ಲಕ್ನೋ: ಕಾಂಗ್ರೆಸ್ ಆಡಳಿತದಲ್ಲಿ 70 ವರ್ಷ ಏನೂ ಮಾಡಿಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 5 ವರ್ಷದಲ್ಲಿ ಏನೂ ಮಾಡಿದ್ದಾರೆ ಅದರ ಬಗ್ಗೆ ಹೇಳಲಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಉತ್ತರ ಪ್ರದೇಶದಲ್ಲಿ ಮೂರು ದಿನಗಳ ಕಾಲ ಗಂಗಾ ಯಾತ್ರೆಯಲ್ಲಿ ತೊಡಗಿರುವ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಕಳೆದ 5 ವರ್ಷಗಳಿಂದ ಮೋದಿ ತಮ್ಮ ಭಾಷಣಗಳಲ್ಲಿ 70 ವರ್ಷದ ಆಡಳಿತದಲ್ಲಿ ಏನೂ ಮಾಡಿಲ್ಲ ಅಂತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಅವರ 70 ವರ್ಷದ ಹೇಳಿಕೆಗೂ ಗಡುವ ದಿನಾಂಕ(Expiry Date) ಇದೆ ಎಂದು ಟಾಂಗ್ ಕೊಟ್ಟಿದ್ದಾರೆ.
ಗಂಗಾ ನದಿಯಲ್ಲಿ ದೋಣಿ ಯಾತ್ರೆ ಮೂಲಕ ಪ್ರಚಾರ ಮುಂದುವರಿಸಿರುವ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ ಮತ ಬೇಟೆ ನಡೆಸಿದರು. ಬಡೋಯಿ ಜಿಲ್ಲೆಯ ಸೀತಾಮಡಿ ಮಂದಿರ ಹಾಗೂ ಮಿರ್ಜಾಪುರದ ವಿಂಧ್ಯವಾಸಿನಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ದೇವಸ್ಥಾನದಲ್ಲಿದ್ದ ಕೆಲವು ಭಕ್ತಾಧಿಗಳು “ಹರ ಹರ ಮೋದಿ” ಎಂದು ಜೈಕಾರ ಹಾಕಿದ್ದಾರೆ. ಅಷ್ಟೇ ಅಲ್ಲದೆ ಆಗ ಪ್ರತ್ಯತ್ತರವಾಗಿ ಕಾಂಗ್ರೆಸ್ ಬೆಂಬಲಿಗರು “ರಾಹುಲ್ ರಾಹುಲ್” ಎಂದು ಘೋಷಣೆ ಕೂಗಿದ್ದಾರೆ. ಈ ನಡುವೆ ಪ್ರಿಯಾಂಕಾ ಮಾತ್ರ ಪ್ರಾರ್ಥನೆ ಸಲ್ಲಿಸಿ ತಮ್ಮ ಪ್ರಚಾರ ಕಾರ್ಯದಲ್ಲಿ ತೊಡಗಿದರು.
ಪ್ರಿಯಾಂಕಾ ಅವರು ಗಂಗಾ ನದಿಯಲ್ಲಿ ಬೋಟ್ ಪ್ರಯಾಣ ಮಾಡುವ ಮೂಲಕ ಚೂನರ್ ಪ್ರದೇಶ ತಲುಪಿ, ಅಲ್ಲಿ ರಾತ್ರಿ ರೋಡ್ ಶೋ ಮಾಡಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ. ಈ ವೇಳೆ ಬೀದಿಯಲ್ಲಿ ಇರುವಂತಹ ಹಸುಗಳಿಗೆ ಗೋಶಾಲೆಯನ್ನು ತೆರೆಯಬೇಕು ಅಂತ ಕಾಂಗ್ರೆಸ್ ಸರ್ಕಾರ ಯೋಜನೆ ರೂಪಿಸಿದೆ. ಈಗಾಗಲೇ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿರುವ ನಮ್ಮ ಸರ್ಕಾರ ರೈತರ ಸಾಲ ಮನ್ನಾ ಮಾಡಿ ಕೃಷಿಕರ ಕಷ್ಟಕ್ಕೆ ಸ್ಪಂದಿಸಿದೆ ಎಂದು ತಿಳಿಸಿದರು.