– ಟೊಮೆಟೊ ಬೆಳೆದ ರೈತರು ಖುಷ್ – ಗ್ರಾಹಕರಿಗೆ ಬರೆ
ಚಿಕ್ಕಬಳ್ಳಾಪುರ: ಅಡುಗೆ ಮನೆಯಲ್ಲಿ ಕೆಂಪು ಸುಂದರಿ ಅನ್ನೊ ಅದೊಂದು ವಸ್ತು ಇಲ್ಲ ಅಂದ್ರೆ… ಅಡುಗೆ ರುಚಿಸೋದೇ ಇಲ್ಲ. ಅದನ್ನು ಬಿಟ್ಟು ಗೃಹಿಣಿಯರು ಅಡುಗೆ ಮಾಡುವುದೇ ಇಲ್ಲ ಅನ್ನುವಷ್ಟರಮಟ್ಟಿಗೆ ಕೆಂಪು ಸುಂದರಿ ಕಿಚನ್‌ನಲ್ಲಿ ಸ್ಥಾನ ಪಡೆದಿದೆ. ಕಳೆದ 1 ವರ್ಷದಿಂದ ಅದಕ್ಕೆ ಬೆಲೆ ಅಷ್ಟೊಂದು ಇರಲೆ ಇಲ್ಲ, ಆದ್ರೀಗ ಮತ್ತೆ ಇದ್ದಕ್ಕಿದ್ದಂತೆ ಬೆಲೆ ಏರಿಕೆಯಾಗಿದೆ.
ಟೊಮೆಟೊಗೆ ಉತ್ತಮ ಬೆಲೆ (Tomato Prices Hike) ಬಂದಿರೋದು ರೈತರಿಗೆ (FarmerS) ಖುಷಿಯಾದ್ರೆ ಗ್ರಾಹಕರಿಗೆ ಬರೆ ಎಳೆದಂತಾಗಿದೆ. ಟೊಮೆಟೊಗೆ ದೇಶ ವಿದೇಶದೆಲ್ಲೆಡೆ ಬೇಡಿಕೆ ಇದ್ದೇ ಇದೆ. ಪ್ರತಿಯೊಂದು ಕಿಚನ್ ಗಳಲ್ಲಿ ಒಂದಿಲ್ಲೊಂದು ಅಡುಗೆ ಮಾಡಲು ಟೊಮೆಟೊ ಬೇಕೇಬೇಕು. ಇದ್ರಿಂದ ವರ್ಷದ 365 ದಿನಗಳಲ್ಲೂ ರೈತರು ಟೊಮೆಟೊ ಬೆಳೆಯುತ್ತಾರೆ. ಆದ್ರೆ ಬೆಳೆದ ಬೆಳೆಗೆ ಬೆಲೆ ಸಿಗೋದು ಬಹಳ ಕಡಿಮೆ. ಕಳೆದ ಒಂದು ವರ್ಷದಿಂದ ಟೊಮೆಟೊಗೆ ಉತ್ತಮ ಬೆಲೆ ಇರಲಿಲ್ಲ, ಎಷ್ಟೋ ಬಾರಿ ರೈತರು ಟೊಮೆಟೊವನ್ನ ರಸ್ತೆಗೆ ಸುರಿದು ಹೋಗ್ತಿದ್ರು.
ಬೆಲೆ ಇಳಿಕೆಯಿಂದ ಗ್ರಾಹಕರು ಖುಷಿ ಖುಷಿಯಾಗಿ ಖರೀದಿ ಮಾಡ್ತಿದ್ರೆ, ರೈತರು ರಸ್ತೆಗೆ ಸುರಿದು ಕಣ್ಣೀರಿಡುತ್ತಿದ್ರು. ಆದ್ರೀಗ ಕಳೆದ ಕೆಲವು ದಿನಗಳಿಂದ ಟೊಮೆಟೊಗೆ ಭಾರೀ ಬೆಲೆ ಬಂದಿದೆ. ಕೆಜಿ ಟೊಮೆಟೊ ಮಾರುಕಟ್ಟೆಯಲ್ಲಿ 70 ರೂಪಾಯಿಯಿಂದ 90 ರೂಪಾಯಿವರೆಗೂ ಮಾರಾಟವಾಗ್ತಿದೆ. ಇನ್ನೂ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆ ಟೊಮೆಟೊ ಮಾರುಕಟ್ಟೆಯಲ್ಲಿ 15 ಕೆ.ಜಿಯ ಒಂದು ಕ್ರೇಟ್ ಟೊಮೆಟೊ ಸರಾಸರಿ 700 ರೂಪಾಯಿಗೆ ಮಾರಾಟವಾಗ್ತಿದೆ.
ಕೆ.ಜಿ ಸೇಬಿನ ಬೆಲೆ 100 ರೂ. ಇದ್ರೆ ಟೊಮೆಟೊ ಬೆಲೆ ಅದಕ್ಕೆ ಸರಿಸಮನಾಗಿ ಏರಿಕೆಯಾಗ್ತಿದೆ. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದ್ರೂ ಆಪಲ್ ಕಾಣಿಸುತ್ತಿದೆ ಆದ್ರೆ ಟೊಮೆಟೊ ಕಣ್ಮರೆಯಾಗ್ತಿದೆ.


