– ಸೆ.15 ರಂದು ಯೋಜನೆಗೆ ಚಾಲನೆ ನೀಡಲು ನಿರ್ಧಾರ
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ (CM Vijay) ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟುವ ಮಕ್ಕಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
ನವಜಾತ ಶಿಶುಗಳಿಗೆ ‘ಸೋದರಮಾವನ ಚಿನ್ನದ ಉಂಗುರ’ ಯೋಜನೆಯಡಿ ಚಿನ್ನದ ಉಂಗುರಗಳನ್ನು (Gold Rings) ಖರೀದಿಸಲು ಇಬ್ಬರು ಆಭರಣ ವ್ಯಾಪಾರಿಗಳಿಗೆ ಕೆಲಸದ ಆದೇಶ ನೀಡಿದ್ದಾರೆ. ಸುಮಾರು 1.28 ಲಕ್ಷ ಚಿನ್ನದ ಉಂಗುರಗಳನ್ನ ಸಿದ್ಧಪಡಿಸಲು ಆದೇಶ ಹೊರಡಿಸಿದ್ದಾರೆ.

ಈ ಉಂಗುರುಗಳ ಒಟ್ಟು ಬೆಲೆ ಸುಮಾರು 220 ಕೋಟಿ ರೂ. ಆಗಲಿದೆ. ಈ ಯೋಜನೆಗೆ ಮಾಜಿ ಸಿಎಂ ಅಣ್ಣಾದೊರೈ ಅವರ ಜನ್ಮದಿನವಾದ ಸೆ.15 ರಂದು ಚಾಲನೆ ನೀಡಲು ನಿರ್ಧರಿಸಲಾಗಿದೆ.
ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಫಲಾನುಭವಿಗಳಿಗೆ ಅಗತ್ಯವಿರುವ 1,28,499 ಚಿನ್ನದ ಉಂಗುರಗಳನ್ನು ಪೂರೈಸಲು ತಮಿಳುನಾಡು ವೈದ್ಯಕೀಯ ಸೇವೆಗಳ ನಿಗಮವು ಜಾಯ್ ಅಲುಕ್ಕಾಸ್ ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್‌ಗೆ 70:30 ಅನುಪಾತದಲ್ಲಿ ಕೆಲಸದ ಆದೇಶ ನೀಡಿದೆ. ಒಂದು ಗ್ರಾಂ ತೂಕದ 4,41,667 ಚಿನ್ನದ ಉಂಗುರಗಳನ್ನು ಪೂರೈಸಲು ಸರ್ಕಾರ ಟೆಂಡರ್ ಕರೆದಿತ್ತು. 11 ಕಂಪನಿಗಳು ಭಾಗವಹಿಸಿದ್ದರು.
ಇದರಲ್ಲಿ ಜಾಯ್ ಅಲುಕ್ಕಾಸ್, 1 ಗ್ರಾಂ ಚಿನ್ನದ ಬೆಲೆಯನ್ನು ಹೊರತುಪಡಿಸಿ, ಸಂಸ್ಕರಣಾ ಶುಲ್ಕ, ವಿಮೆ, ಸಾರಿಗೆ ಹಾಗೂ ಬಿಐಎಸ್ ಸ್ಟ್ಯಾಂಪಿಂಗ್ ಸೇರಿದಂತೆ ಎಲ್ಲ ಹೆಚ್ಚುವರಿ ಶುಲ್ಕಗಳನ್ನು ಒಳಗೊಂಡಂತೆ ಬರೀ 1 ಪೈಸೆ ಬಿಡ್ ಸಲ್ಲಿಸಿತ್ತು. ತಮಿಳುನಾಡು ಬಹಿರಂಗಪಡಿಸದಿರುವಿಕೆ ಒಪ್ಪಂದ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಕಲ್ಯಾಣ್ ಜ್ಯುವೆಲ್ಲರ್ಸ್ ಕೂಡ ಕಡಿಮೆ ಬಿಡ್ ಸಲ್ಲಿಸಿತ್ತು.

