– ಹೊರ ರಾಜ್ಯಗಳಿಂದ ಹೆಚ್ಚಿದ ಬೇಡಿಕೆ
ಕೋಲಾರ: ಕಳೆದ ಕೆಲ ತಿಂಗಳುಗಳಿಂದ ಬೆಲೆ ಕುಸಿತದಿಂದ ಸಂಕಷ್ಟದಲ್ಲಿದ್ದ ಟೊಮ್ಯಾಟೋ (Tomato Price) ಬೆಳೆಗಾರರ ಮುಖದಲ್ಲಿ ಇದೀಗ ನಗು ಮೂಡಿದೆ. ಕೋಲಾರ (Kolar)ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಮತ್ತೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ಏರಿಕೆ ಕಂಡಿದೆ.
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಹೊರ ರಾಜ್ಯಗಳಿಗೆ ರವಾನೆ ಮಾಡಲು ಟೊಮ್ಯಾಟೋ ಪ್ಯಾಕಿಂಗ್ ಜೋರಾಗಿ ನಡೆಯುತ್ತಿದೆ. ಮಾರುಕಟ್ಟೆ ಸುತ್ತಲೂ ಹೊರ ರಾಜ್ಯಗಳ ನೂರಾರು ಲಾರಿಗಳು ಸಾಲುಗಟ್ಟಿ ನಿಂತಿದ್ದು, ವ್ಯಾಪಾರ ಚಟುವಟಿಕೆಗಳು ಗರಿಗೆದರಿವೆ.
ಕಳೆದ ಎರಡು-ಮೂರು ತಿಂಗಳುಗಳಿಂದ ಟೊಮ್ಯಾಟೋ ಬೆಲೆ ತೀವ್ರ ಕುಸಿತ ಕಂಡಿತ್ತು. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಿತ್ತು. ಹೋಟೆಲ್ ಉದ್ಯಮವನ್ನೇ ಹೆಚ್ಚಾಗಿ ಅವಲಂಬಿಸಿರುವ ಟೊಮ್ಯಾಟೋ ಬೇಡಿಕೆಯೂ ಕಡಿಮೆಯಾಗಿತ್ತು. ಜೊತೆಗೆ ಬಿಸಿಲಿನ ತಾಪಮಾನದಿಂದ ಬೆಳೆಗೂ ಹಾನಿಯಾಗಿತ್ತು.ಇದನ್ನೂ ಓದಿ: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಡಿಕೆಶಿ ಸ್ಪಷ್ಟನೆ
ಇದೀಗ ಟೊಮ್ಯಾಟೋ ಸೀಸನ್ ಆರಂಭವಾಗಿದ್ದು, ಕಳೆದ ಒಂದು ವಾರದಿಂದ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡಿದೆ. ಈ ಹಿಂದೆ ಕೆಜಿಗೆ 10 ರಿಂದ 15 ರೂಪಾಯಿ ಇದ್ದ ಟೊಮ್ಯಾಟೋ ಈಗ 30 ರಿಂದ 40 ರೂಪಾಯಿವರೆಗೆ ಮಾರಾಟವಾಗುತ್ತಿದೆ. 15 ಕೆಜಿ ತೂಕದ ಒಂದು ಬಾಕ್ಸ್ ಟೊಮ್ಯಾಟೋ ಬೆಲೆ 150-200 ರೂಪಾಯಿಯಿಂದ 500-550 ರೂಪಾಯಿಗೆ ಏರಿಕೆಯಾಗಿದೆ.
ದೆಹಲಿ, ನಾಸಿಕ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಿಂದ ಟೊಮ್ಯಾಟೋಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಇದರಿಂದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಕೋಲಾರದಲ್ಲಿ ಟೊಮ್ಯಾಟೋ ಸೀಸನ್ ಜೋರಾಗಿರುತ್ತದೆ. ಮಳೆ ಕಾರಣದಿಂದ ಹೊರ ರಾಜ್ಯಗಳಲ್ಲಿ ಸ್ಥಳೀಯ ಉತ್ಪಾದನೆ ಕಡಿಮೆಯಾಗುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಕೋಲಾರ ಮಾರುಕಟ್ಟೆಯತ್ತ ಮುಖ ಮಾಡುತ್ತಾರೆ. ಇದರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚಾಗುತ್ತದೆ.
ಈ ಹಿಂದೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಟೊಮ್ಯಾಟೋ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈಗ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳ ರೈತರೂ ಟೊಮ್ಯಾಟೋ ಬೆಳೆದು ಕೋಲಾರ ಮಾರುಕಟ್ಟೆಗೆ ತರುತ್ತಿದ್ದಾರೆ.
ಮುಂದಿನ ಎರಡು-ಮೂರು ತಿಂಗಳು ಟೊಮ್ಯಾಟೋಗೆ ಉತ್ತಮ ಬೆಲೆ ಮುಂದುವರಿಯುವ ಸಾಧ್ಯತೆ ಇದೆ. ಮುಂದಿನ ಒಂದು ತಿಂಗಳಲ್ಲಿ 15 ಕೆಜಿ ಬಾಕ್ಸ್ ಟೊಮ್ಯಾಟೋ ಬೆಲೆ ಸಾವಿರ ರೂಪಾಯಿ ಗಡಿ ದಾಟುವ ಸಾಧ್ಯತೆಯೂ ಇದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.ಇದನ್ನೂ ಓದಿ: ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಕೆ ಕಡ್ಡಾಯ – ಏನೆಲ್ಲಾ ದಾಖಲೆ ಕೊಡಬೇಕು?
ಒಟ್ಟಾರೆ, ಟೊಮ್ಯಾಟೋ ಬೆಲೆ ಏರಿಕೆಯಿಂದ ರೈತರಲ್ಲಿ ಹೊಸ ಭರವಸೆ ಮೂಡಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಈ ಬಾರಿಯ ಟೊಮ್ಯಾಟೋ ಸೀಸನ್ ರೈತರಿಗೆ ಸುಗ್ಗಿಯ ಹಬ್ಬವಾಗುವ ನಿರೀಕ್ಷೆಯಿದೆ.
