ಈ ಸುದ್ದಿ ಪೂರ್ತಿ ಓದಿದ್ಮೇಲೆ ನೀವೆಲ್ಲ ಸೇರಿಕೊಂಡು ಆ ವಿಧಿಗೆ ಮತ್ತೆ ಶಾಪ ಹಾಕ್ತೀರಿ, ಆಫ್ ಕೋರ್ಸ್ ಹಾಕಲೇಬೇಕು. ಯಾಕಂದ್ರೆ, ಅಪ್ಪು ಸ್ಟಾರ್ ಅನ್ನೋದು ಜನಕ್ಕೆ ಗೊತ್ತಿತ್ತು. ಆದರೆ ಆ ಭಗವಂತನಿಗೆ ಅಪ್ಪು ಬರೀ ನಾಯಕನಟನಾಗಿ ಉಳಿದಿಲ್ಲ ಎನ್ನುವ ಸತ್ಯದ ಅರಿವಾಗಿತ್ತು. ದೊಡ್ಮನೆ ಹುಡುಗ ಯುದ್ದ ಮಾಡದೇ ಕರುನಾಡೆಂಬ ರಾಜ್ಯ ಗೆದ್ದಿದ್ದಾನೆ, ರಾಜನಾಗುವ ಅವಕಾಶ ಇದ್ದರೂ ಸಾಮಾನ್ಯನಂತೆ ಬದುಕುತ್ತಿದ್ದಾನೆನ್ನುವ ಸಂಗತಿಯೂ ದೇವರಿಗೆ ತಿಳಿದಿತ್ತು. ದಾನ ಧರ್ಮದಲ್ಲಿ, ಕಷ್ಟಕ್ಕೆ ಸ್ಪಂದಿಸುವುದರಲ್ಲಿ, ಸಹಾಯಕ್ಕೆ ಧಾವಿಸುವುದರಲ್ಲಿ ನನಗಿಂತ ಒಂದು ಹೆಜ್ಜೆ ಮುಂದೆ ಇದ್ದಾನೆ. ಈ ಕಲಿಯುಗದಲ್ಲಿ ದಾನಶೂರ ಕರ್ಣನಾಗಿ, ದೇವತಾ ಮನುಷ್ಯನಾಗಿ ಮುನ್ನಡೆಯುತ್ತಿದ್ದಾನೆನ್ನುವ ವಿಚಾರವೂ ಗೊತ್ತಾಗಿತ್ತು. ಇಷ್ಟಾದ್ರೂ ಕೂಡ ಅಪ್ಪು ಮೇಲೆ ಆ ಭಗವಂತ ಕರುಣೆ ತೋರದೇ ಏಕಾಏಕಿ ಹೊತ್ತೊಯ್ದುಬಿಟ್ಟ. ಆದ್ರೀಗ ಆ ಭಗವಂತನಿಗೆ ಅರಿವಾಗಿದೆ ನಾನು ಕುಣಿಕೆ ಸರಿದಿದ್ದು ಸಾಕ್ಷಾತ್ ಪರಮಾತ್ಮನಿಗೆ ಅಂತ.
ಈ ಕ್ಷಣಕ್ಕೆ ಅಪ್ಪು ಬರೀ ನಟರಾಗಿ ಉಳಿದಿಲ್ಲ ಬದಲಾಗಿ ದೇವರ ಸ್ಥಾನದಲ್ಲಿ ಕೂತಿದ್ದಾರೆ. ಅವರ ಅಭಿಮಾನಿಗಳ ಹಾದಿಯಾಗಿ ಕರುನಾಡಿನ ಎಷ್ಟೋ ಜನ ಅಪ್ಪುನಾ (Puneeth Rajkumar) ಮನೆದೇವರಂತೆ ಪೂಜಿಸ್ತಿದ್ದಾರೆ. ಒಳ್ಳೆ ಕೆಲಸಕ್ಕೆ ಕೈ ಹಾಕುವ ಮುನ್ನ ಹಲವರು ಅಪ್ಪುನಾ ನೆನೆಯುತ್ತಿದ್ದಾರೆ. ಕೆಲವರು ಪರಮಾತ್ಮನ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುತ್ತಿದ್ದಾರೆ. ಆದರೆ ಈ ಹಾಸ್ಟೆಲ್ ಹುಡುಗರಿಗೆ (Hostel Hudugaru Bekagiddare) ಅಂಜನಿಪುತ್ರನ ಆಶೀರ್ವಾದ ಅಂದೇ ಸಿಕ್ಕಿತ್ತು. ಅಚ್ಚರಿ ಅಂದರೆ ಹಾಸ್ಟೆಲ್ ಹುಡುಗರಿಗೆ ಒಳ್ಳೆದಾಗಬೇಕು ಅಂತ ಸ್ವತಃ ಪವರ್ ಸ್ಟಾರ್ ಪರಮಾತ್ಮನ ಮೊರೆ ಹೋಗಿದ್ದರು. ವಿಘ್ನವಿನಾಶಕನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದದ ಜೊತೆಗೆ ಹಾಸ್ಟೆಲ್ ಹುಡುಗರನ್ನು ಭೇಟಿ ಮಾಡಿದ್ದರು. ಅಷ್ಟಕ್ಕೂ, ಆ ಹಾಸ್ಟೆಲ್ ಹುಡುಗರು ಬೇರಾರು ಅಲ್ಲ ಜುಲೈ 21ರಂದು ನಿಮ್ಮ ಮುಂದೆ ಹಾಜರಾಗಲಿರುವ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಟೀಮ್
`ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಯುವನಿರ್ದೇಶಕ ನಿತಿನ್ ಕೃಷ್ಣಮೂರ್ತಿ (Nitin Krishnamurthy) ಡೈರೆಕ್ಟ್ ಮಾಡಿರುವ ಚಿತ್ರ. ಸಂಪೂರ್ಣ ಹೊಸಬರೇ ತುಂಬಿರುವ ಈ ಚಿತ್ರದಲ್ಲಿ, ಮೋಹಕ ತಾರೆ ರಮ್ಯಾ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಲೂಸಿಯಾ ಪವನ್, ದಿಗಂತ್, ಶೈನ್ ಶೆಟ್ಟಿ ಮಿಂಚಿರೋದ್ರಿಂದ ಹಾಸ್ಟೆಲ್ ಹುಡುಗರು ಸಾಕಷ್ಟು ಸೌಂಡ್ ಮಾಡ್ತಿದ್ದಾರೆ. ಇವತ್ತು ಈ ಚಿತ್ರ ಇಷ್ಟೊಂದು ಸದ್ದು ಸುದ್ದಿ ಮಾಡ್ತಿರುವುದಕ್ಕೆ ಮೊದಲ ಕಾರಣ ಅಪ್ಪು ಅಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಅವತ್ತು ಈ ಚಿತ್ರತಂಡ ಡೇಟ್ಸ್ ಕೇಳಿದಾಗ ಬರೀ ಲಯನ್ ಡೇಟ್ಸ್‍ನ ಕೊಟ್ಟು ಕಳುಹಿಸದೇ ಅಪ್ಪು ಡೇಟ್ ಕೊಟ್ಟರು. ಸದಾಶಿವನಗರದಲ್ಲಿರುವ ತಮ್ಮ ಆಫೀಸ್‍ಗೆ ಬರುವಂತೆ ತಿಳಿಸಿದರು. ಅವರೆಲ್ಲರು ಬಂದು ಆಫೀಸ್‍ನಲ್ಲಿ ಹಾಜರಾಗುವಷ್ಟರಲ್ಲಿ ಸದಾಶಿವನಗರದಲ್ಲಿದ್ದ ಗಣೇಶನ ಸನ್ನಿಧಿಗೆ ಹೋಗಿ ಪುನೀತ್ ಪೂಜೆ ಮಾಡಿಸಿದ್ದಾರೆ. ಅಲ್ಲಿಂದ ಬಂದು ಇಡೀ ಟೀಮ್‍ಗೆ ಪ್ರಸಾದ ನೀಡಿ ಪ್ರೋಮೋ ಶೂಟ್‍ನಲ್ಲಿ ಭಾಗಿಯಾಗಿ ಫಸ್ಟ್ ಲುಕ್ ಲಾಂಚ್ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ:ಅಪಘಾತದಿಂದ ಚೇತರಿಸಿಕೊಂಡ್ರಾ ಸಾಯಿ ಧರಂ ತೇಜ್- ನಟ ಹೇಳೋದೇನು?
ಫಸ್ಟ್ ಲುಕ್ ಬಿಡುಗಡೆ ಮಾಡಿಕೊಡಲು ಒಪ್ಪಿಕೊಂಡಿದ್ದ ಅಪ್ಪು ನೇರವಾಗಿ ಪೋಸ್ಟರ್ ರಿಲೀಸ್ ಮಾಡಿಕೊಡಬಹುದಿತ್ತು. ಆದರೆ, ಪ್ರತಿಭಾವಂತರ ತಂಡವೊಂದು ಹೊಸ ಪ್ರಯೋಗ ಮಾಡ್ತಿರುವುದನ್ನು ಗಮನಿಸಿದ ಪವರ್ ಸ್ಟಾರ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಈ ಸತ್ಯ ಇಲ್ಲಿವರೆಗೂ ಯಾರಿಗೂ ಗೊತ್ತಿರಲಿಲ್ಲ. ಇತ್ತೀಚೆಗೆ ದೇವಸ್ಥಾನದ ಅರ್ಚಕರೇ ಈ ಸತ್ಯವನ್ನ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಅಂದ್ಹಾಗೇ, ಕಣ್ಣಮುಂದಿನ ಉದಾಹರಣೆ ಅಷ್ಟೇ, ಇಂತಹ ಎಷ್ಟೋ ಘಟನೆಗಳಿಗೆ ಅಪ್ಪು ಸಾಕ್ಷಿಯಾಗಿದ್ದಾರೆ. ಪ್ರತಿಭಾವಂತರನ್ನ ಪ್ರೋತ್ಸಾಹಿಸಿ ಬೆಂಬಲಿಸಿದ್ದಾರೆ. ತಮಗಷ್ಟೇ ಅಲ್ಲ ತಮ್ಮ ಸುತ್ತಮುತ್ತಲಿನವರೆಲ್ಲರಿಗೂ ಒಳ್ಳೆದಾಗಬೇಕು, ಎಲ್ಲರೂ ನೆಮ್ಮದಿಯಿಂದ- ಸಂತೋಷದಿಂದ ಬಾಳಬೇಕು, ಎಲ್ಲರೂ ತಮ್ಮಂತೆಯೇ ಬೆಳಿಬೇಕು ಅಂತ ಹಾರೈಸುವ ದೊಡ್ಡಮನಸ್ಸಿರುವ ದೊಡ್ಮನೆ ರಾಜಕುಮಾರನ್ನ ಆ ದೇವರು ಇಷ್ಟು ಬೇಗ ಕಿತ್ಕೊಂಡಿದ್ದು ನಮ್ಮೆಲ್ಲರ ದೌರ್ಭಾಗ್ಯವೇ ಸರೀ.
ಎನಿವೇ, ಅಪ್ಪು ಆಶೀರ್ವಾದ ಪಡೆದು ನಿಮ್ಮೆಲ್ಲರಿಗೂ ದರ್ಶನ ನೀಡಲು ಬರುತ್ತಿರುವ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಂಡವನ್ನ ನೀವೆಲ್ಲರೂ ಪ್ರೋತ್ಸಾಹಿಸಬೇಕಿದೆ. ಅಪ್ಪು ಸ್ಥಾನದಲ್ಲಿ ನಿಂತು ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಟ್ರೇಲರ್ ಲಾಂಚ್ ಮಾಡಿಕೊಟ್ಟಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಬೆನ್ನೆಲುಬಾಗಿ ನಿಂತಿದ್ದಾರೆ. ಸಮಸ್ತ ದೊಡ್ಮನೆ ರಾಜಕುಮಾರನ ಅಭಿಮಾನಿ ದೇವರುಗಳು ಹಾಸ್ಟೆಲ್ ಹುಡುಗರಿಗೆ ಸಪೋರ್ಟ್ ಮಾಡ್ತಿದ್ದಾರೆ. ಸರಿಸುಮಾರು 500 ಜನ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದು, ಕನ್ನಡ ಕಲಾಭಿಮಾನಿಗಳಿಗೆ ಮಸ್ತ್ ಮನರಂಜನೆ ನೀಡಲು ಬರ್ತಿದ್ದಾರೆ. ವರುಣ್ ಸ್ಟುಡಿಯೋಸ್ (Varun Studios) ಹಾಗೂ ಗುಲ್‍ಮೋಹರ್ ಫಿಲ್ಮಂಸ್ ಬ್ಯಾನರ್ ಅಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರಕ್ಕಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ ಪರಂವಃ ಬ್ಯಾನರ್ ಅಡಿ ಈ ಸಿನಿಮಾನ ಪ್ರಸೆಂಟ್ ಮಾಡಲಾಗ್ತಿದ್ದು, ಇದೇ ಜುಲೈ 21ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ತರಲಾಗ್ತಿದೆ.
Web Stories