ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಟಿಪ್ಪು ಜಯಂತಿಯನ್ನು ಆಚರಿಸುತ್ತರುವುದು ಕೇವಲ ಮುಸ್ಲಿಂ ಮತ ಬ್ಯಾಂಕ್ ಭದ್ರಪಡಿಸಲು ಮಾತ್ರ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
Advertisement
ನವೆಂಬರ್ 10 ರಂದು ಟಿಪ್ಪು ಜಯಂತಿಯನ್ನು ಆಚರಣೆ ಮಾಡುವುದಕ್ಕೆ ನಮ್ಮ ವಿರೋಧವಿದೆ. ಸ್ವಾರ್ಥ ರಾಜಕಾರಣಕ್ಕಾಗಿ ಹಾಗೂ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಇಂತಹ ಆಚರಣೆ ಮಾಡಲಾಗುತ್ತಿದೆ. ಟಿಪ್ಪು ತನ್ನ ಅವಧಿಯಲ್ಲಿ ಹಲವರನ್ನು ಮತಾಂತರಗೊಳಿಸಿದ್ದು, ಇದಕ್ಕೆ ಟಿಪ್ಪು ಮಗ ಬರೆದಿರುವ ಪತ್ರಗಳೇ ಸಾಕ್ಷಿಯಾಗಿವೆ. ಅಲ್ಲದೇ ಟಿಪ್ಪು ಆಡಳಿತ ಅವಧಿಯಲ್ಲಿ ಪರ್ಶಿಯನ್ ಭಾಷೆಯನ್ನು ಜಾರಿಗೆ ತಂದಿರುವ ನಾಡದ್ರೋಹಿ. ಇದನ್ನು ಜನತೆಗೆ ತಿಳಿಸಲು ಮುಂದಿನ ದಿನಗಳಲ್ಲಿ ಶ್ರೀರಾಮ ಸೇನೆ ಒಂದು ಪುಸ್ತಕವನ್ನು ಹೊರತರುತ್ತದೆ ಎಂದು ಹೇಳಿದರು.
Advertisement
ಮುಂದಿನ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಆಚರಣೆ ರದ್ದು ಮಾಡಬೇಕು. ಅಲ್ಲದೇ ಟಿಪ್ಪುವಿನ ಹೆಸರಿನಲ್ಲಿರುವ ಬೋರ್ಡ್ ಹಾಗೂ ಸರ್ಕಲ್‍ಗಳನ್ನೂ ತೆಗೆದು ಹಾಕಬೇಕೆಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಗೌರಿ ಹತ್ಯೆ ಪ್ರಕರಣದ ಆರೋಪಿಗಳ ಗುರುತು ಪತ್ತೆಗೆ ಎಸ್‍ಐಟಿ ಅಧಿಕಾರಿಗಳು ಬಿಡುಗಡೆಗೊಳಿಸಿರುವ ಶಂಕಿತ ವ್ಯಕ್ತಿಗಳ ಹಣೆಯಲ್ಲಿ ಕುಂಕುಮ ಇರುವುದರ ಕುರಿತು ಕಿಡಿಕಾರಿದ ಅವರು, ತಲೆಯ ಮೇಲೆ ಟೋಪಿ ಹಾಕಿರುವವರ ಭಾವ ಚಿತ್ರ ಬಿಡುಗಡೆ ಮಾಡಿ ಎಂದು ಸವಾಲ್ ಹಾಕಿದರು. ಎಸ್‍ಐಟಿ ಯ ಈ ನಡೆ ಹಿಂದೂಗಳಿಗೆ ಮಾಡಿದ ಅವಮಾನವಾಗಿದ್ದು ತಕ್ಷಣ ಚಿತ್ರಗಳನ್ನು ಹಿಂಪಡೆದು, ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
Advertisement
Advertisement
ತಮ್ಮ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ ಅವರು, ಆರ್‍ಎಸ್‍ಎಸ್ ಹಾಗೂ ಬಿಜೆಪಿ ಮುಖಂಡರಿಗೆ ಐದು ತಿಂಗಳ ಹಿಂದೆಯೇ ಪತ್ರವನ್ನು ಬರೆದಿದ್ದೇನೆ, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಿಜೆಪಿಯವರು ನನಗೆ ಟಿಕೆಟ್ ಕೊಟ್ಟರು, ಕೊಡದಿದ್ದರು ರಾಜಕೀಯ ಪ್ರವೇಶ ಮಾಡುವುದು ಖಚಿತ. ಶ್ರೀರಾಮ ಸೇನೆಯ ಸಂಘಟನೆ ಬಲಪಡಿಸುವುದು ಹಾಗೂ ಹಿಂದೂತ್ವಕ್ಕೆ ಬಲ ತುಂಬುದು ನನ್ನ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಕಲಬುರ್ಗಿ ಆಂದೋಲ್ ಗ್ರಾಮದಲ್ಲಿ ನಡೆದ ಗಲಾಟೆ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತ ಬಾಬು ಲಾಖನೆ ಮೇಲೆ ಹಲ್ಲೆಯಾಗಿದೆ. ಇದರಲ್ಲಿ ಅನಾವಶ್ಯಕವಾಗಿ ಸಿದ್ದಲಿಂಗ ಸ್ವಾಮೀಜಿ ಅವರ ಹೆಸರು ತಳಕು ಹಾಕಲಾಗುತ್ತಿದೆ. ಒಂದು ವೇಳೆ ಸಿದ್ದಲಿಂಗ ಸ್ವಾಮೀಜಿ ಅವರ ಮೇಲೆ ಕೇಸ್ ದಾಖಲಿಸಿ, ಬಂಧಿಸಿದರೆ ಅಕ್ಟೋಬರ್ 23ರಂದು ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುತ್ತೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.