- ಸೌದಿ ದೊರೆ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಭೇಟಿಯಾದ ಝೆಲೆನ್ಸ್ಕಿ
ಮಾಸ್ಕೋ: ರಷ್ಯಾ (Russia) ವಿರುದ್ಧ ಯುದ್ಧ ಮಾಡುತ್ತಿರುವ ಉಕ್ರೇನ್‍ಗೆ (Ukraine) ಅಮೆರಿಕ ಮಿಲಿಟರಿ ನೆರವು ಸ್ಥಗಿತಗೊಳಿಸಿದೆ. ಈ ಹೊತ್ತಲ್ಲೇ ಉಕ್ರೇನ್‍ಗೆ ರಷ್ಯಾ ಶಾಕ್ ನೀಡಿದೆ. ಉಕ್ರೇನ್‍ನ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಟಾರ್ಗೆಟ್ ಮಾಡಿಕೊಂಡು ರಷ್ಯಾ ವೈಮಾನಿಕ ದಾಳಿ ನಡೆಸಿದೆ.
ಕೀವ್ ಸುತ್ತಮುತ್ತ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ರಷ್ಯಾ ಹಾರಿಸಿದೆ. ಇದಕ್ಕೆ ಉಕ್ರೇನ್ ಕೂಡ ರಷ್ಯಾ ಮೇಲೆ ಪ್ರತಿದಾಳಿಗೆ ಯತ್ನಿಸಿದೆ. ಮಾಸ್ಕೋ ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದೆ. ಇದರಿಂದ ಮಾಸ್ಕೋದ ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ಕನಿಷ್ಠ ಮೂವರು ಸಾವನ್ನಪ್ಪಿದ್ದು, 17 ಮಂದಿಗಾಯಗೊಂಡಿದ್ದಾರೆ. ಮಾಸ್ಕೋದಲ್ಲಿ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. 91 ಡ್ರೋನ್ ಹೊಡೆದುರುಳಿಸಿದ್ದೇವೆ ಎಂದು ರಷ್ಯಾ ಹೇಳಿಕೊಂಡಿದೆ.
ಈ ಬೆಳವಣಿಗೆಗಳ ನಡುವೆ, ಶಾಂತಿ ಪ್ರಯತ್ನಗಳು ನಡೆಯುತ್ತಿವೆ. ಉಕ್ರೇನ್ ಶಾಂತಿ ಒಪ್ಪಂದಕ್ಕಾಗಿ ಭೂಮಿಯನ್ನು ಬಿಡಬೇಕಾಗುತ್ತದೆ ಎಂದು ಅಮೆರಿಕ ಹೇಳಿದೆ. ಈ ಮೂಲಕ ರಷ್ಯಾ ಪರವೇ ನಿಲ್ಲುವ ಸೂಚನೆಯನ್ನು ಅಮೆರಿಕ ನೀಡಿದೆ. ಇನ್ನೂ ಟ್ರಂಪ್ ಕ್ರಮಗಳಿಂದ ನಾವೇನು ಉಬ್ಬಿ ಹೋಗಿಲ್ಲ ಎಂದು ರಷ್ಯಾ ಹೇಳಿಕೊಂಡಿದೆ.
ಇದರ ನಡುವೆ ಅಮೆರಿಕ ಜೊತೆಗಿನ ಸಂಬಂಧ ಸರಿಪಡಿಸಲು ಮತ್ತು ರಷ್ಯಾದೊಂದಿಗಿನ ನಡೆಯುತ್ತಿರುವ ಯುದ್ಧಕ್ಕೆ ಅನುಕೂಲಕರ ಪರಿಹಾರವನ್ನು ಪಡೆಯಲು, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಸೋಮವಾರ (ಮಾರ್ಚ್ 10) ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿಯಾಗಿದ್ದರು.
ಯುದ್ಧವನ್ನು ಕೊನೆಗೊಳಿಸಲು ಮತ್ತು ಶಾಶ್ವತ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಷರತ್ತುಗಳ ಬಗ್ಗೆ ಅವರು ಚರ್ಚಿಸಿದ್ದಾರೆ. ಇನ್ನೂ ಚರ್ಚೆಯ ಸಮಯದಲ್ಲಿ ಕೈದಿಗಳ ಬಿಡುಗಡೆ ಬಗ್ಗೆ ಝೆಲೆನ್ಸ್ಕಿ ಒತ್ತಿ ಹೇಳಿದ್ದಾರೆ.