Connect with us

Latest

ಪೋಷಕರು ಮನೆಯಿಂದ ಹೊರಹಾಕಿದ್ದರಿಂದ ನಡುರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ!

Published

on

Share this

ರಾಂಚಿ: ಅಪ್ರಾಪ್ತೆಯೊಬ್ಬಳು ನಡುರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆಯೊಂದು ಜಾರ್ಖಂಡ್ ನ ಖರ್ಸವನ್ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ 17 ವರ್ಷದ ಹುಡುಗಿಯೊಬ್ಬಳು ತನ್ನದೇ ಗ್ರಾಮದ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಳು. ಅಲ್ಲದೇ ಆ ವ್ಯಕ್ತಿಯಿಂದಾಗಿ ಆಕೆ ಗರ್ಭ ಧರಿಸಿದ್ದಳು. ಈ ವಿಚಾರ ಹುಡುಗಿಯ ಪೋಷಕರಿಗೆ ತಿಳಿದು, ನಮ್ಮ ಮರ್ಯಾದೆ ಹಾಳಾಗುತ್ತೆ ಅಂತ ಹೇಳಿ ಮನೆಯಿಂದ ಹೊರ ಹಾಕಿದ್ದರು. ಹೀಗಾಗಿ ಮನೆ, ಹೆತ್ತವರಿಂದ ದೂರವಾಗಿ ರಸ್ತೆ ಬದಿಯಲ್ಲೇ ವಾಸಿಸುತ್ತಿದ್ದಳು.

ಕಳೆದ ನಾಲ್ಕು ತಿಂಗಳಿನಿಂದ ಈಕೆ ಬೀದಿ ಬೀದಿ ಅಲೆದಾಡುತ್ತಿರುವುದನ್ನು ನೋಡಿದ್ದೇವೆ ಅಂತ ಸ್ಥಳಿಯರು ಇದೀಗ ಹೇಳುತ್ತಿದ್ದಾರೆ. ಈಕೆ ಕಳೆದ ಕೆಲ ದಿನಗಳ ಹಿಂದೆ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಸ್ಥಳೀಯ ಆಸ್ಪತ್ರೆಗೆ ತೆರಳಿದ್ದಳು. ಆದ್ರೆ ಆಕೆಯ ಜೊತೆ ಯಾರು ಇಲ್ಲವೆಂದು ಹೇಳಿ ಆಸ್ಪತ್ರೆ ಸಿಬ್ಬಂದಿ ಆಕೆಯನ್ನು ದಾಖಲು ಮಾಡಿಕೊಂಡಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಆಕೆ ಮರುದಿನ ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ಆಸ್ಪತ್ರೆಯಿಂದ 30 ಮೀಟರ್ ದೂರದಲ್ಲಿ ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯ ಮಹಿಳೆಯರು ಸ್ಥಳಕ್ಕೆ ದೌಡಾಯಿಸಿ ತಾಯಿ-ಮಗುವನ್ನು ರಕ್ತದ ಮಡುವಿನಿಂದ ರಕ್ಷಿಸಿದ್ದಾರೆ.

ಸ್ಥಳೀಯ ನಿವಾಸಿ 50 ವರ್ಷದ ಓಂ ಪ್ರಕಾಶ್ ಶರ್ಮಾ ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ, ನಾನು ಮುಂಜಾನೆ ಈ ರಸ್ತೆಯಲ್ಲಿ ಬರುತ್ತಿರುವಾಗ ಮಗು ಮತ್ತು ತಾಯಿ ಅಳುತ್ತಿರೋದನ್ನು ಗಮನಿಸಿದೆ. ಕೂಡಲೇ ಆ ರಸ್ತೆಯಲ್ಲಿ ವಾಹನಗಳು ಬರದಂದೆ ತಡೆದೆ. ಹೀಗೆ ಯಾವುದೇ ಅನಾಹುತವಾಗದಂತೆ ತಾಯಿ-ಮಗುವನ್ನು ರಕ್ಷಿಸಿದೆ. ಅಲ್ಲದೇ ಅಲ್ಲೇ ಇದ್ದ ಆಸ್ಪತ್ರೆಗೆ ತೆರಳಿ ತಾಯಿ-ಮಗುವನ್ನು ರಕ್ಷಿಸುವಂತೆ ಕೇಳಿಕೊಂಡೆ. ಆದ್ರೆ ಇದನ್ನು ಆಸ್ಪತ್ರೆ ಸಿಬ್ಬಂದಿ ತಿರಸ್ಕರಿಸಿದ್ದಾರೆ. ಅಲ್ಲದೇ ಆಕೆಯ ಜೊತೆ ಯಾರೊಬ್ಬರೂ ಇಲ್ಲ. ಹೀಗಾಗಿ ನಾವು ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುವುದಿಲ್ಲ ಅಂತ ಹೇಳಿದ್ದಾರೆ. ಆ ಬಳಿಕ ಪೊಲೀಸರಿಗೆ ಮಾಹಿತಿ ರವಾನಿಸಿರುವುದಾಗಿ ಅವರು ಹೇಳಿದ್ರು. ಪೊಲೀಸರಿಗೆ ಮಾಹಿತಿ ನಿಡಿದ ಬಳಿಕ ಓಂ ಪ್ರಕಾಶ್ ಆಟೋ ವ್ಯವಸ್ಥೆ ಮಾಡಿ ಸ್ಥಳೀಯ ಮಹಿಳೆಯರು ಸೇರಿ ಅದೇ ಆಸ್ಪತ್ರೆಗೆ ಬಾಣಂತಿಯನ್ನು ದಾಖಲಿಸಿದರು.

ಆಸ್ಪತ್ರೆಯ ವೈದ್ಯ ಡಾ.ಲಲಿತ್ ಕಶ್ಯಪ್, ಹುಡುಗಿಯ ಆರೋಪವನ್ನು ತಳ್ಳಿ ಹಾಕಿದ್ದು, ಆಸ್ಪತ್ರೆಯಲ್ಲಿ ಹುಡುಗಿ ಬಂದ ವೇಳೆ ಇಬ್ಬರು ನರ್ಸ್ ಗಳು ಮಾತ್ರ ಇದ್ದರು. ಅವರಿಬ್ಬರೂ ಬ್ಯುಸಿಯಾಗಿದ್ದರು. ಹೀಗಾಗಿ ಸ್ವಲ್ಪ ಸಮಯ ಕಾಯುವಂತೆ ಹೇಳಲಾಗಿತ್ತು. ಆದ್ರೆ ಆಕೆ ಆಸ್ಪತ್ರೆಯಿಂದ ಹೊರಹೋಗಿದ್ದಾಳೆ ಅಂತ ಅವರು ಹೇಳಿದ್ದಾರೆ.

ಸದ್ಯ ತಾಯಿ-ಮಗುವನ್ನು ಜಾರ್ಖಂಡ್ ನ ಮಹಿಳಾ ಸುರಕ್ಷಾ ಗೃಹಕ್ಕೆ ಕರೆದೊಯ್ಯಲಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಅಂತ ಅಲ್ಲಿನ ಮುಖ್ಯಸ್ಥ ಡಾ. ಲಖಿಂದ್ರ ಹನ್ಸದ್ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement