ಬೆಂಗಳೂರು: ಎಲೆಕ್ಷನ್ ಹತ್ತಿರವಿರುವ ಹೊತ್ತಿನಲ್ಲಿ ಮುಂಬೈ ಕರ್ನಾಟಕದ ಮಂದಿಗೆ ಮಹಾ ಸಿಹಿ ಸುದ್ದಿ ಸಿಗ್ತಿದೆ. ಹುಬ್ಬಳ್ಳಿ ಭಾಗದ ಜನರ ದಶಕಗಳ ಹೋರಾಟಕ್ಕೆ ಇದೀಗ ಬೆಲೆ ಸಿಗುತ್ತಿದೆ. ಎಷ್ಟೇ ಪ್ರಯತ್ನಪಟ್ಟರೂ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಗದ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿರುವಂತೆ ಕಾಣುತ್ತಿದೆ.
ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಹುತೇಕ ಇತ್ಯರ್ಥವಾಗುವ ಮುನ್ಸೂಚನೆ ಸಿಕ್ಕಿದ್ದು, ಇಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಬಿಜೆಪಿ ನಾಯಕರು ಮಹದಾಯಿ ನದಿ ವಿವಾದ ಸಂಬಂಧ ಮಹತ್ವದ ಘೋಷಣೆ ಹೊರಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
Advertisement
ಒಂದು ವೇಳೆ ಗೋವಾದಿಂದ ಮಹದಾಯಿ ನೀರು ಬಂದರೂ ಅದಕ್ಕೆ ಕರ್ನಾಟಕ ಭಾರೀ ಮೊತ್ತವನ್ನು ವ್ಯಯಿಸಬೇಕಾಗುತ್ತದೆ. ಮಹದಾಯಿ ನದಿ ಶುದ್ಧೀಕರಣಕ್ಕಾಗಿ ಗೋವಾ ಸರ್ಕಾರ 800 ಕೋಟಿ ರೂಪಾಯಿ ಸುರಿದಿದೆ. ಒಂದು ವೇಳೆ ಅಗತ್ಯವಿರುವ 7 ಟಿಎಂಸಿ ನೀರು ಬೇಕಾದರೂ ಕರ್ನಾಟಕದಿಂದ ಗೋವಾ ಪಾಲುಬಯಸುವ ಲಕ್ಷಣಗಳಿವೆ. 2 ವರ್ಷಗಳಲ್ಲಿ ಗೋವಾದಲ್ಲಿ ಆರ್ಥಿಕತೆಯ ಭಾಗವಾಗಿರೋ ಮೀನುಗಾರಿಕೆಯಲ್ಲಿ ಗಣನೀಯ ಇಳಿಕೆಯಾಗುವ ಸಾಧ್ಯೆತೆಗಳಿವೆ. ಮಹದಾಯಿ ನದಿ ವಿಚಾರದಲ್ಲಿ ಗೋವಾದಲ್ಲಿ ವಿದ್ಯಾರ್ಥಿಗಳು, ನಾಗರಿಕ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಇಂತಹ ಸಮಯದಲ್ಲಿ ತನ್ನ ಅತೀ ದೊಡ್ಡ ನದಿ ಮಹದಾಯಿ ನದಿಯ ನೀರನ್ನು ಕರ್ನಾಟಕಕ್ಕೆ ಹರಿಸುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
Advertisement
ಬುಧವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಿವಾಸದಲ್ಲಿ ನಡೆದ ಸಭೆಯಲ್ಲಿ 4 ದಶಕಗಳ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು. ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಗೋವಾ ಸಿಎಂ ಮನೋಹರ್ ಪರಿಕ್ಕರ್, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಪಿಯೂಶ್ ಗೋಯಲ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಸಭೆ ಬಳಿಕ ಮಾತಾಡಿದ ಯಡಿಯೂರಪ್ಪ, ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಗೋವಾ ಮುಖ್ಯಮಂತ್ರಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಅಂತಾ ಹೇಳಿದ್ದಾರೆ.
Advertisement
ಇಂದು ನಡೆಯುವ ಹುಬ್ಬಳ್ಳಿ ಪರಿವರ್ತನಾ ಸಮಾವೇಶದೊಳಗೆ ಅವರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರಾ ಅಥವಾ ಅಲ್ಲಿಯೇ ಘೋಷಣೆ ಮಾಡುತ್ತಾರಾ ಎಂಬುದು ತಿಳಿಯಬೇಕಿದೆ. ಆದರೆ ಅಮಿತ್ ಶಾ ಮನೆಯಿಂದ ಮೊದಲು ಹೊರಗೆ ಬಂದಿದ್ದು ಪರಿಕ್ಕರ್. ಎಲ್ಲೋ ಒಂದು ಕಡೆ ಪರಿಕ್ಕರ್ ಪೂರ್ಣ ಪ್ರಮಾಣದ ಒಪ್ಪಿಗೆ ಸೂಚಿಸಿಲ್ವಾ..? ಹೈಕಮಾಂಡ್ ಬಲವಂತಕ್ಕೆ ಒಪ್ಪಿಕೊಂಡ್ರಾ ಅನ್ನೋ ಪ್ರಶ್ನೆಗಳು ಉದ್ಭವಿಸುತ್ತವೆ.