ಕೋಲ್ಕತ್ತಾ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಶ್ಚಿಮ ಬಂಗಾಳದ (West Bengal) ಫಾಲ್ಟಾ ವಿಧಾನಸಭಾ ಕ್ಷೇತ್ರದ ಮರುಚುನಾವಣೆಯಿಂದ ತೃಣಮೂಲ ಕಾಂಗ್ರೆಸ್ (TMC) ಅಭ್ಯರ್ಥಿ ಜಹಾಂಗೀರ್ ಖಾನ್(Jahangir Khan) ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಮತದಾನದ ಪ್ರಚಾರ ಕಾರ್ಯ ಮುಕ್ತಾಯಗೊಳ್ಳಲು ಕೆಲವೇ ಗಂಟೆಗಳ ಮೊದಲು ಅವರು ಈ ಹಠಾತ್ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರು ಫಾಲ್ಟಾ (Falta) ಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಂತಿ ಮತ್ತು ಪ್ರಗತಿಗಾಗಿ ತಾವು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಜಹಾಂಗೀರ್ ಖಾನ್ ತಿಳಿಸಿದ್ದಾರೆ.
ಏಪ್ರಿಲ್ 29 ರಂದು ನಡೆದ ಎರಡನೇ ಹಂತದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಫಾಲ್ಟಾದಲ್ಲಿ ಗಂಭೀರ ಚುನಾವಣಾ ಅಕ್ರಮಗಳು ನಡೆದ ಕಾರಣ ಭಾರತೀಯ ಚುನಾವಣಾ ಆಯೋಗವು ಫಾಲ್ಟಾ ಕ್ಷೇತ್ರದಲ್ಲಿ ಮೇ 21 ರಂದು ಮರುಚುನಾವಣೆ ನಡೆಸಲು ಆದೇಶಿಸಿದೆ. ಇದನ್ನೂ ಓದಿ: ಗಂಟೆಗಟ್ಟಲೇ ಸಿಸಿಟಿವಿ ಬಂದ್, ಬೂತ್‌ನಿಂದಲೇ ಪ್ರತಿಪಕ್ಷಗಳ ಏಜೆಂಟ್‌ಗಳು ಹೊರಕ್ಕೆ: ಬೆಚ್ಚಿ ಬೀಳಿಸುವಂತಿದೆ ಫಾಲ್ಟಾ ಅಕ್ರಮ
South 24 Parganas, West Bengal: On withdrawing his nomination from the Falta Assembly re-poll, TMC candidate Jahangir Khan says, “…I have taken this decision for the people of Falta. I have not indulged in any kind of malpractice during voting. I do not know who did it. I was… pic.twitter.com/crllW1I6oq
— IANS (@ians_india) May 19, 2026
ಜಹಾಂಗೀರ್ ಖಾನ್ ವಿರುದ್ಧ ಚುನಾವಣಾ ಅಕ್ರಮಗಳು, ಮತದಾರರ ಹೆದರಿಕೆ, ಭೂ ಕಬಳಿಕೆ ಮತ್ತು ಅಕ್ರಮ ಸಾಗಣೆಯ (Smuggling) ಗಂಭೀರ ಆರೋಪಗಳು ಕೇಳಿಬಂದಿವೆ.
ಏಪ್ರಿಲ್ 29 ರಂದು ನಡೆದ ಮತದಾನದ ವೇಳೆ ಫಾಲ್ಟಾ ಕ್ಷೇತ್ರದಲ್ಲಿ ಇವಿಎಂ ಯಂತ್ರಗಳ ಬಟನ್‌ಗಳಿಗೆ ಕಪ್ಪು ಟೇಪ್ ಅಂಟಿಸಿ ಅಕ್ರಮ ಎಸಗಿದ ಆರೋಪ ಇವರ ಮೇಲಿದೆ. ಮತದಾರರಿಗೆ ಬೆದರಿಕೆ ಹಾಕಿ, ಅವರ ಪರವಾಗಿ ಅನಧಿಕೃತ ವ್ಯಕ್ತಿಗಳಿಂದ ಕಳ್ಳಮತದಾನ ಮಾಡಿಸಿದ ಆರೋಪದ ಹಿನ್ನೆಲೆಯಲ್ಲಿ ಇಡೀ ಕ್ಷೇತ್ರದಲ್ಲಿ ಮರುಚುನಾವಣೆಗೆ ಆದೇಶಿಸಲಾಗಿತ್ತು.
ಚುನಾವಣಾ ಫಲಿತಾಂಶದ ನಂತರ ಇವರ ವಿರುದ್ಧ ಸಾಲು ಸಾಲು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಇತ್ತೀಚೆಗಷ್ಟೇ ಕೊಲೆ ಯತ್ನ ಹಾಗೂ ಸುಲಿಗೆ (Extortion) ದಂದೆಯ ಆರೋಪದ ಮೇಲೆ ಇವರ ಆಪ್ತ ಸಹಾಯಕ ಹಾಗೂ ಭಾವಮೈದುನ ಸೈದುಲ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಫಾಲ್ಟಾ ಪ್ರದೇಶದಲ್ಲಿ ತಮ್ಮ ಪ್ರಭಾವ ಬಳಸಿ ಅಕ್ರಮವಾಗಿ ಭೂಮಿ ವಶಪಡಿಸಿಕೊಂಡಿರುವುದು ಮತ್ತು ಅಕ್ರಮ ಸಾಗಣೆ ಜಾಲದಲ್ಲಿ ಗುರುತಿಸಿಕೊಂಡಿರುವ ಆರೋಪಗಳನ್ನು ಎದುರಿಸುತ್ತಿದ್ದಾರೆ.

