– ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡ್ತಾರಾ?
– ರೀಲ್ಸ್ ಸಂಪರ್ಕದಲ್ಲಿರಲು ಸಚಿವರಿಗೆ ಮೋದಿ ಕರೆ
ನವದೆಹಲಿ: ದೇಶದಲ್ಲಿ ಸಂಚಲನ ಸೃಷ್ಠಿಸಿರುವ ಕಾಕ್ರೊಚ್ ಜನತಾ ಪಾರ್ಟಿ ಪ್ರತಿಭಟನೆ (CJP Protest) ಮುಂದುವರಿದಿದೆ. ಈ ನಡುವೆ ಮೋದಿ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳನ್ನ ಈಡೇರಿಸುವ ಬಗ್ಗೆ ಕೇಂದ್ರ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲಿದೆ. ಅದರಲ್ಲೂ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ರಾಜೀನಾಮೆ ಕೊಡ್ತಾರಾ ಇಲ್ವಾ ಅನ್ನೊ ಪ್ರಶ್ನೆಗೆ ಉತ್ತರ ಕೂಡ ಸಿಗಲಿದೆ.
ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯಿಂದ ಆರಂಭವಾದ ಝೆನ್-ಝೀಗಳ ಹೋರಾಟ ದೇಶಾದ್ಯಂತ ಸಂಚಲನ ಸೃಷ್ಠಿಸಿದೆ. ಒಂದು ಕಡೆ ದೆಹಲಿಯಲ್ಲಿ (Delhi) ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಪ್ರತಿಭಟನೆ ವ್ಯಕ್ತವಾಗುತ್ತಿದ್ದರೆ ಈ ಪ್ರತಿಭಟನೆಗೆ ಬೆಂಬಲವಾಗಿ ಬಹುತೇಕ ಎಲ್ಲ ರಾಜ್ಯಗಳಲ್ಲಿ ಹೋರಾಟ ಶುರುವಾಗಿದೆ.

ಕಾಕ್ರೋಚ್ ಪಾರ್ಟಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆಯೇ ಒನ್‌ಲೈನ್ ಅಜೆಂಡಾ ಆಗಿದೆ. ಸಚಿವರ ರಾಜೀನಾಮೆ ಹೊರತಾಗಿ ಪ್ರತಿಭಟನೆ ಕಾವು ತಣ್ಣಗಾಗಲ್ಲ ಎಂಬ ಸಂದೇಶ ರವಾನಿಸಿದೆ. ಇದರ ಜೊತೆಗೆ ಇನ್ನೂ ಎರಡು ಬೇಡಿಕೆಗಳನ್ನ ಇರಿಸಲಾಗಿದೆ.
1. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು
2. ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ
3. ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ವಾಪಸ್ ಪಡೆಯಬೇಕು. ಈ ಮೂರು ಬೇಡಿಕೆಗಳು ಪ್ರಮುಖವಾಗಿದೆ.
ಸಿಜೆಪಿಯ ಎರಡು ಬೇಡಿಕೆಗೆ ಒಪ್ಪಿಗೆ
ಕಾಕ್ರೊಚ್ ಜನತಾ ಪಾರ್ಟಿ ಇಟ್ಟಿರುವ ಮೂರು ಬೇಡಿಕೆಗಳ ಪೈಕಿ ಎರಡು ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದ ಸಭೆಯಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಹಾಕಲಾಗಿರುವ ಕೇಸ್‌ಗಳನ್ನು ಹಿಂದಕ್ಕೆ ಪಡೆಯಲು ಮತ್ತು ಆತ್ಮಹತ್ಯೆ ಮಾಡಿಕೊಂಡಿರುವ ನೀಟ್ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ಪರಿಹಾರ ಕೊಡಲು ಸಚಿವರಾದ ಜೆ.ಪಿ ನಡ್ಡಾ ಹಾಗೂ ಜೀತೇಂದ್ರ ಸಿಂಗ್ ಒಪ್ಪಿಕೊಂಡಿದ್ದಾರೆ.

ಇನ್ನೂ ಬಾಕಿ ಉಳಿದಂತೆ ಅತ್ಯಂತ ಪ್ರಮುಖ ಬೇಡಿಕೆಯಾದ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಗ್ಗೆ ಸರ್ಕಾರ ಇಂದು ತಿರ್ಮಾನ ತೆಗೆದುಕೊಳ್ಳಲಿದೆ. ನಿನ್ನೆಯ ಸಭೆಯಲ್ಲಿ ಸಚಿವ ಜೆ.ಪಿ ನಡ್ಡಾ 24 ಗಂಟೆಗಳ ಸಮಯವನ್ನ ಕೇಳಿದ್ದರು, ಇಂದು ಮಧ್ಯಾಹ್ನ 2 ಗಂಟೆಗೆ 24 ಗಂಟೆಗಳ ಸಮಯ ಮುಗಿಯಲಿದ್ದು ಅದರೊಳಗೆ ರಾಜೀನಾಮೆ ಪಡೆಯುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕಿದೆ. ಇಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು ಇಲ್ಲಿ ಸರ್ಕಾರದ ನಡೆ ಸ್ಪಷ್ಟವಾಗಲಿದೆ.
ಲೀಕಾಸುರರಿಗೆ 10 ವರ್ಷ ಜೈಲು, 10 ಕೋಟಿ ದಂಡ
ನೀಟ್ ಲೀಕಾಸುರರ ವಿರುದ್ಧ ಕೇಂದ್ರ ಸರ್ಕಾರ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ವಿದ್ಯಾರ್ಥಿಗಳ ಬದುಕಿನ ಜೊತೆ ಚೆಲ್ಲಾಟ ಆಡಿದವರಿಗೆ ಶಾಕ್ ಕೊಟ್ಟಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರಿಗೆ 10 ವರ್ಷ ಜೈಲು ಫಿಕ್ಸ್ ಆಗಲಿದೆ. ಪ್ರಶ್ನೆಪತ್ರಿಕೆ ಲೀಕಾಸುರರಿಗೆ 10 ಕೋಟಿವರೆಗೂ ದಂಡ ವಿಧಿಸಲಾಗುತ್ತದೆ.
ಇನ್ನು, ಪೇಪರ್ ಲೀಕ್ ಕೇಸ್‌ಗಳನ್ನು ಫಾಸ್ಟ್‌ಟ್ರ್ಯಾಕ್ ಕೋರ್ಟ್‌ಗಳಲ್ಲಿ ವಿಚಾರಣೆ ನಡೆಸಲಿದ್ದು, 3 ತಿಂಗಳಲ್ಲಿ ಕೇಸ್ ಇತ್ಯರ್ಥಕ್ಕೆ ತೀರ್ಮಾನಿಸಲಾಗಿದೆ. ಆ ಮೂಲಕ ಪ್ರಶ್ನೆಪತ್ರಿಕೆ ಲೀಕಾಸುರರ ವಿರುದ್ಧ ಕಠಿಣಾತಿಕಠಿಣ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಸೂದೆ ಮಂಡಿಸಲಿದ್ದು, ಸಂಸತ್‌ನಲ್ಲಿ ಮತಕ್ಕೆ ಹಾಕುವ ಸಾಧ್ಯತೆಯಿದೆ.

ಸರ್ಕಾರದ ಒಂದು ನಿರ್ಧಾರ
ಇನ್ನು ಪ್ರಧಾನ್ ರಾಜೀನಾಮೆ ಸಂಬಂಧ ತೆಗೆದುಕೊಳ್ಳಲಿರುವ ಒಂದು ನಿರ್ಧಾರ ತಿಂಗಳುಗಳಿಂದ ನಡೆಯುತ್ತಿರುವ ಪ್ರತಿಭಟನೆಯ ಭವಿಷ್ಯ ನಿರ್ಧರಿಸಲಿದೆ. ರಾಜೀನಾಮೆ ತನಕ ಪ್ರತಿಭಟನೆ ಹಿಂಪಡೆಯುವ ಮಾತೇ ಇಲ್ಲ ಎಂದು ಈಗಾಗಲೇ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಸ್ಪಷ್ಟಪಡಿಸಿದ್ದಾರೆ.
ರೀಲ್ಸ್ ಸಂಪರ್ಕದಲ್ಲಿರಿ
ಇನ್ನೂ, ಕ್ಯಾಬಿನೆಟ್‌ನಲ್ಲಿ ಸಂಪುಟ ಸಚಿವರಿಗೆ ನರೇಂದ್ರ ಮಹತ್ವದ ಸಂದೇಶವೊಂದನ್ನು ನೀಡಿದ್ದಾರೆ. ʻಝೆನ್ ಝೀʼ ಜನಾಂಗವನ್ನು ಸೆಳೆಯಲು ಬಿಗ್ ಪ್ಲ್ಯಾನ್ ಮಾಡಿದ್ದು, ಅದರಂತೆ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರಲು ಸೂಚಿಸಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಯುವ ಜನಾಂಗವನ್ನ ಗಮನಿಸುತ್ತಿರಿ, ಯುವ ಸಮುದಾಯದ ಜೊತೆ ಸಂಪರ್ಕದಲ್ಲಿರಲು ತಿಳಿಸಿದ್ದಾರೆ.
