ಕೊಪ್ಪಳ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮ ಸಮೀಪದ ನವಬೃಂದಾವನ ಗಡ್ಡೆಯಲ್ಲಿ ಮೂಲ ಬೃಂದಾವನಕ್ಕೆ ಸಂಬಂಧಪಟ್ಟಂತೆ ಎರಡು ಮಠಗಳ ನಡುವೆ ಮತ್ತೊಂದು ವಿವಾದ ಉಂಟಾಗಿದೆ. ಈ ಬಗ್ಗೆ ಭಕ್ತರಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ.
ವಿಜಯನಗರ ಕಾಲದ ಪೂರ್ವ ಇತಿಹಾಸವನ್ನು ಹೊಂದಿರುವ ನವಬೃಂದಾವನ ಗಡ್ಡೆಯಲ್ಲಿ ಶ್ರೇಷ್ಠ ಯತಿಗಳ ಬೃಂದಾವನಗಳನ್ನು ನಿರ್ಮಾಣ ಮಾಡಲಾಗಿದೆ. ಹಂತ-ಹಂತವಾಗಿ ಕಾಲಘಟ್ಟಗಳಿಗೆ ಅನುಗುಣವಾಗಿ ಆಗಮಿಸಿದ ಒಟ್ಟು 9 ಯತಿಗಳ ಬೃಂದಾವನಗಳನ್ನು ತುಂಗಭದ್ರಾ ನಡುಗಡ್ಡೆಯಲ್ಲಿ ನಿರ್ಮಾಣಗೊಂಡಿರುವುದನ್ನು ಇಲ್ಲಿ ಕಾಣಬಹುದು. ಇದನ್ನೂ ಓದಿ: ಗಲ್ಫ್ ರಾಷ್ಟ್ರಗಳು ಪ್ರವಾದಿ ವಿವಾದದಲ್ಲಿ ಭಾರತದ ನಿಲುವನ್ನು ಅರ್ಥಮಾಡಿಕೊಂಡಿವೆ: ವಿದೇಶಾಂಗ ಕಾರ್ಯದರ್ಶಿ
Advertisement
Advertisement
ಇಂತಹ ಇತಿಹಾಸ ಇರುವ ನವಬೃಂದಾವನ ಗಡ್ಡೆಯ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಸುಮಾರು ವರ್ಷಗಳಿಂದ ರಾಯರಮಠ ಮತ್ತು ಉತ್ತರಾಧಿಮಠಗಳ ನಡುವೆ ಗಲಾಟೆ ನಡೆಯುತ್ತಿದೆ. ಈ ವಿವಾದ ಇನ್ನೂ ಇತ್ಯರ್ಥವನ್ನು ಪಡೆದುಕೊಂಡಿಲ್ಲ. ಇದರ ನಡುವೆಯೇ ಈಗ ಮತ್ತೊಂದು ವಿವಾದ ಎರಡು ಮಠಗಳ ನಡುವೆ ಇದ್ದು, ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ.
Advertisement
ನವಬೃಂದಾವನ ಗಡ್ಡೆಯಲ್ಲಿ ಇರುವ ಒಂದೇ ಬೃಂದಾವನಕ್ಕೆ ಇಬ್ಬರು ಯತಿಗಳ ಹೆಸರುಗಳನ್ನು ಕರೆಯುವ ಮೂಲಕ ವಿವಾದ ಹುಟ್ಟು ಹಾಕಲಾಗಿದೆ. ಉತ್ತರಾಧಿ ಮಠದವರು ರಘುವರ್ಯ ತೀರ್ಥರ ಬೃಂದಾವನ ಎಂದು ಕರೆದರೆ, ಅದೇ ಬೃಂದಾವನಕ್ಕೆ ರಾಯರ ಮಠದವರು ಜಯತೀರ್ಥರ ಬೃಂದಾವನ ಎಂದು ಕರೆಯುತ್ತಿದ್ದಾರೆ. ಇದು ಭಕ್ತರಲ್ಲಿ ಸಾಕಷ್ಟು ಗೊಂದಲವನ್ನು ಉಂಟುಮಾಡಿದೆ.
Advertisement
ಪೂಜೆಯಲ್ಲಿ ಗೊಂದಲ
ನವಬೃಂದಾವನ ಗಡ್ಡೆಯಲ್ಲಿ ಇರುವ 9 ಯತಿಗಳ ಬೃಂದಾವನಗಳಿಗೂ ಅವರ ಬೃಂದಾವನ ಸ್ಥಾನಗೊಂಡಿರುವ ಸಮಯ, ನಕ್ಷತ್ರಕ್ಕೆ ಅನುಗುಣವಾಗಿ ಆರಾಧನೆ ಮಹೋತ್ಸವವನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದೇ ರೀತಿ ರಘುವರ್ಯತೀರ್ಥರ, ಜಯತೀರ್ಥರ ಆರಾಧನೆ ಮಹೋತ್ಸವವನ್ನು ನಡೆಸಲಾಗುತ್ತಿದೆ. ಕಳೆದ ಜೂನ್ 16ರಿಂದ ಮೂರು ದಿನಗಳ ಕಾಲ ಉತ್ತರಾಧಿ ಮಠದ ನೇತೃತ್ವದಲ್ಲಿ ರಘುವರ್ಯ ತೀರ್ಥರ ಆರಾಧನೆ ಮಹೋತ್ಸವವನ್ನು ಹಮ್ಮಿಕೊಂಡು ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಆರಾಧನೆ ಮಹೋತ್ಸವ ಮುಗಿದ ಮಾರನೇ ದಿನ ಅಂದರೆ ಜೂನ್ 19 ರಂದು ಅದೇ ಬೃಂದಾವನಕ್ಕೆ ರಾಯರ ಮಠದವರು ಜಯತೀರ್ಥರ ಅಷ್ಟೋತ್ತರ ಪಾರಾಯಣ ಎಂದು ವಿಶೇಷ ಧಾರ್ಮಿಕ ಪೂಜೆಗಳನ್ನು ಸಲ್ಲಿಸಿ, ಸಾಮೂಹಿಕ ಭಜನೆ ಕಾರ್ಯಕ್ರಮಗಳನ್ನು ನಡೆಸಿದರು. ಅಷ್ಟೇ ಅಲ್ಲದೆ ಮುಂದಿನ ತಿಂಗಳು ರಾಯರ ಮಠದಿಂದ ಜಯತೀರ್ಥರ ಆರಾಧನೆ ಮಹೋತ್ಸವವನ್ನು ನವ ಬೃಂದಾವನ ಗಡ್ಡೆಯಲ್ಲಿ ನಡೆಸಲು ಅದ್ದೂರಿ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಒಂದೇ ಬೃಂದಾವನಕ್ಕೆ ಇಬ್ಬರು ಯತಿಗಳ ಹೆಸರಲ್ಲಿ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಎರಡು ಮಠಗಳ ಭಕ್ತರ ನಡುವೆ ಗೊಂದಲಗಳು ಉಂಟಾಗುತ್ತಿವೆ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಮೂಲ ಬೃಂದಾವನಕ್ಕೆ ಸಂಬಂಧಪಟ್ಟಂತೆ ಎರಡು ಮಠಗಳ ಭಕ್ತರು ಫೇಸ್‍ಬುಕ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯನ್ನು ನಡೆಸುತ್ತಿದ್ದಾರೆ. ರಾಯರಮಠದವರು ಜಯತೀರ್ಥರ ಮೂಲ ಬೃಂದಾವನ ಆನೆಗೊಂದಿಯಲ್ಲಿ ಇದೆ ಎಂದು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಕೆಲವರು ಪರವಾಗಿ ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ಜಯತೀರ್ಥರ ಬೃಂದಾನವ ಇರುವುದು ಆನೆಗೊಂದಿಯಲ್ಲಿ ಅಲ್ಲ, ಕಲಬುರಗಿಯ ಮಳಖೇಡದಲ್ಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧಗಳು ಚರ್ಚೆಯಾಗುತ್ತಿದ್ದು, ಎರಡು ಮಠಗಳ ಭಕ್ತರು ಮುಸುಕಿನ ಗುದ್ದಾಟವನ್ನು ನಡೆಸಿದ್ದಾರೆ.
ರಾಯರ ಯತಿಗಳ ಬೃಂದಾನಗಳಿವೆ
ಇತಿಹಾಸವನ್ನು ಹೊಂದಿರುವ ನವಬೃಂದಾವನ ಗಡ್ಡೆಯಲ್ಲಿ ವಿಜಯನಗರ ಕಾಲದ ಕೃಷ್ಣದೇವರಾಯ ಅರಸರ ಗುರುಗಳು ಆಗಿರುವ ವ್ಯಾಸರಾಜ ತೀರ್ಥರು ಬೃಂದಾವನ ಹಾಗೂ ಕಾಲಘಟ್ಟಗಳಿಗೆ ಅನುಗುಣವಾಗಿ ಆಗಮಿಸಿದ ಪದ್ಮನಾಭ ತೀರ್ಥರು, ಕವೀಂದ್ರ ತೀರ್ಥರು, ವಾಗೀಶ್ ತೀರ್ಥರು, ಶ್ರೀನಿವಾಸ್ ತೀರ್ಥರು, ರಾಮ ತೀರ್ಥರು, ಸುಧೀಂದ್ರ ತೀರ್ಥರು ಮತ್ತು ಗೋವಿಂದ್ ಒಡೆಯರ ಮೂಲ ಬೃಂದಾವನಗಳನ್ನು ಇಲ್ಲಿ ಕಾಣಬಹುದು. ಆದರೆ ಒಂದೇ ಬೃಂದಾವನಕ್ಕೆ ರಘುವರ್ಯ ತೀರ್ಥರು ಮತ್ತು ಜಯತೀರ್ಥರ ಬೃಂದಾವನ ಇರುವುದು ಈಗ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಮಹಿಳಾ ಸಹೋದ್ಯೋಗಿ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಇನ್ಸ್‌ಪೆಕ್ಟರ್
ಮಳಖೇಡದಲ್ಲಿ ಎಂದು ವಾದ
ರಾಯರ ಮಠದವರು ಜಯತೀರ್ಥರು ಬೃಂದಾವನ ಆನೆಗೊಂದಿಯಲ್ಲಿ ನವಬೃಂದಾವನ ಗಡ್ಡೆಯಲ್ಲಿ ಇದೆ ಎಂದು ವಾದ ಮಾಡುತ್ತಿದ್ದಾರೆ. ಅದನ್ನು ಒಪ್ಪದ ಉತ್ತರಾಧಿಮಠದವರು ಜಯತೀರ್ಥರ ಮೂಲ ಬೃಂದಾವನ ಕಲಬುರಗಿಯ ಮಳಖೇಡದಲ್ಲಿದೆ. ಅಲ್ಲಿನ ಭಕ್ತರು ಸುಮಾರು ವರ್ಷಗಳಿಂದ ಜಯತೀರ್ಥರ ಬೃಂದಾವನಕ್ಕೆ ಪೂಜೆಯನ್ನು ಸಲ್ಲಿಸಿ ಬರುತ್ತಿದ್ದಾರೆ.
ಆನೆಗೊಂದಿಯ ನವಬೃಂದಾವನ ಗಡ್ಡೆಯಲ್ಲಿ ಇರುವುದು ರಘುವರ್ಯ ತೀರ್ಥರ ಬೃಂದಾವನ ಎನ್ನುವುದು ಉತ್ತರಾಧಿ ಮಠದವರ ವಾದವಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ಕಲಬುರಗಿ ಹಾಗೂ ಮಳಖೇಡನಲ್ಲಿ ಎರಡು ಮಠಗಳಿಂದ ಪರ-ವಿರೋಧವಾಗಿ ಪ್ರತಿಭಟನೆಗಳು ನಡೆಯುತ್ತಿವೆ.