ಬೆಂಗಳೂರು: ಕಳೆದ 8 ಶತಮಾನಗಳಿಂದ ಸಾಂಪ್ರದಾಯಿಕವಾಗಿ ನೆರವೇರುತ್ತಿರೋ ವಿಶ್ವವಿಖ್ಯಾತ ಐತಿಹಾಸಿಕ ಕರಗಕ್ಕೆ (Karaga) ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯರಾತ್ರಿ 12.30ಕ್ಕೆ ಕರಗ ಮಹೋತ್ಸವಕ್ಕೆ ವಿಜೃಂಭಣೆಯಿಂದ ವಿದ್ಯುಕ್ತ ಚಾಲನೆ ದೊರೆಯಲಿದೆ. ಈ ಬಾರಿ ಕೂಡ ಕರಗದಲ್ಲಿ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಐತಿಹಾಸಿಕ ಬೆಂಗಳೂರು ಧರ್ಮರಾಯಸ್ವಾಮಿ ದ್ರೌಪದಿ ಕರಗ ಉತ್ಸವಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇಂದು ಮಧ್ಯರಾತ್ರಿ 12.30 ಕ್ಕೆ ಕರಗ ಶಕ್ತ್ಯೋತ್ಸವ ಆರಂಭವಾಗಲಿದ್ದು, ಕರಗೋತ್ಸವಕ್ಕೆ ಜಿಲ್ಲಾಡಳಿತ ಮತ್ತು ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿವೆ. ಕಳೆದೊಂದು ವಾರದಿಂದ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರುತ್ತಿದ್ದು ಧರ್ಮರಾಯಸ್ವಾಮಿ ದೇವಸ್ಥಾನ ನವ ವಧುವಿನಂತೆ ಕಂಗೊಳಿಸುತ್ತಿದೆ. ಕರಗ ಸಾಗುವ ದಾರಿಯುದ್ದಕ್ಕೂ ರಸ್ತೆಯನ್ನ ಅಗಲೀಕರಣ ಮಾಡಿ ಸ್ವಚ್ಚಗೊಳಿಸಲಾಗಿದೆ. ವಿದ್ಯುತ್ ದೀಪ, ಹೂಗಳಿಂದ ಅಲಂಕಾರ ಮಾಡಲಾಗಿದೆ.
ಈ ಬಾರಿಯೂ ಕೂಡ ಜ್ಞಾನೇಂದ್ರ ಅವರೇ 13ನೇ ಬಾರಿ ಕರಗ ಹೊರಲಿದ್ದಾರೆ. ಪೂಜೆ ಕುಣಿತ ವಾದ್ಯ ಮೇಳಗಳ ನಡುವೆ ಹೆಜ್ಜೆಹಾಕಲಿದ್ದಾರೆ. ಕರಗ ಆರಂಭಕ್ಕೂ ಮುನ್ನ ಪಾಂಡವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೊಡ್ಡ ರಥದಲ್ಲಿ ಪಾಂಡವರ ಮೆರವಣಿಗೆ, ಚಿಕ್ಕರಥದಲ್ಲಿ ಮುತ್ಯಲಮ್ಮ ದೇವಿ ರಥೋತ್ಸವ ನೆರವೇರಲಿದೆ. ಬಳಿಕ ಆರಂಭವಾಗಲಿರುವ ಕರಗ ಉತ್ಸವ ಎಲ್ಲಾ ಪೇಟೆಗಳನ್ನು ಸುತ್ತಿ ಬೆಳಗ್ಗೆ 9 ಗಂಟೆ ಒಳಗೆ ಮತ್ತೆ ಧರ್ಮರಾಯ ಸ್ವಾಮಿ ದೇವಾಲಯ ತಲುಪಲಿದೆ. ಇದನ್ನೂ ಓದಿ: ಬರಪರಿಹಾರ ಬಿಡುಗಡೆ – ಇಂದು ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಪ್ರತಿಭಟನೆ
ಈ ಬಾರಿ ಕೂಡ ಲಕ್ಷಾಂತರ ಸಂಖ್ಯೆಯ ಭಕ್ತರು ದ್ರೌಪದಿ ದೇವಿಯ ದರ್ಶನಕ್ಕೆ ಭಾಗಿಯಾಗುವ ಸಾಧ್ಯತೆ ಇದೆ. ಕಳೆದ ಬಾರಿ ಆದ ಅಹಿತಕರ ಘಟನೆ ನಡೆಯದಂತೆ ಕರಗೋತ್ಸವ ನಡೆಸಲು ಕರಗ ಉತ್ಸವ ವ್ಯವಸ್ಥಾಪಕ ಸಮಿತಿ ಕ್ರಮ ವಹಿಸಿದೆ. ಈ ಬಗ್ಗೆ ಮಾತನಾಡಿದ ಕರಗ ಉತ್ಸವ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಸತೀಶ್, ಯಾವುದೇ ರೀತಿಯ ಗೊಂದಲ ಇಲ್ಲ. ದರ್ಗಾಗೆ ಕರಗ ಹೋಗುತ್ತೆ. ಇದು ಹಲವು ವರ್ಷಗಳಿಂದ ನಡೆದುಕೊಂಡಿರುವ ಬಂದಿರುವ ಪದ್ಧತಿ. ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದಿದ್ದಾರೆ.
ಬಿಬಿಎಂಪಿ ಕರಗ ಉತ್ಸವಕ್ಕೆ ಒಂದೂವರೆ ಕೋಟಿ ಅನುದಾನ ಮೀಸಲಿಟ್ಟಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಕಣ್ಗಾವಲಿದೆ. ಡಿಸಿಪಿ ನೇತೃತ್ವದಲ್ಲಿ ದೇವಸ್ಥಾನ ಸುತ್ತಮುತ್ತ, ಕರಗ ಸಾಗುವ ಹಾದಿ ಉದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಪೆÇಲೀಸರು ಹಾಗೂ 3 ಕೆಎಸ್‍ಆರ್‍ಪಿ ತುಕಡಿ ನಿಯೋಜಿಸಲಾಗಿದೆ. ಇಂದು ಬೆಳಗ್ಗೆ 6 ರಿಂದ ನಾಳೆ ಬೆಳಗ್ಗೆ 10 ಗಂಟೆವರೆಗೆ ಮದ್ಯ ನಿಷೇಧಿಸಲಾಗಿದೆ.