ್ಚುತ್ತಲೇ ಇದೆ. ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ಅಂಕಿ ಅಂಶಗಳ ಪ್ರಕಾರ ಗರಿಷ್ಠ ತಾಪಮಾನ 36 ರಿಂದ 40 ಡಿಗ್ರಿಯ ನಡುವೆ ಇದೆ. ಅಂದರೆ ಪ್ರತಿದಿನ 36 ಡಿಗ್ರಿಗೂ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ. ಹೀಗಾಗಿ ಸದಾ ತಂಪಾಗಿರುತ್ತಿದ್ದ ಕೊಡಗು ಕಾದ ಕಬ್ಬಿಣದಂತಾಗಿದೆ.
ಇನ್ನೂ ಕಳೆದ ವರ್ಷ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯ ಎಲ್ಲೆಡೆ ಮುಂಗಾರು ಪೂರ್ವ ಮಳೆಯಾಗಿತ್ತು. ಹಾಗಾಗಿ ಹೆಚ್ಚಿನ ಬಿಸಿಲಿದ್ದರೂ ಇಷ್ಟೊಂದು ಸೆಕೆಯ (Heat) ಅನುಭವ ಆಗುತ್ತಿರಲಿಲ್ಲ. ಆದರೆ, ಈ ಬಾರಿ ಜನವರಿಯಿಂದ ಇಲ್ಲಿವರೆಗೆ ಕೆಲವು ಭಾಗಗಳಲ್ಲಿ ಬಿಟ್ಟರೆ ಬಹುತೇಕ ಕಡೆ ಒಂದು ಮಳೆಯೂ ಆಗಿಲ್ಲ. ಇದರಿಂದಾಗಿ ತಾಪಮಾನದಲ್ಲಿ ಏರಿಕೆಯಾಗಿದ್ದು ಜನ ಕಂಗಾಲಾಗಿದ್ದಾರೆ.
ಅಲ್ಲದೇ ಜಿಲ್ಲೆಯಲ್ಲಿ ಜಲ ಮೂಲಗಳು ಬತ್ತಿ ಹೋಗುತ್ತಿದ್ದು, ಇದೇ ರೀತಿಯಲ್ಲಿ ಸೂರ್ಯನ ತಾಪ ಏರಿಕೆ ಆದರೆ ಆರೋಗ್ಯದ ಸಮಸ್ಯೆಗಳು ಎದುರಾಗಲಿದೆ ಎಂದು ಜಿಲ್ಲೆಯ ಜನ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಾಲದಲ್ಲಿ ಪಿಎಫ್‍ಐ ಜಾಲ ವ್ಯಾಪಕವಾಗಿ ಹಬ್ಬಿತ್ತು: ಅರುಣ್ ಸಿಂಗ್